ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜು ಆರಂಭ: ವಿದ್ಯಾರ್ಥಿಗಳೇ ಇಲ್ಲ

ಉನ್ನತ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ವಿವಿಧ ಕಾಲೇಜುಗಳಿಗೆ ಭೇಟಿ, ಪರಿಶೀಲನೆ
Last Updated 17 ನವೆಂಬರ್ 2020, 12:45 IST
ಅಕ್ಷರ ಗಾತ್ರ

ದಾವಣಗೆರೆ: ಸರ್ಕಾರದ ಆದೇಶದಂತೆ ಕಾಲೇಜುಗಳು ಮಂಗಳವಾರ ತೆರೆದವು. ಆದರೆ ಬಹುತೇಕ ವಿದ್ಯಾರ್ಥಿಗಳು ಕಾಲೇಜು ಕಡೆ ತಲೆ ಹಾಕಿಲ್ಲ. ಕೆಲವು ಬಂದಿದ್ದರೂ ಅವರು ಕೊರೊನಾ ಪರೀಕ್ಷೆ ಮಾಡಿಸಿರಲಿಲ್ಲ.

‘ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ. ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿಗೆ ಕೊರೊನಾ ಪರೀಕ್ಷೆ ನೆಗೆಟಿವ್‌ ರಿಪೋರ್ಟ್‌ ಕಡ್ಡಾಯವಾಗಿ ಇರಬೇಕು. ಪೋಷಕರ ಅನುಮತಿ ಪತ್ರವನ್ನು ವಿದ್ಯಾರ್ಥಿಗಳು ಹೊಂದಿರಬೇಕು’ ಎಂಬ ಸೂಚನೆಗಳನ್ನು ಕಾಲೇಜುಗಳ ಮುಂದೆ ಹಾಕಲಾಗಿತ್ತು. ಈ ನಿಯಮ ಪಾಲನೆ ಮಾಡಿಕೊಂಡು ಬಂದ ವಿದ್ಯಾರ್ಥಿಗಳು ಬೆರಳೆಣಿಕೆಯಲ್ಲಿ ಮಾತ್ರ ಇದ್ದರು.

ಎವಿಕೆ ಕಾಲೇಜಿನಲ್ಲಿ ಬಿಎಸ್‌ಸಿ ಮತ್ತು ಬಿಕಾಂನ ತಲಾ ಒಬ್ಬರಂತೆ ಇಬ್ಬರು ವಿದ್ಯಾರ್ಥಿನಿಯರು ಮಾತ್ರ ನಿಯಮ ಪ್ರಕಾರ ಹಾಜರಾಗಿದ್ದರು. ಅಂತಿಮ ಪದವಿಯಲ್ಲಿ 600 ಮಕ್ಕಳು ಇದ್ದರೂ ಸುಮಾರು 20 ವಿದ್ಯಾರ್ಥಿನಿಯರು ಮಾತ್ರ ಬಂದು ಹೋಗಿದ್ದಾರೆ. ಕಾಲೇಜಿನಲ್ಲಿಯೇ ಕೊರೊನಾ ಪರೀಕ್ಷೆ ಮಾಡಲು ಆರೋಗ್ಯ ಇಲಾಖೆಯನ್ನು ಕೇಳಿಕೊಳ್ಳಲಾಗುವುದು ಎಂದು ಕಾಲೇಜು ಪ್ರಾಂಶು‍ಪಾಲ ಡಾ.ಬಿ.ಪಿ. ಕುಮಾರ್‌ ತಿಳಿಸಿದರು.

ಬಿಎಸ್‌ಸಿ ವಿದ್ಯಾರ್ಥಿನಿ ಆರಂಭದ ತರಗತಿಗೆ ಹಾಜರಾಗಿ ಒಂಟಿಯಾಗಿ ಪಾಠ ಕೇಳಿ ಹೋದರೆ, ಬಿಕಾಂ ವಿದ್ಯಾರ್ಥಿನಿ ತನ್ನ ಗೆಳತಿಯರು ಇಲ್ಲದನ್ನು ನೋಡಿ ವಾಪಸ್ಸಾದಳು.

ಡಿಆರ್‌ಎಂ ಕಾಲೇಜಿನಲ್ಲಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ತಯಾರಾಗಿದ್ದರು. ಆದರೆ ಒಂದೇ ಒಂದು ವಿದ್ಯಾರ್ಥಿಯೂ ಬಂದಿರಲಿಲ್ಲ. ಮಹಿಳಾ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿಎಸ್‌ಸಿಯ ಇಬ್ಬರು, ಬಿಕಾಂನ ಮೂವರು ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಮಾಡಿಸಿಕೊಂಡು ಬಂದಿದ್ದರು.

‘ನಮ್ಮಲ್ಲಿ ಅಂತಿಮ ಪದವಿಯಲ್ಲಿ 180 ವಿದ್ಯಾರ್ಥಿಗಳಿದ್ದಾರೆ. ಎಲ್ಲರೂ ಹಳ್ಳಿಗಳಿಂದ ಬರುವವರು. ಯಾರೂ ಬಂದಿಲ್ಲ. ಕೆಲವರನ್ನು ಮಾತನಾಡಿಸಿದಾಗ ಅವರು ಇವತ್ತು ಕೊರೊನಾ ಟೆಸ್ಟ್‌ ಮಾಡಿಸಲು ಹೋಗುತ್ತಿರುವುದಾಗಿ ತಿಳಿಸಿದ್ದಾರೆ. ಮುಂದಿನ ವಾರದಿಂದ ಸರಿಯಾಗಿ ತರಗತಿಗಳು ಆರಂಭಗೊಳ್ಳಬಹುದು’ ಎಂದು ಡಿಆರ್‌ಎಂ ಕಾಲೇಜು ಪ್ರಿನ್ಸಿ‍ಪಾಲ್‌ ಡಾ. ವನಜಾ ಆರ್‌. ಮಾಹಿತಿ ನೀಡಿದರು.

ಸರ್ಕಾರಿ ಪದವಿ ಮತ್ತು ಸ್ನಾತಕೋತ್ತರ ಕಾಲೇಜು ಸೇರಿದಂತೆ ಕೆಲವು ಕಡೆಗಳಲ್ಲಿ ಕೊಠಡಿ ಸ್ಯಾನಿಟೈಸ್‌ ಮಾಡದೇ ಇರುವುದು ಕಂಡು ಬಂದಿದೆ. ಪಾಲಿಕೆಯವರಿಗೆ ತಿಳಿಸಿದ್ದೇವೆ. ಕೂಡಲೇ ಮಾಡಿಸಲಾಗುವುದು ಎಂದು ಪ್ರಿನ್ಸಿಪಾಲ್‌ ತಿಳಿಸಿದ್ದಾರೆ.

ಕಾಲೇಜಲ್ಲೇ ಪರೀಕ್ಷೆ: ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳದೇ ಇರುವ ಕಾರಣದಿಂದಲೇ ವಿದ್ಯಾರ್ಥಿಗಳು ಬಂದಿರಲಿಲ್ಲ. ಸರ್ಕಾರಿ ಪದವಿ ಮತ್ತು ಸ್ನಾತಕೋತ್ತರ ಕಾಲೇಜು ಸಹಿತ ಕೆಲವು ಕಡೆಗಳಲ್ಲಿ ಅಲ್ಲೇ ಪರೀಕ್ಷೆ ಮಾಡಿಸಲು ವ್ಯವಸ್ಥೆ ಮಾಡಲಾಗಿತ್ತು. ಬಂದ ವಿದ್ಯಾರ್ಥಿಗಳು ಪರೀಕ್ಷೆ ಮಾಡಿಸಿಕೊಂಡರಲ್ಲದೇ ತಮ್ಮ ಸ್ನೇಹಿತರಿಗೆ ಮಾಹಿತಿ ರವಾನಿಸಿ, ಕಾಲೇಜಲ್ಲೇ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ತಿಳಿಸುತ್ತಿರುವುದು ಕಂಡು ಬಂತು.

ಅಧೀನ ಕಾರ್ಯದರ್ಶಿ, ವಿವಿ ಕುಲಸಚಿವೆ ಭೇಟಿ

ಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಶೀತಲ್‌ ಎಂ.ಹಿರೇಮಠ ಮತ್ತು ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವೆ (ಮೌಲ್ಯಮಾಪನ) ಡಾ.ಅನಿತಾ ಎಚ್‌.ಎಸ್‌. ವಿವಿಧ ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಸರಿಯಾಗಿ ಮಾಸ್ಕ್‌ ಹಾಕದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಮಾಸ್ಕ್‌ ಸರಿಮಾಡಿಸಿಕೊಳ್ಳಲು ಸೂಚಿಸಿದರು. ರ‍್ಯಾಪಿಡ್‌ ಆಂಟಿಜನ್‌ ಟೆಸ್ಟ್‌ ಅಲ್ಲ. ಆರ್‌ಟಿಪಿಸಿಆರ್‌ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಅಂತಿಮ ಪದವಿ ಮಾತ್ರ ಆರಂಭಗೊಳ್ಳುತ್ತಿರುವುದರಿಂದ ಇತರ ಕೊಠಡಿಗಳು ಲಭ್ಯ ಇರುತ್ತವೆ. ಅವುಗಳನ್ನು ಬಳಸಿಕೊಂಡು ಅಂತರ ಕಾಪಾಡಿಕೊಳ್ಳಬೇಕು. ಕಾಲೇಜುಗಳನ್ನು ಸ್ಯಾನಿಟೈಸ್‌ ಮಾಡಬೇಕು. ಅದಕ್ಕೆ ಜಿಲ್ಲಾಡಳಿತ ಅಥವಾ ಸ್ಥಳೀಯ ನಗರಾಡಳಿತಗಳನ್ನು ಅವಲಂಭಿಸುವ ಬದಲು ಕಾಲೇಜಿನವರೇ ಕ್ರಮ ಕೈಗೊಳ್ಳಬೇಕು. ಹೊರಗೆ ಥರ್ಮಲ್‌ ಸ್ಕ್ರೀನಿಂಗ್‌ ಮಾಡೋದು ಮಾತ್ರವಲ್ಲ. ಯಾವ ವಿದ್ಯಾರ್ಥಿಯನ್ನು ಸ್ಕ್ರೀನಿಂಗ್‌ ಮಾಡಲಾಗಿದೆ ಎಂಬುದನ್ನು ದಾಖಲಿಸಬೇಕು ಎಂದು ಸೂಚನೆ ನೀಡಿದರು.

‘ಪ್ರಥಮ ಮತ್ತು ದ್ವಿತೀಯ ಪದವಿ ತರಗತಿಗಳನ್ನು ಆರಂಭಿಸುವ ಚಿಂತನೆ ಸದ್ಯಕ್ಕಿಲ್ಲ. ಅಂತಿಮ ಪದವಿ ತೆರೆದ ಬಳಿಕ ಅದರ ಸಾಧಕ–ಬಾಧಕ ನೋಡಲಾಗುವುದು. ಆಮೇಲೆ ಉಳಿದ ತರಗತಿಗಳನ್ನು ತೆರೆಯುವ ಬಗ್ಗೆ ಯೋಚಿಸಲಾಗುವುದು’ ಎಂದು ಶೀತಲ್‌ ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿದ್ಯಾರ್ಥಿಗಳ ಆರೋಗ್ಯದ ಕಡೆಗೆ ಪ್ರತಿದಿನ ನಿಗಾ ಇಡಬೇಕು. ದೇಹದ ಉಷ್ಣಾಂಶ ಹೆಚ್ಚು ಕಂಡು ಬಂದಲ್ಲಿ ಕೂಡಲೇ ಪ್ರಿನ್ಸಿಪಾಲರಿಗೆ ತಿಳಿಸಿ ಅವರಿಗೆ ಚಿಕಿತ್ಸೆ ಕೊಡಬೇಕು. ಕುಲಪತಿ ಡಾ. ಎಸ್‌.ವಿ. ಹಲಸೆ ಅವರು ಪ್ರತಿ ಕಾಲೇಜಿಗೆ ಪಾಲಿಸಬೇಕಾದ ನಿಯಮಗಳನ್ನು ಕಳುಹಿಸಿದ್ದಾರೆ. ಅದನ್ನು ಕಾಲೇಜಿನವರು ಪಾಲಿಸಬೇಕು’ ಎಂದು ಡಾ.ಅನಿತಾ ಎಚ್‌.ಎಸ್‌. ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT