ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ: ಆಗಸ್ಟ್‌ 28ರಿಂದ ಮಂಡಲವಾರು ಬಿಜೆಪಿ ಸದಸ್ಯತ್ವ ಅಭಿಯಾನ

ರಾಜ್ಯದಲ್ಲಿ 1.50 ಕೋಟಿ ಸದಸ್ಯತ್ವದ ಗುರಿ: ಅಭಿಯಾನದ ರಾಜ್ಯ ಸಂಚಾಲಕ ನಂದೀಶ್ ರೆಡ್ಡಿ
Published 27 ಆಗಸ್ಟ್ 2024, 15:51 IST
Last Updated 27 ಆಗಸ್ಟ್ 2024, 15:51 IST
ಅಕ್ಷರ ಗಾತ್ರ

ದಾವಣಗೆರೆ: ‘ಜಿಲ್ಲೆಯಲ್ಲಿ ಆಗಸ್ಟ್‌ 28ರಿಂದ 30ರ ವರೆಗೆ ಮಂಡಲವಾರು ಬಿಜೆಪಿ ಸದಸ್ಯತ್ವ ಅಭಿಯಾನ ನಡೆಯಲಿದ್ದು, ಕಾರ್ಯಕರ್ತರು, ಪದಾಧಿಕಾರಿಗಳು ಭಾಗವಹಿಸುವ ಮೂಲಕ ಅಭಿಯಾನ ಯಶಸ್ವಿಗೊಳಿಸಬೇಕು’ ಎಂದು ಸದಸ್ಯತ್ವ ಅಭಿಯಾನದ ರಾಜ್ಯ ಸಂಚಾಲಕ ನಂದೀಶ್ ರೆಡ್ಡಿ ತಿಳಿಸಿದರು.

ನಗರದಲ್ಲಿನ ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ‘ಬಿಜೆಪಿ ಸದಸ್ಯತ್ವ ಅಭಿಯಾನದ ಜಿಲ್ಲಾಮಟ್ಟದ ಕಾರ್ಯಾಗಾರ’ದಲ್ಲಿ ಮಾತನಾಡಿದರು.

‘ಆ.31ರಂದು ರಾಜ್ಯಾದ್ಯಂತ ಬೂತ್‌ ಮಟ್ಟದಲ್ಲಿ ಸಭೆ ಸೇರಬೇಕು ಎಂದು ಹೈಕಮಾಂಡ್ ನಾಯಕರು ತಿಳಿಸಿದ್ದಾರೆ. ರಾಜ್ಯದಲ್ಲಿ 2014ರಲ್ಲಿ 74 ಲಕ್ಷ, 2018ರಲ್ಲಿ 1.01 ಕೋಟಿ ಪಕ್ಷದ ಸದಸ್ಯತ್ವ ಇತ್ತು. ಈ ಬಾರಿ ರಾಜ್ಯಮಟ್ಟದಲ್ಲಿ 1.50 ಕೋಟಿ ಸದಸ್ಯತ್ವದ ಗುರಿ ಹೊಂದಲಾಗಿದೆ’ ಎಂದು ಮಾಹಿತಿ ನೀಡಿದರು.

‘ಮನೆ ಮನೆಗೆ ತೆರಳಿ ಸದಸ್ಯತ್ವ ಅಭಿಯಾನ ನಡೆಸುವುದರಿಂದ ಪಕ್ಷ ಹಾಗೂ ಸ್ಥಳೀಯ ಕಾರ್ಯಕರ್ತರು, ಮುಖಂಡರಿಗೆ ಅನುಕೂಲವಾಗಲಿದೆ. ಸ್ಥಳೀಯರ ಸಮಸ್ಯೆಗಳ ಬಗ್ಗೆ ಅರಿತು, ಮೂಲ ಸೌಲಭ್ಯ ಕಲ್ಪಿಸಬಹುದಾಗಿದೆ’ ಎಂದರು.

‘ಬಸ್ ನಿಲ್ದಾಣ, ರೈಲು ನಿಲ್ದಾಣ, ಮಾರುಕಟ್ಟೆಗಳಲ್ಲೂ ಸದಸ್ಯತ್ವ ನಡೆಸಿ, ಅಭಿಯಾನ ಯಶಸ್ವಿಗೊಳಿಸಿ’ ಎಂದು ಸಲಹೆ ನೀಡಿದರು.

‘ಈ ಹಿಂದೆ ಬಿಜೆಪಿ ಎಂದರೆ ಮೇಲ್ವರ್ಗದವರ ಪಕ್ಷ ಎನ್ನುತ್ತಿದ್ದರು. ಆದರೀಗ ಎಲ್ಲ ವರ್ಗದವರೂ ಪಕ್ಷದಲ್ಲಿ ಇದ್ದಾರೆ. ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ದೇಶ ಮುಖ್ಯ ಎಂಬುದು ನಮ್ಮ ಸಿದ್ಧಾಂತವಾಗಿದೆ’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

‘ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಜನರಿಗೆ ತಿಳಿಸಬೇಕು. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟಿಸುವ ಮೂಲಕ ಹೊಸ ನಾಯಕತ್ವ ಬೆಳೆಸಬೇಕು’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ರಾಜಶೇಖರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ಕಡ್ಲೇಬಾಳು, ಅನಿಲ್ ಕುಮಾರ್ ನಾಯ್ಕ, ಮುಖಂಡರಾದ ಮಾಡಾಳ್ ಮಲ್ಲಿಕಾರ್ಜುನ್, ಲೋಕಿಕೆರೆ ನಾಗರಾಜ್, ಬಿ.ಜಿ.ಅಜಯಕುಮಾರ್, ಕೆ.ಪ್ರಸನ್ನಕುಮಾರ್, ಬಿ.ಎಂ.ಸತೀಶ್ ಮತ್ತಿತರರು ಭಾಗವಹಿಸಿದ್ದರು.

ಹಗರಣಗಳಲ್ಲಿ ಸಿಲುಕಿರುವ ಕಾಂಗ್ರೆಸ್ ಸರ್ಕಾರ ಜನರ ದಿಕ್ಕು ತಪ್ಪಿಸಲು ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡುತ್ತಿದೆ. ಇದಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ ಶಾಸಕ ರವಿ ಗಣಿಗ ಅವರಿಗೆ ಸುಪಾರಿ ಕೊಟ್ಟಿದೆ
ಎಂ.ಪಿ.ರೇಣುಕಾಚಾರ್ಯ ಮಾಜಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT