ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆಗೆ ₹ 50,000 ದರ; ಬೆಳೆಗಾರರಲ್ಲಿ ಮಂದಹಾಸ

Published 15 ಸೆಪ್ಟೆಂಬರ್ 2023, 6:42 IST
Last Updated 15 ಸೆಪ್ಟೆಂಬರ್ 2023, 6:42 IST
ಅಕ್ಷರ ಗಾತ್ರ

ಚನ್ನಗಿರಿ: ಕೆಲವು ದಿನಗಳಿಂದ ಅಡಿಕೆ ದರವು ₹ 50,000 ತಲುಪಿದೆ. ಇದರಿಂದ ಉತ್ಸಾಹಿತರಾದ ಬೆಳೆಗಾರರು ದಾಸ್ತಾನು ಮಾಡಿದ್ದ ಅಡಿಕೆ ಮಾರಾಟ ಮಾಡಲು ಮುಂದಾಗಿದ್ದಾರೆ. ಜೊತೆಗೆ ಹೊಸ ಅಡಿಕೆ ಕೊಯ್ಲು ಭರದಿಂದ ಸಾಗಿದೆ. ಒಟ್ಟಾರೆ ಬೆಲೆ ಹೆಚ್ಚಳ ಅಡಿಕೆ ಬೆಳೆಗಾರರಲ್ಲಿ ಮಂದಹಾಸ ಮೂಡಿಸಿದೆ.

ಸಾಮಾನ್ಯವಾಗಿ ಹೊಸ ರಾಶಿ ಅಡಿಕೆ ಮಾರುಕಟ್ಟೆಗೆ ಬಂದ ಮೇಲೆ ಅಡಿಕೆ ದರದಲ್ಲಿ ಕುಸಿತ ಕಾಣುವ ಸಾಧ್ಯತೆ ಇರುತ್ತದೆ. ಹೊಸ ಅಡಿಕೆ ಒಂದು ತಿಂಗಳಿಂದ ಮಾರುಕಟ್ಟೆಗೆ ಬರುತ್ತಿದ್ದು, ಪ್ರಸ್ತುತ ಹೊಸ ಅಡಿಕೆ ದರ ಕ್ವಿಂಟಲ್‌ಗೆ ಗರಿಷ್ಠ ಬೆಲೆ ₹ 49,581 ಇದೆ. ಕನಿಷ್ಠ ₹ 42,051 ಇದೆ. ಸರಾಸರಿ ₹ 46,560ಕ್ಕೆ ಮಾರಾಟವಾಗುತ್ತಿದೆ.

ಹಳೆಯ ರಾಶಿ ಅಡಿಕೆ ದರ ಕ್ವಿಂಟಲ್‌ಗೆ ಗರಿಷ್ಠ ₹ 50,379, ಕನಿಷ್ಠ ₹ 46,512 ಇದೆ. ಸರಾಸರಿ ₹ 49,237ಕ್ಕೆ ಮಾರಾಟವಾಗುತ್ತಿದೆ. ಹಳೆಯ ರಾಶಿ ಮತ್ತು ಹೊಸ ಅಡಿಕೆ ದರದ ನಡುವೆ ಅಷ್ಟೊಂದು ವ್ಯತ್ಯಾಸ ಕಂಡು ಬರುತ್ತಿಲ್ಲ. ಈ ಕಾರಣದಿಂದಲೇ ಅಡಿಕೆ ಬೆಳೆಗಾರರು ಬೇಗ ಬೇಗ ಅಡಿಕೆ ಕೊಯ್ಲು ಮಾಡಿ ಅಡಿಕೆ ಮಾರಾಟ ಮಾಡಲು ಮುಂದಾಗಿದ್ದಾರೆ.

‘ಭೂತಾನ್ ಅಡಿಕೆ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿತ್ತು. ಇದರಿಂದ ಅಡಿಕೆ ದರ ಕುಸಿಯುತ್ತದೆ ಎಂಬ ಭೀತಿ ಬೆಳೆಗಾರರನ್ನು ಆವರಿಸಿತ್ತು. ಈಗ ಕೇಂದ್ರ ಸರ್ಕಾರ ಆಮದು ಅಡಿಕೆಯ ಮೇಲೆ ಕ್ವಿಂಟಲ್‌ಗೆ ₹ 351 ಶುಲ್ಕ ವಿಧಿಸಿದ್ದು, ಸ್ಥಳೀಯ ತೆರಿಗೆಗಳು ಸೇರಿ ₹ 361 ಶುಲ್ಕವಾಗುತ್ತದೆ. ಹಾಗೆಯೇ ಆಮದು ಅಡಿಕೆಯಲ್ಲಿ ಗುಣಮಟ್ಟ ಇರುವುದಿಲ್ಲ. ಗುಟ್ಕಾ ಕಂಪನಿಯವರು ಗುಟ್ಕಾ ತಯಾರಿಸಲು ಹೆಚ್ಚಾಗಿ ಗುಣಮಟ್ಟದ ಅಡಿಕೆಯನ್ನು ಉಪಯೋಗಿಸುವುದರಿಂದ ದೇಶಿಯ ಅಡಿಕೆಗೆ ಬೇಡಿಕೆ ಹೆಚ್ಚಿದೆ. ಈ ಕಾರಣದಿಂದಲೂ ಅಡಿಕೆ ದರ ₹ 50,000 ಮುಟ್ಟಿದೆ’ ಎಂದು ತುಮ್ಕೋಸ್ ಅಧ್ಯಕ್ಷ ಆರ್.ಎಂ. ರವಿ ತಿಳಿಸಿದರು.

‘ಸಾಮಾನ್ಯವಾಗಿ ₹ 45,000 ಅಡಿಕೆ ದರ ಸಿಕ್ಕರೂ ಅಡಿಕೆ ಬೆಳೆಗಾರರಿಗೆ ಉತ್ತಮ ದರ ಸಿಕ್ಕಂತಾಗುತ್ತದೆ. ಮೂರು ತಿಂಗಳಿಂದ ಅಡಿಕೆ ದರದಲ್ಲಿ ಸ್ಥಿರತೆ ಕಂಡಿದೆ. ತುಮ್ಕೋಸ್‌ನಲ್ಲಿ ಪ್ರತಿ ದಿನ 3,000 ಚೀಲ ಅಡಿಕೆಯನ್ನು ಬೆಳೆಗಾರರು ಮಾರಾಟ ಮಾಡುತ್ತಿದ್ದಾರೆ. ಇದೇ ರೀತಿ ದರ ಇನ್ನೆರಡು ತಿಂಗಳು ಮುಂದುವರಿದರೆ ಅಡಿಕೆ ಬೆಳೆಗಾರರು ಅಧಿಕ ಆದಾಯವನ್ನು ಗಳಿಸುವಂತಾಗುತ್ತದೆ’ ಎಂದು ಆರ್.ಎಂ. ರವಿ ತಿಳಿಸಿದರು.

‘ನಮ್ಮದು ಐದು ಎಕರೆ ಅಡಿಕೆ ತೋಟವಿದ್ದು, ಇಂತಹ ಮಳೆ ಕೊರತೆಯ ನಡುವೆಯೂ 45ರಿಂದ 50 ಕ್ವಿಂಟಲ್ ಇಳುವರಿ ಬಂದಿದೆ. ₹ 46,000ಕ್ಕೆ ಕ್ವಿಂಟಲ್ ಅಡಿಕೆ ಮಾರಾಟ ಮಾಡಿದ್ದು, ₹ 20 ಲಕ್ಷಕ್ಕಿಂತ ಹೆಚ್ಚು ಆದಾಯ ಬಂದಿದೆ. ಎಲ್ಲ ರೀತಿಯ ಖರ್ಚು ಕಳೆದು ₹ 12 ಲಕ್ಷಕ್ಕಿಂತ ಹೆಚ್ಚು ಲಾಭ ಬಂದಿದೆ. ಇದೇ ರೀತಿ ಮೂರು ತಿಂಗಳು ಅಡಿಕೆ ದರ ಸ್ಥಿರವಾಗಿದ್ದರೆ ಅಡಿಕೆ ಬೆಳೆಗಾರರು ಇನ್ನೂ ಹೆಚ್ಚಿನ ಆದಾಯವನ್ನು ಪಡೆಯಬಹುದಾಗಿದೆ’ ಎನ್ನುತ್ತಾರೆ ಮಾವಿನಕಟ್ಟೆ ಗ್ರಾಮದ ಅಡಿಕೆ ಬೆಳೆಗಾರರಾದ ಪುನೀತ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT