ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಾನದಂತಿದೆ ಆವರಗೆರೆ ವಸತಿನಿಲಯ

ಪರಿಶಿಷ್ಟ ವರ್ಗಗಳ ಮೆಟ್ರಿಕ್‌ ನಂತರದ ಬಾಲಕರ ವಸತಿನಿಲಯದಲ್ಲಿ ಮೇಲ್ವಿಚಾರಕರ ಕೈಚಳಕ
Last Updated 29 ಜೂನ್ 2019, 19:30 IST
ಅಕ್ಷರ ಗಾತ್ರ

ದಾವಣಗೆರೆ: ಒಳಗೆ ಕಾಲಿಡುತ್ತಿದ್ದಂತೆ ‘ಅನ್ನದೊಂದಿಗೆ ಅರಿವು’ ಎಂಬ ಸಾಲು ಸ್ವಾಗತಿಸುತ್ತದೆ. ಒಳಹೊಕ್ಕ ಮೇಲೆ ಈ ಸಾಲನ್ನು ಸಮರ್ಥಿಸುವಂತಿವೆ ಇಲ್ಲಿನ ತರಕಾರಿ ತೋಟ, ಹಣ್ಣಿನ ತೋಟಗಳು.

ಇದು ಆವರಗೆರೆಯಲ್ಲಿ ಇರುವ ಪರಿಶಿಷ್ಟ ವರ್ಗಗಳ ಮೆಟ್ರಿಕ್‌ ನಂತರದ ಬಾಲಕರ ವಸತಿನಿಲಯ. ಒಬ್ಬ ಅಧಿಕಾರಿ ಬದ್ಧತೆ ಹೊಂದಿದ್ದರೆ ಹೇಗೆ ಸಕಾರಾತ್ಮಕ ಬದಲಾವಣೆಗಳನ್ನು ತರಬಹುದು ಎಂಬುದಕ್ಕೆ ಸಾಕ್ಷಿಯಂತಿದೆ ಈ ವಸತಿನಿಲಯ.

ಬಾಳೆತೋಟದಲ್ಲಿ ಬೆಳೆದ ಒಂದು ಬಾಳೆಗೊನೆಯನ್ನು ಬಾಡಾ ಕ್ರಾಸ್‌ನಲ್ಲಿ ಇರುವ ಅಂಧ ಮಕ್ಕಳ ಆಶ್ರಮಕ್ಕೆ ಒಯ್ದು ಹಂಚಿದ್ದಲ್ಲದೇ ಆಶ್ರಮದ ಸುತ್ತ ಸ್ವಚ್ಛತೆ ಮಾಡಿ ಬಂದಿದ್ದರು ಇಲ್ಲಿನ ಮೇಲ್ವಿಚಾರಕರು ಮತ್ತು ವಿದ್ಯಾರ್ಥಿಗಳು.

ಏನೇನಿದೆ ಇಲ್ಲಿ?: 30ಕ್ಕೂ ಅಧಿಕ ಬಾಳೆಗಿಡಗಳಿವೆ. ಈಗ ಬಹುತೇಕವು ಗೊನೆ ಬಿಟ್ಟಿವೆ. ಇದರ ಜತೆಗೆ ಮೆಂತೆಸೊಪ್ಪು, ಜವಾರಿ ಪುದಿನ, ಹರಿವೆ ಸೊಪ್ಪು ಬೆಳೆಯಲಾಗಿದೆ. ಟೊಮೆಟೊ ಗಿಡ ಹಾಕಲಾಗಿದೆ. ಬೆಂಡೆ, ನುಗ್ಗೆ, ಬದನೆ ಮುಂತಾದ ತರಕಾರಿ ಗಿಡಗಳನ್ನೂ ಬೆಳೆಯಲಾಗಿದೆ. ಇದಲ್ಲದೇ ನಂದಬಟ್ಟಲು, ಸಂಪಿಗೆ, ಬಸವನಪಾದ ಹೂವು, ಗುಲಾಬಿ ಇನ್ನಿತರ ಹೂ ಗಿಡಗಳು, ಅಲಂಕಾರಿಕ ಗಿಡಗಳು, ಚೆರ್ರಿ, ಮಾವು, ಚಳ್ಳೆಹಣ್ಣು, ಸೀತಾಫಲ, ಪಪ್ಪಾಯಿ ಮುಂತಾದ ಹಣ್ಣಿನ ಮರ–ಗಿಡಗಳೂ ಇವೆ.

ವಸತಿನಿಲಯದ ಸಹಾಯಕರಾದ ಆದರ್ಶ, ಯೋಗೀಶ್ವರಪ್ಪ, ಮಂಜುಳಾ, ಸರಿತಾ, ವೀರೇಶ್ ಹಾಗೂ ವಿದ್ಯಾರ್ಥಿಗಳನ್ನು ಬಳಸಿಕೊಂಡು ವಸತಿನಿಲಯ ಮೇಲ್ವಿಚಾರಕ ಬಿ.ಜಿ. ಸೋಮೇಶ್ವರ ಸ್ವಾಮಿ ಇವೆಲ್ಲವನ್ನು ಬೆಳೆದಿದ್ದಾರೆ.

ಸ್ವಚ್ಛ ನಿಲಯ: ವಸತಿನಿಲಯಗಳಲ್ಲಿ ಸ್ವಚ್ಛತೆ ಇಲ್ಲ, ಅಡುಗೆ ಸರಿಯಿಲ್ಲ ಎಂಬ ದೂರುಗಳು ಬರುವುದೇ ಹೆಚ್ಚು. ಆದರೆ, ಇಲ್ಲಿನ 10 ಕೊಠಡಿಗಳು ಸ್ವಚ್ಛವಾಗಿವೆ. ಉತ್ತಮ ಆಹಾರ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಬೇಕಾದ ಸುಸಜ್ಜಿತ ಗ್ರಂಥಾಲಯ, ಜಿಮ್‌, ಆಟವಾಡಲು ಕ್ರಿಕೆಟ್‌, ಶಟ್ಲ್‌ ಬ್ಯಾಡ್ಮಿಂಟನ್‌, ವಾಲಿಬಾಲ್‌, ಚೆಸ್‌, ಕ್ಯಾರಂ ಪರಿಕರಗಳು ಇವೆ.

‘ಸರ್ಕಾರದಿಂದ ಬರುವ ಸವಲತ್ತುಗಳನ್ನು ಒದಗಿಸುವುದರ ಜತೆಗೆ ವಿದ್ಯಾರ್ಥಿನಿಲಯದಲ್ಲಿ ಮನೆಯ ಆಹ್ಲಾದ ವಾತಾವರಣ ನಿರ್ಮಿಸಬೇಕು ಎಂದು ಸ್ವಲ್ಪ ಕೆಲಸ ಮಾಡಿದ್ದೇನೆ. ವಿದ್ಯಾರ್ಥಿಗಳು ಖುಷಿಯಾಗಿ ಓದಬೇಕು. ಜತೆಗೆ ಕ್ರಿಯಾಶೀಲರಾಗಿರಬೇಕು ಎಂಬುದಷ್ಟೇ ಉದ್ದೇಶ’ ಎನ್ನುತ್ತಾರೆ ಮೇಲ್ವಿಚಾರಕ ಬಿ.ಜಿ. ಸೋಮೇಶ್ವರ ಸ್ವಾಮಿ.

‘ಇಲ್ಲಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮತ್ತು ವೃತ್ತಿಪರ ಕೋರ್ಸ್‌ಗಳಲ್ಲಿ ಉತ್ತೀರ್ಣರಾಗಬೇಕು ಎಂದು ಕೆಲವೊಂದು ತರಬೇತಿಗಳನ್ನೂ ಕೊಡಿಸಿದ್ದೇವೆ. ವಸತಿನಿಲಯ ಅಂದರೆ ಊಟ, ನಿದ್ದೆ ಮಾಡುವುದಲ್ಲ. ಭವಿಷ್ಯದ ಬದುಕನ್ನು ರೂಪಿಸಿಕೊಳ್ಳುವುದು ಎಂಬುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಿದ್ದೇನೆ’ ಎನ್ನುತ್ತಾರೆ ಅವರು.

‘ಎರಡು ವರ್ಷಗಳ ಹಿಂದೆ ಬಂದ ಸೋಮೇಶ್ವರ ಸ್ವಾಮಿ ವಸತಿನಿಲಯಕ್ಕೆ ಹೊಸ ಹುರುಪು ತುಂಬಿದ್ದಾರೆ. ಸ್ವಇಚ್ಛೆಯಿಂದ ಅನೇಕ ಬದಲಾವಣೆಗಳನ್ನು ತರುತ್ತಿದ್ದಾರೆ. ಹಸಿರೀಕರಣ ಇದ್ದರೆ ಓದಲು ಪೂರಕ ವಾತಾವರಣ ನಿರ್ಮಾಣವಾಗುತ್ತದೆ. ವಿದ್ಯಾರ್ಥಿಗಳಿಗೆ ಚೈತನ್ಯ ತುಂಬುತ್ತದೆ. ಇದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಉತ್ತಮ ಸ್ಥಾನ ಪಡೆದರೆ ನಮ್ಮ ಇಲಾಖೆಗೂ ಹೆಮ್ಮೆ. ಆಗ ಈ ವಸತಿನಿಲಯ ಮಾದರಿ ಎಂಬುದನ್ನು ಬೇರೆಯವರಿಗೆ ತೋರಿಸಲೂ ಸಾಧ್ಯವಾಗುತ್ತದೆ’ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸುರೇಶ್‌ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

*
ಮೇಲ್ವಿಚಾರಕರು ಬದಲಾವಣೆ ತರಲು ಪ್ರಯತ್ನಿಸುತ್ತಿದ್ದಾರೆ. ವಿದ್ಯಾರ್ಥಿಗಳು ಇದರ ಉಪಯೋಗ ಪಡೆದರೆ ಈ ಕೆಲಸ ಸಾರ್ಥಕವಾಗುತ್ತದೆ.
–ಸುರೇಶ್‌ ರೆಡ್ಡಿ,ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ

ದಾವಣಗೆರೆ ಆವರಗೆರೆಯಲ್ಲಿರುವ ಸರ್ಕಾರಿ ಪರಿಶಿಷ್ಟ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಎಲ್ಲರನ್ನು ಸ್ವಾಗತಿಸುವ ‘ಅನ್ನದೊಂದಿಗೆ ಅರಿವು’ ಘೋಷವಾಕ್ಯ
ದಾವಣಗೆರೆ ಆವರಗೆರೆಯಲ್ಲಿರುವ ಸರ್ಕಾರಿ ಪರಿಶಿಷ್ಟ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಎಲ್ಲರನ್ನು ಸ್ವಾಗತಿಸುವ ‘ಅನ್ನದೊಂದಿಗೆ ಅರಿವು’ ಘೋಷವಾಕ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT