ಶನಿವಾರ, ಸೆಪ್ಟೆಂಬರ್ 26, 2020
26 °C

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಟ್ಟಡ ಕಾರ್ಮಿಕರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದಿಂದ ಕಾರ್ಮಿಕ ಇಲಾಖೆ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು.

‘ಲಾಕ್‍ಡೌನ್ ಮತ್ತು ನಂತರದ ದಿನಗಳಲ್ಲಿ ಕಲ್ಯಾಣ ಮಂಡಳಿಯ ಸೌಲಭ್ಯಗಳನ್ನು ಪಡೆಯಲು ಕಟ್ಟಡ ಕಾರ್ಮಿಕರು ಪರದಾಡುವ ಪರಿಸ್ಥಿತಿ ಬಂದಿದ್ದು, ಮಹಾನಗರಗಳಿಂದ ತಮ್ಮ ಊರುಗಳಿಗೆ ಕಾಲ್ನಡಿಗೆಯಲ್ಲಿ ತಲುಪಿದ ಲಕ್ಷಾಂತರ ಕಾರ್ಮಿಕರು ಹೊಸದಾಗಿ ಕಾರ್ಡ್ ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದಾರೆ. ಆದರೆ ಇದುವರೆಗೂ ಅನುಮೋದನೆ ನೀಡುತ್ತಿಲ್ಲ. ಇದನ್ನು ಸುಧಾರಿಸಲು ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಪ್ರತಿ ಎರಡು-ಮೂರು ತಿಂಗಳಿಗೊಮ್ಮೆ ನೋಂದಾಯಿತ ಕಾರ್ಮಿಕರ ಸಂಘಗಳೊಂದಿಗೆ ಕುಂದುಕೊರತೆ ಸಭೆಯನ್ನು ನಡೆಸಬೇಕು’ ಎಂದು ಆಗ್ರಹಿಸಿದರು.

‘ಲಾಕ್‍ಡೌನ್‍ ಘೋಷಣೆ ನಂತರ ನೋಂದಾಯಿಸಿಕೊಂಡಿರುವ ಎಲ್ಲಾ ಕಾರ್ಮಿಕರಿಗೂ ಕೋವಿಡ್-19 ಸಹಾಯಧನವನ್ನು ನೀಡಬೇಕು. ಕೊರೊನಾದಿಂದ ಬಳಲುತ್ತಿರುವ ಕಾರ್ಮಿಕರು ಹಾಗೂ ಅವರ ಕುಟುಂಬದ ವೈದ್ಯಕೀಯ ವೆಚ್ಚವನ್ನು ಭರಿಸಬೇಕು. ಆ ಅವಧಿಯ ವೇತನ ನೀಡಬೇಕು. ಮಂಡಳಿಯಿಂದ ಬಿಎಂಟಿಸಿಯಲ್ಲಿ ಸಂಚರಿಸಲು ಉಚಿತ ಬಸ್ ಪಾಸ್ ನೀಡುವಂತೆ ರಾಜ್ಯದ ಎಲ್ಲಾ ಸಾರಿಗೆ ನಿಗಮಗಳಲ್ಲಿಯೂ ನೀಡಬೇಕು’ಎಂದು ಆಗ್ರಹಿಸಿದರು.

ಕಾರ್ಮಿಕ ಚಿಕಿತ್ಸಾ ಭಾಗ್ಯವನ್ನು (ಪ್ರಮುಖ ವೈದ್ಯಕೀಯ ಚಿಕಿತ್ಸಾ ವೆಚ್ಚ ಮರುಪಾವತಿ) ಕಟ್ಟಡ ಕಾರ್ಮಿಕನ ಕುಟುಂಬದ ಸದಸ್ಯರಿಗೂ ವಿಸ್ತರಿಸಬೇಕು. ಪಿಂಚಣಿ ಯೋಜನೆಗೆ ಅರ್ಹರಾಗಿರುವ ಕಾರ್ಮಿಕರಿಗೆ ಆರು ತಿಂಗಳೊಳಗೆ ಅರ್ಜಿ ಸಲ್ಲಿಸಬೇಕು ಎನ್ನುವ ಷರತ್ತನ್ನು ತೆಗೆದುಹಾಕಿ ವಯಸ್ಸಿನ ಆಧಾರದಲ್ಲಿ ಅರ್ಜಿ ಸಲ್ಲಿಸದಿದ್ದರೂ ಪಿಂಚಣಿ ನೀಡಬೇಕು. ‘ಕಾರ್ಮಿಕ ಗೃಹಭಾಗ್ಯ’ ಯೋಜನೆಗೆ ನೀಡುವ ಸಹಾಯಧನ, ಸಾಲಕ್ಕೆ ನಿಗದಿಗೊಳಿಸಿರುವ ಷರತ್ತುಗಳನ್ನು ಅರ್ಹ ಕಾರ್ಮಿಕರಿಗೂ ಸಿಗುವಂತೆ ಸರಳೀಕರಿಸಬೇಕು’ ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಸಂಚಾಲಕ ಮಂಜುನಾಥ್ ಕುಕ್ಕುವಾಡ, ತಿಪ್ಪೇಸ್ವಾಮಿ ಅಣಬೇರು, ಸಿದ್ದೇಶ್ ಕುಕ್ಕುವಾಡ, ಹಾಲೇಶ್ ಜರೀಕಟ್ಟೆ, ಪ್ರಭು ನಾಗರಸನಹಳ್ಳಿ, ರಫೀಕ್ ದಾವಣಗೆರೆ, ಮಮತಾ, ರೇಖಾ, ರಂಗನಾಥ್, ಸತೀಶ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು