ಬುಧವಾರ, ಏಪ್ರಿಲ್ 14, 2021
24 °C
ಮಹಿಳೆಯರಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸಲಹೆ

ಅನಿಸಿದ್ದನ್ನು ಅಕ್ಷರ ರೂಪಕ್ಕೆ ತನ್ನಿ: ಜಿಲ್ಲಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಸಾಹಿತ್ಯ ಸಮಾಜದ ಕನ್ನಡಿ ಇದ್ದಂತೆ. ನಾವೆಲ್ಲರೂ ಸಮಾಜವನ್ನು ಒಂದೊಂದು ರೀತಿ ನೋಡುತ್ತೇವೆ. ತಮಗೆ ಅನಿಸಿದ್ದನ್ನು ಅಕ್ಷರ ರೂಪಕ್ಕೆ ತರುವ ಕೆಲಸವನ್ನು ಮಾಡಬೇಕು’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಹಿಳೆಯರಿಗೆ ಸಲಹೆ ನೀಡಿದರು.

ನಗರದ ಜಾಗೃತ ಮಹಿಳಾ ಸಂಘದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಶಾ ಕಲ್ಲನಗೌಡರ್ ಅವರು ರಚಿಸಿರುವ ‘ಅಂತರಂಗದ ಧ್ವನಿ' ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

‘ಮಹಿಳೆ ತಾಯಿ, ಪತ್ನಿಯಾದಿಯಾಗಿ ಎಲ್ಲಾ ಸ್ಥಾನಗಳನ್ನು ಅಲಂಕರಿಸಿದ್ದಾಳೆ. ಆದರೆ, ತಾನು ತಾನಾಗುವುದು ಯಾವಾಗ ಎಂಬ ಪ್ರಶ್ನೆಗಳು ಕೂಡ ಈಗ ಪ್ರಸ್ತುತವಾಗಿವೆ. ಮಹಿಳೆಯರಿಗೆ ಪ್ರತಿ ನಿತ್ಯ ಒಂದೊಂದು ಆಲೋಚನೆಗಳು ಬರುತ್ತಿರುತ್ತವೆ. ಅವುಗಳನ್ನು ಹೇಳಿಕೊಳ್ಳಲು ಆಗುವುದಿಲ್ಲ. ಅಂತಹವುಗಳನ್ನು ಅಕ್ಷರೂಪ ಕೊಟ್ಟು ತಮ್ಮ ಅಂತರಾತ್ಮವನ್ನು ಹೊರಹಾಕಬೇಕಿದೆ’ ಎಂದರು.

‘ಲೇಖಕಿ ಆಶಾ ಅವರು ಸಮಾಜದಲ್ಲಿನ ಸಾಮಾಜಿಕ ಸಮಸ್ಯೆಗಳು ತಮ್ಮ ಮನಸ್ಸಿನಲ್ಲಿ ಯಾವ ರೀತಿ ತುಡಿಯುತ್ತಿದ್ದವು ಎಂಬುದನ್ನು ಬರೆದಿದ್ದಾರೆ. ಸಮಾಜದ ಕೆಲವೊಂದು ವಾಸ್ತವಿಕತೆ ಈ ಪುಸ್ತಕದಲ್ಲಿ ಅನಾವರಣಗೊಳಿಸಿದ್ದಾರೆ’ ಎಂದರು. 

ಸಾಹಿತಿ ಡಾ. ಆನಂದ್ ಋಗ್ವೇದಿ ಪುಸ್ತಕ ಕುರಿತು ಮಾತನಾಡಿ, ‘ದಾವಣಗೆರೆಯ ಹೆಸರಾಂತ ಲೇಖಕಿ ಟಿ. ಗಿರಿಜಮ್ಮ ಅವರ ನಂತರದ ಸ್ಥಾನವನ್ನು ಲೇಖಕಿ ಆಶಾ ಅವರು ತುಂಬಿದ್ದಾರೆ. ಗಿರಿಜಮ್ಮ ಅವರು ಸಮಾಜದ ವಿಚಾರಗಳಿಗೆ ಸ್ಪಂದಿಸಿ ಲೇಖನ ಬರೆಯುತ್ತಿದ್ದರು. ಆಶಾ ಅವರು ಕೂಡ ಅವರ ದಾರಿಯಲ್ಲಿಯೇ ಸಾಗುತ್ತಿದ್ದು, ಈ ಪುಸ್ತಕದಲ್ಲಿ ತಮ್ಮ ವಿಚಾರಧಾರೆಗಳ ಮೂಲಕ ಸಮಾಜದ ವಾಸ್ತವಿಕತೆ ತೆರೆದಿಟ್ಟು ಸಹೋದರ, ಸಹೋದರಿಯರು, ಸ್ನೇಹಿತರ ಕಿವಿಹಿಂಡುವ ಕೆಲಸ ಮಾಡಿದ್ದಾರೆ’ ಎಂದು ಹೇಳಿದರು.

‘ಕೆಲವರು ತಾವು ಶಿಕ್ಷಿತರು ಎಂಬುದನ್ನು ತೋರಿಸಿಕೊಳ್ಳಲು ಪುಸ್ತಕ ಬರೆಯುತ್ತಾರೆ. ಆದರೆ, ಲೇಖಕಿ ಆಶಾ ಅವರು ಆ ಗುಂಪಿಗೆ ಸೇರಿದವರಲ್ಲ. ಅಂಕಣಕ್ಕೂ ಇರುವ ಪರಿಮಿತಿಯನ್ನು ಮೀರಿ ಅವರು ಸಾಮಾಜಿಕ ಸಮಸ್ಯೆಗಳ ಕುರಿತು ವಿಶ್ಲೇಷಿಸಿದ್ದಾರೆ’ ಎಂದರು. 

ಸಾಹಿತಿ ನಾಗರಾಜ್ ಸಿರಿಗೆರೆ ಮಾತನಾಡಿ, ‘ಸಾಮಾಜಿಕ ಕಳಕಳಿ, ಸಮಾಜದ ಸಮಸ್ಯೆಗಳು ಲೇಖಕಿ ಆಶಾ ಅವರಿಗೆ ಪುಸ್ತಕ ಬರೆಯಲು ಪ್ರೇರಣೆಯಾಗಿವೆ. ಸೂಕ್ಷ್ಮ ಮನಸ್ಸಿನಿಂದ ಇವುಗಳನ್ನು ನೋಡಿ ಇವೆಲ್ಲವನ್ನು ಒಟ್ಟುಗೂಡಿಸಿ ಒಂದು ಪುಸ್ತಕ ಬರೆದು ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಯಾರೇ ಆಗಲಿ ಸಮಾಜ ಜೀವಿಯಾಗಿ ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಂಡರೆ ಸ್ವಚ್ಛ, ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ’ ಎಂದು ಹೇಳಿದರು.  ಸಂಘದ ಅಧ್ಯಕ್ಷರಾದ  ಬಿ. ವಿಮಲಾ ದಾಸ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶಿ ಉಮಾ ವೀರಭದ್ರಪ್ಪ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು