ಭಾನುವಾರ, ಫೆಬ್ರವರಿ 16, 2020
25 °C

ಸೇವಾಲಾಲ್ ಜಯಂತಿಗೆ ಸಕಲ ಸಿದ್ಧತೆ: 14ರಂದು ಜಾತ್ರೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನ್ಯಾಮತಿ: ಬಂಜಾರ ಸಮುದಾಯದ ಜಗದ್ಗುರು ಸಂತ ಸೇವಾಲಾಲ್ ಅವರ 281ನೇ ಜಯಂತ್ಯುತ್ಸವ ಫೆ. 13ರಿಂದ 15ರವರೆಗೆ ನಡೆಯಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ.

ದೇಶದ ನಾನಾ ಭಾಗಗಳಿಂದ ಸೇವಾಲಾಲ್ ಭಕ್ತರು ಇಲ್ಲಿಗೆ ಬರುತ್ತಾರೆ. ಮಾಲಾಧಾರಿಗಳು ಪಾದಯಾತ್ರೆ ಮೂಲಕ ಬರುತ್ತಾರೆ. ಮೂಲಸೌಲಭ್ಯ, ಸಾರಿಗೆ, ವಸತಿ, ಊಟ, ಶೌಚಾಲಯ, ಬೆಳಕಿನ ವ್ಯವಸ್ಥೆ ಒದಗಿಸಿ ಜಯಂತಿಯನ್ನು ಯಶಸ್ವಿಗೊಳಿಸಲು ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಭಾಯಗಡ್ ಮತ್ತು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮಗಳು ಮುಂದಾಗಿವೆ.

ಸುಂದರ ಪರಿಸರದಲ್ಲಿರುವ ಸೇವಾಲಾಲ್‌ ಜನ್ಮಸ್ಥಾನ ಸೂರಗೊಂಡನಕೊಪ್ಪದಲ್ಲಿ ಈಗಾಗಲೇ ಅಭಿವೃದ್ದಿ ಕಾರ್ಯಗಳು ನಡೆದಿವೆ. ಕಲ್ಯಾಣ ಮಂಟಪ, ದಾಸೋಹ ಭವನ, ಸಭಾ ಭವನ, ಬಂಜಾರ ಸಂಸ್ಕೃತಿ ಬಿಂಬಿಸುವ ಮತ್ತು ಸೇವಾಲಾಲ್ ಅವರ ಪವಾಡ ಬಿಂಬಿಸುವ ಕಲಾಕೃತಿಗಳು, ವಸತಿಗೃಹಗಳು, ಪ್ರವೇಶದ್ವಾರ ನಿರ್ಮಾಣ ಕಾರ್ಯಗಳು ನಡೆದಿವೆ. ಇದು ಈಗ ಪ್ರವಾಸಿಗರ ಸ್ಥಳವಾಗಿದೆ.

ಫೆ. 13ರಿಂದ ವಿವಿಧ ಧಾರ್ಮಿಕ, ಬಂಜಾರ ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. 14ರಂದು ನಡೆಯುವ ಜಾತ್ರೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಉಪ ಮುಖ್ಯಮಂತ್ರಿಗಳು, ಸಚಿವರು, ಬಂಜಾರ ಸಮುದಾಯದ ಶಾಸಕರು, ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

‘ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು, ಸ್ಥಳಕ್ಕೆ ಅಧಿಕಾರಿಗಳನ್ನು ನಿಯೋಜಿಸಿ ಕಾಮಗಾರಿಗಳನ್ನು ಪರಿಶೀಲಿಸಿದ್ದಾರೆ. ಶಾಶ್ವತ ಯೋಜನೆಗಳು ಕೆರೆ ಪುನಶ್ಚೇತನ, ಸಂಪ‍ರ್ಕ ರಸ್ತೆ, 40 ಎಕೆರೆ ಪ್ರದೇಶದಲ್ಲಿ ಮಳೆ ನೀರು ಸಂಗ್ರಹಕ್ಕೆ ದೊಡ್ಡಕೆರೆ ನಿರ್ಮಾಣ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ನಾಲ್ಕು ಓವರ್‌ಹೆಡ್‌ ಟ್ಯಾಂಕ್ ನಿರ್ಮಾಣಕ್ಕೆ ಸೂಚನೆ ನೀಡಿದ್ದಾರೆ’ ಎಂದು ಸಮಿತಿಯ ಅಧ್ಯಕ್ಷ ರುದ್ರಪ್ಪ ಎಂ.ಲಮಾಣಿ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು