ದಾವಣಗೆರೆ: ಮಾರುಕಟ್ಟೆಯಲ್ಲಿ ವೀಳ್ಯದೆಲೆ ದರ ಕುಸಿತದಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಉತ್ತಮ ಮಳೆ ಹಾಗೂ ತೇವಾಂಶ ಹೆಚ್ಚಳದಿಂದಾಗಿ ಉತ್ತಮ ಫಸಲು ಕೈಸೇರಿದರೂ ಬೆಲೆ ಪಾತಾಳಕ್ಕೆ ಇಳಿದಿದ್ದರಿಂದ ನಷ್ಟದ ಸುಳಿಗೆ ಸಿಲುಕಿದ್ದಾರೆ.

ಹರಿಹರ, ಜಗಳೂರು, ದಾವಣಗೆರೆ ತಾಲ್ಲೂಕು ಸೇರಿ ಜಿಲ್ಲೆಯಲ್ಲಿ 360 ಹೆಕ್ಟೇರ್ ಪ್ರದೇಶದಲ್ಲಿ ವೀಳ್ಯದೆಲೆ ಬೆಳೆಯಲಾಗಿದೆ. ಸಾವಿರಾರು ರೈತರು ಈ ಬೆಳೆಯನ್ನೇ ಅವಲಂಬಿಸಿದ್ದಾರೆ. ಮೂರು ತಿಂಗಳಿಂದ ಇಳಿಮುಖವಾಗಿರುವ ಬೆಲೆ, ಏರಿಕೆಯ ಹಾದಿಗೆ ಮರಳುವ ಲಕ್ಷಣಗಳು ಗೋಚರಿಸದೇ ಅವರ ಆತಂಕ ದ್ವಿಗುಣಗೊಂಡಿದೆ.

ಫೆಬ್ರುವರಿ ಮತ್ತು ಮಾರ್ಚ್ನಲ್ಲಿ 12,000 ವೀಳ್ಯದೆಲೆಯ ಒಂದು ಪೆಂಡಿಗೆ ಸರಾಸರಿ ₹ 14,000 ದರವಿತ್ತು. ಮೂಡಣ ದಿಕ್ಕಿನಿಂದ ಗಾಳಿ ಬೀಸುತ್ತಿದ್ದಾಗ ವೀಳ್ಯದೆಲೆ ಇಳುವರಿ ಕುಂಠಿತವಾಗುತ್ತದೆ. ಮಾರುಕಟ್ಟೆಯಲ್ಲಿ ಆವಕ ಕಡಿಮೆಯಾಗಿ ಬೆಲೆ ಹೆಚ್ಚಾಗಿತ್ತು. ಏಪ್ರಿಲ್ ಬಳಿಕ ಮಳೆ ಆರಂಭವಾಗಿದ್ದರಿಂದ ವೀಳ್ಯದೆಲೆಗೆ ಪೂರಕ ವಾತಾವರಣ ನಿರ್ಮಾಣವಾಗಿದ್ದು, ಬೆಲೆ ಇಳಿಯುತ್ತ ಸಾಗಿತು. ಜೂನ್ನಲ್ಲಿ ಇದು ಕನಿಷ್ಠಕ್ಕೆ ತಲುಪಿದ್ದು, ವೀಳ್ಯದೆಲೆಯ ಪ್ರತಿ ಪೆಂಡಿಗೆ ಮಾರುಕಟ್ಟೆಯಲ್ಲಿ ₹ 2,500 ದರವಿದೆ.

‘ಪ್ರತಿ ವರ್ಷ ಸಾಮಾನ್ಯವಾಗಿ ಜೂನ್ ಬಳಿಕ ದರ ಕಡಿಮೆಯಾಗುತ್ತಿತ್ತು. ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದ ಪರಿಣಾಮ ವೀಳ್ಯದೆಲೆ ಇಳುವರಿ ಹೆಚ್ಚಿತು. ಇದರಿಂದ ಮಾರುಕಟ್ಟೆಯಲ್ಲಿ ದರ ಕಡಿಮೆಯಾಗುತ್ತ ಸಾಗಿದೆ. ಇದೇ ಬೆಲೆ ಸಿಕ್ಕರೆ ವೀಳ್ಯದೆಲೆ ಬೆಳೆಯಿಂದ ವಿಮುಖವಾಗಬೇಕಾಗುತ್ತದೆ’ ಎಂದು ಹನಗವಾಡಿಯ ರೈತ ಕೆ.ಚಂದ್ರಪ್ಪ ಅಳಲು ತೋಡಿಕೊಂಡರು.

ಹರಿಹರ ತಾಲ್ಲೂಕಿನ ಹನಗವಾಡಿ, ಶಿವನಹಳ್ಳಿ, ನಗೇನಹಳ್ಳಿ, ಬಾನುವಳ್ಳಿ, ಬೆಳ್ಳೂಡಿ ಸೇರಿ ಹಲವು ಗ್ರಾಮಗಳಲ್ಲಿ ವೀಳ್ಯದೆಲೆ ಪ್ರಮುಖ ಬೆಳೆ. ಈ ಗ್ರಾಮಗಳ ರೈತರು 10 ಗುಂಟೆಯಿಂದ ಒಂದೂವರೆ ಎಕರೆವರೆಗೆ ವೀಳ್ಯದೆಲೆ ತೋಟ ಹೊಂದಿದ್ದಾರೆ. ಹರಿಹರ, ದಾವಣಗೆರೆ, ಚಿತ್ರದುರ್ಗ, ರಾಣೆಬೆನ್ನೂರು, ಧಾರವಾಡ, ಹುಬ್ಬಳ್ಳಿ ಮಾರುಕಟ್ಟೆಗೆ ಸಾಗಿಸುತ್ತಾರೆ. ಇಲ್ಲಿಂದ ಬೆಂಗಳೂರು, ಮಂಗಳೂರು ಸೇರಿ ರಾಜ್ಯದ ಹಲವೆಡೆಗೆ ವೀಳ್ಯದೆಲೆ ರವಾನೆಯಾಗುತ್ತದೆ. ಕೆಲವೊಮ್ಮೆ ಹೊರರಾಜ್ಯಕ್ಕೂ ಸಾಗಣೆಯಾಗುತ್ತದೆ.

‘ವೀಳ್ಯದೆಲೆ ಬಳ್ಳಿಯ ಪೋಷಣೆಗೆ ಹೆಚ್ಚು ನಿಗಾ ವಹಿಸಬೇಕು. ನಿತ್ಯವೂ ತೋಟದಲ್ಲಿದ್ದು ಬಳ್ಳಿಯನ್ನು ಆರೈಕೆ ಮಾಡಬೇಕು. ಕಳೆ ತೆಗೆಯುವುದು, ಬಳ್ಳಿ ಕಟ್ಟುವುದು, ನೀರು ಹಾಯಿಸುವ ಕೆಲಸ ಪ್ರತಿ ದಿನ ಇರುತ್ತದೆ. ಎಲೆ ಕೀಳಲು ಕೃಷಿ ಕಾರ್ಮಿಕರಿಗೆ ದಿನವೊಂದಕ್ಕೆ ₹ 500 ಕೂಲಿ ನೀಡಬೇಕು. ಮಾರುಕಟ್ಟೆಯಲ್ಲಿ ಸಿಗುವ ದರದಲ್ಲಿ ನಿರ್ವಹಣಾ ವೆಚ್ಚ ಕೂಡ ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಹನಗವಾಡಿಯ ಬೆಳೆಗಾರ ರೇವಣಸಿದ್ಧಪ್ಪ.

ಜಿಲ್ಲೆಯಲ್ಲಿ ಬೆಳೆಯುವ ‘ವೀಳ್ಯದೆಲೆ’ಯನ್ನು ಜನರು ಹೆಚ್ಚು ಇಷ್ಟಪಡುತ್ತಾರೆ. ಪೂಜೆಗೂ ಈ ಎಲೆ ಬಳಕೆಯಾಗುತ್ತದೆ. ಶ್ರಾವಣದ ಬಳಿಕ ಹಬ್ಬದ ಸಾಲು ಆರಂಭವಾಗಲಿದ್ದು, ಬೆಲೆ ಚೇತರಿಸುವ ಸಾಧ್ಯತೆ ಇದೆ ಎಂಬುದು ಬೆಳೆಗಾರರ ನಿರೀಕ್ಷೆ.

ಭರವಸೆ ಮೂಡಿಸದ ವಿಮೆ ಯೋಜನೆ!

ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಜಿಲ್ಲೆಯ ವೀಳ್ಯದೆಲೆ ಬೆಳೆಗಾರರಲ್ಲಿ ಭರವಸೆ ಮೂಡಿಸಿಲ್ಲ. ಪರಿಹಾರ ಸಿಗದೇ ಬೇಸರಗೊಂಡ ರೈತರು ಕಂತು ಪಾವತಿಗೂ ಆಸಕ್ತಿ ತೋರುತ್ತಿಲ್ಲ. ‘ಮಳೆ ಹೆಚ್ಚಾಗಿ ಶೀತವಾದಾಗ ವೀಳ್ಯದೆಲೆಗೆ ಕೊಳೆರೋಗ ಬಾಧೆ ಕಾಡುತ್ತದೆ. ಬೆಳೆ ಸಂಪೂರ್ಣ ನಾಶವಾಗುವ ಸಾಧ್ಯತೆ ಹೆಚ್ಚು. ಜತನದಿಂದ ಕಾಪಾಡಿದ ಬಳ್ಳಿಯನ್ನು ಉಳಿಸಿಕೊಳ್ಳಲು ರೈತರು ಪಟ್ಟ ಶ್ರಮ ಕೂಡ ವ್ಯರ್ಥ. ಇಂತಹ ಸಂದರ್ಭದಲ್ಲಿ ಬೆಳೆ ವಿಮೆಯ ಪರಿಹಾರ ಕೈಹಿಡಿದಿಲ್ಲ’ ಎಂಬುದು ಬೆಳೆಗಾರರ ಆರೋಪ. ‘ಬೆಳೆ ವಿಮೆ ಪರಿಹಾರ ಹೆಕ್ಟೇರ್ ಲೆಕ್ಕದಲ್ಲಿ ನಿಗದಿಪಡಿಸಲಾಗಿದೆ. ಗುಂಟೆ ಲೆಕ್ಕದಲ್ಲಿ ವೀಳ್ಯದೆಲೆ ಬೆಳೆದ ರೈತರಿಗೆ ಸಿಗುವ ಪರಿಹಾರದ ಮೊತ್ತ ಅಲ್ಪವೆಂಬ ಭಾವನೆ ಇದೆ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಾಘವೇಂದ್ರ ಪ್ರಸಾದ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.