ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲಾ ಮಕ್ಕಳಿಗೆ ‘ಬಿಜೆಪಿ’ ಪಾಠ: ಆಕ್ಷೇಪ

ಬಿಜೆಪಿ ನಗರ ಎಸ್.ಟಿ. ಮೋರ್ಚಾದಿಂದ ಬ್ಯಾಗ್‌ ವಿತರಣೆ
Last Updated 2 ಅಕ್ಟೋಬರ್ 2022, 5:34 IST
ಅಕ್ಷರ ಗಾತ್ರ

ಶಿವಮೊಗ್ಗ: ‘ನರೇಂದ್ರ ಮೋದಿ ಅವರ ಹುಟ್ಟುಹಬ್ಬ ಯಾವತ್ತು? ಕೊರೊನಾ ಸಂದರ್ಭದಲ್ಲಿ ಎರಡು ವರ್ಷ ಶಾಲೆ ಇತ್ತಾ? ಆಗ ಪ್ರತಿ ದಿನ ಮಧ್ಯಾಹ್ನ ಊಟ ಮಾಡಲು ನಿಮ್ಮ ಮನೆಗೆ ಶಾಲೆಯಿಂದ ದಿನಸಿ ಕಳುಹಿಸುತ್ತಿದ್ದರು. ದಿನಸಿ ಕಳುಹಿಸುತ್ತಿದ್ದರು ಎನ್ನುವವರು ಕೈ ಎತ್ತಿ.. ಅದನ್ನು ಯಾರು ಮಾಡಿದ್ದು? ಅದು ನರೇಂದ್ರ ಮೋದಿ..’

ಇದು ಕಲ್ಲಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಇ. ಕಾಂತೇಶ ಮಕ್ಕಳೊಂದಿಗೆ ಮಾಡಿದ ಚರ್ಚೆಯ
ವಿವರ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 72ನೇ ಜನ್ಮ ದಿನದ ಅಂಗವಾಗಿ ಬಿಜೆಪಿ ನಗರ ಎಸ್.ಟಿ. ಮೋರ್ಚಾದಿಂದ ಶನಿವಾರ ನಗರದ ಕಲ್ಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಿಸಿ ಅವರು ಮಾತನಾಡಿದರು.

ಕೊರೊನಾ ಬಂದಾಗ ನಿಮ್ಮ ತಂದೆ–ತಾಯಿಗೆ ಉಚಿತವಾಗಿ ಲಸಿಕೆ ಕೊಟ್ಟಿದ್ದು ನರೇಂದ್ರ ಮೋದಿ. ಅದರಲ್ಲೂ ದೇಶಾದ್ಯಂತ 12 ವರ್ಷದ ಮೇಲಿನ ಎಲ್ಲ ನಾಗರಿಕರಿಗೂ ಉಚಿತವಾಗಿ ಲಸಿಕೆ ಹಾಕಿಸಿದವರು ಮೋದಿ ಎಂದು ಹೇಳಿದರು.

ಶಾಲಾ ಮಕ್ಕಳಿಗೆ ಬೈಸಿಕಲ್ ಉಚಿತವಾಗಿ ಯಾರು ಕೊಟ್ಟಿದ್ದು ಎಂದು ಕೇಳಿದಾಗ ನರೇಂದ್ರ ಮೋದಿ ಎಂದು ಕಾರ್ಯಕ್ರಮದಲ್ಲಿದ್ದ ಮಕ್ಕಳು ಉತ್ತರಿಸಿದರು. ‘ನರೇಂದ್ರ ಮೋದಿ ಹಾಗೂ ಯಡಿಯೂರಪ್ಪನವರು ಇಬ್ಬರೂ ಸೇರಿ ಕೊಟ್ಟರು‘ ಎಂದು ಕಾಂತೇಶ ಹೇಳಿದರು.

ವಿಶ್ವ ಯೋಗದಿನ ಘೋಷಿಸುವ ಮೂಲಕ ಹಾಗೂ ಶಾಲೆಗಳಲ್ಲಿ ಕೂಡ ಯೋಗ ತರಗತಿ ಆರಂಭಿಸಿ ಮಕ್ಕಳಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿಯ ಅರಿವು ಮೂಡಿಸಲಾಗಿತ್ತು’
ಎಂದರು.

ಕಲ್ಲಹಳ್ಳಿ ಶಾಲೆಯಲ್ಲೂ ಅನೇಕ ಸಮಸ್ಯೆಗಳಿವೆ. ಪ್ರಮುಖವಾಗಿ ಶೌಚಾಲಯ ನಿರ್ಮಾಣ, ಸದೃಢ ಗೇಟ್, ಕಮಾನು ಮತ್ತು ಪಠ್ಯಕ್ಕೆ ಪೂರಕವಾದ ಗೋಡೆ ಬರಹ, ಭಿತ್ತಿಚಿತ್ರಗಳ ನಿರ್ಮಾಣ ಮೊದಲಾದ ಬೇಡಿಕೆಗಳಿವೆ. ಅದನ್ನು ಕೂಡ ಸಂಬಂಧಪಟ್ಟವರ ಗಮನಕ್ಕೆ ತಂದು ಈಡೇರಿಸಲಾಗುವುದು ಎಂದರು.

ಸೂಡಾ ಅಧ್ಯಕ್ಷ ನಾಗರಾಜ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ್, ಬಿಜೆಪಿ ಎಸ್.ಟಿ ಮೋರ್ಚಾ ಅಧ್ಯಕ್ಷ, ಎಸ್.ಡಿ.ಎಂ.ಸಿ ಸದಸ್ಯ ರಂಗೇಶ್, ನಂಜುಂಡಪ್ಪ, ಬಿಜೆಪಿ ನಗರ ಕಾರ್ಯದರ್ಶಿ ಸಂತೋಷ್ ಬಳ್ಳೆಕೆರೆ, ಮುಖ್ಯ ಶಿಕ್ಷಕಿ ಪಾರ್ವತಮ್ಮ, ಮಂಜುಳಾ ರಾಜ್, ರಾಜಪ್ಪ
ಇದ್ದರು.

ಕ್ರಮಕ್ಕೆ ಆಗ್ರಹ

ಕಲ್ಲಹಳ್ಳಿ ಸರ್ಕಾರಿ ಶಾಲೆಯಲ್ಲಿ ರಾಜಕೀಯ ಪಕ್ಷವಾದ ಬಿಜೆಪಿ ಬ್ಯಾನರ್ ಹಾಕಿ ಕಾರ್ಯಕ್ರಮ ನಡೆಸಿರುವುದಕ್ಕೆ ನಗರದ ಪೀಪಲ್ಸ್ ಲಾಯರ್ಸ್ ಗಿಲ್ಡ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟ ಅಧಿಕಾರಿಗಳು ಹಾಗೂ ಸಂಘಟಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೋರಿ ಶನಿವಾರ ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಲಾಯಿತು.

ಮಕ್ಕಳನ್ನು ಶಾಲಾ ಚಟುವಟಿಕೆ ಹೊರತುಪಡಿಸಿ ಬೇರೆ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುವುದು ಅವರ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಪೀಪಲ್ಸ್ ಲಾಯರ್ಸ್ ಗಿಲ್ಡ್‌ ಆರೋಪಿಸಿದೆ. ಕೆ.ಪಿ.ಶ್ರೀಪಾಲ್, ವಿಜಯ್‌ಕುಮಾರ್, ಶೇಹರಾಜ್ ಅಹಮ್ಮದ್, ಬಿ.ಎ. ಚಿರಂತ್, ವಿಕಾಸ್ ಕೆ.ಕೆ. ಸಂದೇಶ ಗಾಳಿ, ಚರಣ್, ಮಂಜುನಾಥ್, ಆಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT