ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುರ್ವೇದ ಭಾರತದ ಕೊಡುಗೆ: ಗೆಹಲೋತ್‌

ತಪೋವನ ಕಾಲೇಜು ಘಟಿಕೋತ್ಸವದಲ್ಲಿ ರಾಜ್ಯಪಾಲ
Last Updated 5 ಫೆಬ್ರುವರಿ 2023, 5:40 IST
ಅಕ್ಷರ ಗಾತ್ರ

ದಾವಣಗೆರೆ: ವಿಶ್ವಕ್ಕೆ ಭಾರತ ನೀಡಿದ ಕೊಡುಗೆಗಳಲ್ಲಿ ಆಯುರ್ವೇದವೂ ಒಂದು. ಆಯುರ್ವೇದ ಸಹಿತ ಎಲ್ಲ ಸಾಂಪ್ರದಾಯಿಕ ಪದ್ಧತಿಗಳನ್ನು ಭಾರತ ಸರ್ಕಾರವು ಆಯುಷ್‌ ಮಂತ್ರಾಲಯದ ಮೂಲಕ ಪ್ರೋತ್ಸಾಹ ನೀಡುತ್ತಿದೆ ಎಂದು ರಾಜ್ಯಪಾಲ ಥಾವರ ಚಂ‌ದ್ ಗೆಹಲೋತ್‌ ಹೇಳಿದರು.

ದೊಡ್ಡಬಾತಿಯ ತಪೋವನ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮೊದಲ ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಗತ್ತಿನಲ್ಲಿ ಅನೇಕ ವೈದ್ಯ ಪದ್ಧತಿಗಳಿವೆ. ಅದರಲ್ಲಿ ಆಯುರ್ವೇದ ಪದ್ಧತಿ. ಸಾಧು ಸಂತರ ತತ್ವಗಳ ಆಧಾರದಲ್ಲಿ ರೂಪುಗೊಂಡ ಪದ್ಧತಿ ಇದು. ರೋಗದ ಮೂಲಕ್ಕೆ ಔಷಧ ನೀಡುವ ಪದ್ಧತಿ ಇದು. ಆಯುರ್ವೇದ ಅನುಸರಿಸುವುದು ಹೇಗೆ ಎಂಬುದು ಶುಶ್ರೂತರ ಸಂಹಿತೆಯಲ್ಲಿದೆ ಎಂದು ವಿವರಿಸಿದರು.

ಕೊರೊನಾ ಕಾಲದಲ್ಲಿ ಆಯುರ್ವೇದದ ಮಹತ್ವ ಅರಿವಾಯಿತು. ಸ್ವಸ್ಥ ಶರೀರದಲ್ಲಿ ಸ್ವಸ್ಥ
ಮನಸ್ಸಿರುತ್ತದೆ. ಇದು ಆಯುರ್ವೇದದಿಂದ ಮಾತ್ರ ಸಾಧ್ಯ. ಪ್ರಧಾನಿಯವರು ಆಯುರ್ವೇದ, ಯೋಗಮ ಯುನಾನಿ, ಹೋಮಿಯೋಪಥಿ ಸಹಿತ ನಮ್ಮೆಲ್ಲ ಪ್ರಾಚೀನ ಪದ್ಧತಿಗಳಿಗೆ ಭಾರಿ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು.

ಇಂದು ಇಲ್ಲಿ ಕಲಿತು ವೈದ್ಯರಾದವರು ಉತ್ತಮ ಸೇವೆ ನೀಡುವ ಮೂಲಕ ಜನರ ಮನಸ್ಸಲ್ಲಿ ಉಳಿಯಬೇಕು. ವೈದ್ಯರು ಎಂದರೆ ದೇವರು ಎಂದು ಜನ ನಂಬುತ್ತಾರೆ. ಆ ನಂಬಿಕೆಯನ್ನು ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರೊ. ಎಸ್.ವಿ. ಹಲಸೆ ಘಟಿಕೋತ್ಸವದ ಭಾಷಣ ಮಾಡಿ, ‘ಆಯುರ್ವೇದವು 5000 ವರ್ಷಗಳ ಇತಿಹಾಸ ಇರುವ ನೈಸರ್ಗಿಕ ಚಿಕಿತ್ಸಾ ಪದ್ಧತಿ. ಜಗತ್ತಿನ ಎಲ್ಲ ವೈದ್ಯ ಪದ್ಧತಿಗಳಿಗೆ ಆಯುರ್ವೇದವೇ ಪ್ರೇರಣೆ. ದೇಹ, ಮನಸ್ಸು ಮತ್ತು ಪ್ರಕೃತಿ ಜತೆಗೆ ಸಮತೋಲನವನ್ನು ಕಾಯ್ದುಕೊಳ್ಳುವ ಪದ್ಧತಿ ಇದು ಎಂದು ವಿವರಿಸಿದರು.

ಆಯುರ್ವೇದ, ಯುನಾನಿ, ಸಿದ್ಧ, ಹೋಮಿಯೋಪಥಿ, ನ್ಯಾಚುರೋಪಥಿ, ಯೋಗ, ಇತ್ತೀಚಿನ ಟಿಬೇಟಿಯನ್‌ ವೈದ್ಯ ಪದ್ಧತಿ ಆಗಿರುವ ಸೋವ ರಿಗ್ಪಗಳನ್ನು ಏಳು ಸಾಂಪ್ರದಾಯಿಕ ಪದ್ಧತಿಗಳು ಎಂದು ಗುರುತಿಸಲಾಗಿದೆ. ಈ ಪದ್ಧತಿಗಳನ್ನು ಭಾರತೀಯರಷ್ಟೇ ಅಲ್ಲ ಜಗತ್ತಿನ ಅನೇಕ ದೇಶಗಳು ಅನುಸರಿಸುತ್ತಿವೆ ಎಂದು ತಿಳಿಸಿದರು.

ವೈದ್ಯಕೀಯ ಮಾರುಕಟ್ಟೆಯಲ್ಲಿ ಅತಿ ವೇಗವಾಗಿ ನೈಸರ್ಗಿಕ ಪದ್ಧತಿ ಬೆಳೆಯುತ್ತಿದೆ. ಭವಿಷ್ಯದ ವೈದ್ಯ ಪದ್ಧತಿ ಆಯುರ್ವೇದವೇ ಎಂಬುದರಲ್ಲಿ ಎರಡು ಮಾತಿಲ್ಲ. ತಪೋವನವು ಮಧ್ಯಕರ್ನಾಟಕದಲ್ಲಿ ಅತ್ಯಂತ ಹೆಸರು ಗಳಿಸಿದೆ. ಇಲ್ಲಿ ಓದಿದ ವಿದ್ಯಾರ್ಥಿಗಳು ಮುಂದೆ ಸಮಾಜದಲ್ಲಿ ಉತ್ತಮ ವೈದ್ಯರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಲ್ಲಿನ ಉದ್ಯೋಗಿಗಳು 50 ಪ್ರದೇಶಗಳಿಗೆ ಹೋಗಿ ‘ಹರ್‌ ದಿನ್‌ ಹರ್‌ ಘರ್‌ ಆಯುರ್ವೇದ’ ಅಭಿಯಾನ ನಡೆಸಿರುವುದು ಎಲ್ಲರಿಗೂ ಮಾದರಿ ಎಂದು ಶ್ಲಾಘಿಸಿದರು.

ಸಂಸದ ಜಿ.ಎಂ. ಸಿದ್ದೇಶ್ವರ, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಮಾಜಿ ಡೀನ್ ಡಾ. ಶ್ರೀನಿವಾಸ್ ಬನ್ನಿಗೋಳ ಮತ್ತು ತಪೋವನ ಮುಖ್ಯಸ್ಥ ಡಾ. ವಿ.ಎಂ. ಶಶಿಕುಮಾರ್, ಪ್ರಾಂಶುಪಾಲ ಡಾ. ಬಿ.ಜಿ. ಶ್ರೀಕಾಂತ್ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT