ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೇಬೆನ್ನೂರು: ತೆಪ್ಪ ಬಳಸಿ ಅಡಿಕೆ ಕೊಯ್ಲು: ರೈತರ ಪರದಾಟ

ಹಿರೇಹಳ್ಳದ ಪ್ರವಾಹದಿಂದ ಅಡಿಕೆ ತೋಟದಲ್ಲಿ ಒಂದೂವರೆ ತಿಂಗಳಿಂದ ನಿಂತ ನೀರು
Last Updated 16 ಸೆಪ್ಟೆಂಬರ್ 2022, 3:53 IST
ಅಕ್ಷರ ಗಾತ್ರ

ಸಂತೇಬೆನ್ನೂರು (ದಾವಣಗೆರೆ ಜಿಲ್ಲೆ): ಒಂದು ವಾರದಿಂದ ಮಳೆ ಕಡಿಮೆಯಾಗಿದೆ. ಆದರೆ, ಅತಿವೃಷ್ಟಿಯಿಂದಾಗಿ ಸಮೀಪದ ಹಿರೇಹಳ್ಳ ಹಾಗೂ ಸೂಳೆಕೆರೆ ಹಿನ್ನೀರು ವ್ಯಾಪ್ತಿಯ ಸಾವಿರಾರು ಎಕರೆ ಅಡಿಕೆ ತೋಟಗಳಿಗೆ ನುಗ್ಗಿದ್ದ ಪ್ರವಾಹದ ನೀರು ಇನ್ನೂ ಸರಿದಿಲ್ಲ. 1ರಿಂದ 4 ಅಡಿಗಳಷ್ಟು ನೀರು ನಿಂತಿರುವ ತೋಟಗಳಲ್ಲಿ ಅಡಿಕೆ ಕೊಯ್ಲು ಮಾಡಲು ರೈತರು ತೆಪ್ಪ ಬಳಸುತ್ತಿದ್ದಾರೆ.

‘ಹಿರೇಹಳ್ಳದ ಪ್ರವಾಹದಿಂದ ಎರಡು ಎಕರೆ ತೋಟ ಜಲಾವೃತವಾಗಿದೆ. ತೆಪ್ಪ ಬಳಸಿಯೇ ಕೊಯ್ಲು ಪೂರ್ಣಗೊಳಿಸಿದ್ದೇನೆ. ಮೊದಲು ತೆಪ್ಪವನ್ನು ಅಡಿಕೆ ಮರದ ಬಳಿ ಸಾಗಿಸಬೇಕು. ನೀರಲ್ಲಿ ಬಿದ್ದ ಅಡಿಕೆ ಗೊಂಚಲನ್ನು ತೆಪ್ಪಕ್ಕೆ ತುಂಬಬೇಕು. ತೆಪ್ಪದಲ್ಲಿ ಒಮ್ಮೆ 1 ಕ್ವಿಂಟಲ್ ಅಡಿಕೆಯನ್ನು ಮಾತ್ರ ದಡಕ್ಕೆ ಸಾಗಿಸಲು ಸಾಧ್ಯ. ಹೆಚ್ಚೆಂದರೆ ದಿನಕ್ಕೆ 20 ಕ್ವಿಂಟಲ್ ಹಸಿ ಅಡಿಕೆ ಸಾಗಿಸಬಹದು’ ಎಂದು ನಿಂಬಾಪುರದ ರೈತ ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

‘1 ಎಕರೆ ಅಡಿಕೆ ಕೊಯ್ಲಿಗೆ ಎರಡು ದಿನ ಬೇಕಾಗುತ್ತಿದೆ. ಸಾಮಾನ್ಯ ದಿನಗಳಲ್ಲಿ ನಿತ್ಯ 80 ಕ್ವಿಂಟಲ್‌ವರೆಗೆ ಅಡಿಕೆ ಸಾಗಿಸಲಾಗುತ್ತದೆ’ಎಂದು ಅವರು ಹೇಳಿದರು.

‘ಹಿರೇಹಳ್ಳದ ನೀರು ಒಂದೂವರೆ ತಿಂಗಳಿಂದ ತೋಟಗಳಲ್ಲೇ ನಿಂತಿದ್ದು, ಇನ್ನೂ ಒಂದು ತಿಂಗಳು ಖಾಲಿ ಆಗುವ ಲಕ್ಷಣಗಳಿಲ್ಲ. ಈಗಾಗಲೇ 3ರಿಂದ 4 ವರ್ಷದ ಗಿಡಗಳು ನಾಶವಾಗುತ್ತಿವೆ. ಹಳೇ ತೋಟಗಳು ಕೆಂಪು ಬಣ್ಣಕ್ಕೆ ತಿರುಗುವ ಸಾಧ್ಯತೆ ಇದೆ’ ಎಂದು ರೈತ ರಾಜಪ್ಪ ವಿವರಿಸಿದರು.

‘ಶಾಂತಿಸಾಗರ (ಸೂಳೆಕೆರೆ) ಕೋಡಿ ಬಿದ್ದ ಪರಿಣಾಮ ಹಿನ್ನೀರು ವ್ಯಾಪ್ತಿಯ ಕೊಂಡದಹಳ್ಳಿ, ಗೊಲ್ಲರಹಳ್ಳಿ, ಬಿಕ್ಕುಡ, ಸೋಮಲಾಪುರ, ಜಕಲಿ, ಕಗತೂರು ವ್ಯಾಪ್ತಿಯಲ್ಲಿ ಅಡಿಕೆಯ 1,000 ಎಕರೆಗಿಂತ ಅಧಿಕ ತೋಟಗಳಲ್ಲಿ 3ರಿಂದ 4 ಅಡಿ ನೀರು ನಿಂತಿದೆ. 2ನೇ ಬಾರಿ ಕೊಯ್ಲು ಆರಂಭವಾಗಿದೆ. ಸುಮಾರು 500 ಮೀಟರ್‌ನಿಂದ 1 ಕಿ.ಮೀ ದೂರದವರೆಗೆ ತೆಪ್ಪದಲ್ಲಿ ಸಾಗಬೇಕಿದೆ. ದಿನಕ್ಕೆ 4ರಿಂದ 5 ಬಾರಿ ಮಾತ್ರ ಅಡಿಕೆ ದಡಕ್ಕೆ ಸಾಗಿಸಲು ಸಾಧ್ಯ. ರೈತರ ಬವಣೆ ಹೇಳತೀರದು’ ಎಂದು ಕೊಂಡದಹಳ್ಳಿ ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಎಸ್. ಕುಮಾರ್ ಬೇಸರ ವ್ಯಕ್ತಪಡಿಸಿದರು.

‘ಕೆಲವು ರೈತರು ₹ 6000ದಿಂದ ₹ 7000 ಕೊಟ್ಟು ತೆಪ್ಪ ಖರೀದಿಸಿದ್ದಾರೆ. ಮೀನುಗಾರರಿಂದ ದಿನಕ್ಕೆ ₹ 500ರಿಂದ ₹ 1000ಕ್ಕೆ ಬಾಡಿಗೆಗೆ ಪಡೆದು ಅಡಿಕೆ ಕೊಯ್ಲು ಮಾಡುತ್ತಿರುವವರೂ ಇದ್ದಾರೆ’ ಎನ್ನುತ್ತಾರೆ ಸೋಮಲಾಪುರದ ರೈತ ವೀರೇಶ್.

........

ಅಡಿಕೆ ತೋಟಗಳಲ್ಲಿ ಸತತವಾಗಿ ನೀರು ನಿಂತರೆ ಶೀತದ ಪರಿಣಾಮವಾಗಿ ಹರಳು ಉದುರುತ್ತವೆ. ಮುಂದಿನ ಬೆಳೆ ಸಂಪೂರ್ಣ ಕುಂಠಿತಗೊಳ್ಳುವ ಆತಂಕವಿದೆ.
– ಕೆ.ಎಸ್. ಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT