ಸೋಮವಾರ, ಆಗಸ್ಟ್ 8, 2022
21 °C

ಡ್ರಗ್ಸ್ ದಂಧೆ: ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದ ಸಚಿವ ಬೈರತಿ ಬಸವರಾಜ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಡ್ರಗ್ಸ್ ದಂಧೆಯನ್ನು ಮಟ್ಟ ಹಾಕಲು ಮುಖ್ಯಮಂತ್ರಿ ಹಾಗೂ ಗೃಹಸಚಿವರು ದೃಢ ನಿರ್ಧಾರ ತೆಗೆದುಕೊಂಡಿದ್ದು, ರಾಜಕಾರಣಿಗಳ ಮಕ್ಕಳು ಯಾರೇ ಆಗಲಿ ಶಿಕ್ಷೆ ಖಚಿತ. ಉಪ್ಪು ತಿಂದವರು ನೀರು ಕುಡಿಯಲೇಬೇಕು’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಹೇಳಿದರು.

ದಾವಣಗೆರೆಯಲ್ಲಿ ಮಾತನಾಡಿದ ಅವರು, ‘ನಟಿ ರಾಗಿಣಿ ಬಂಧನದ ಬಳಿಕ ರಾಜಕಾರಣಿಗಳು ಒತ್ತಡ ಹೇರಿದ ಬಗ್ಗೆ ಗೊತ್ತಿಲ್ಲ. ಯಾರು ಒತ್ತಡ ಹೇರಿದ್ದಾರೆ ಎಂಬುದು ತನಿಖೆ ಮಾಡುವ ಅಧಿಕಾರಿಗಳಿಗೆ ಗೊತ್ತಿದೆ. ರಾಗಿಣಿ ಬಿಜೆಪಿ ಸೇರಲು ಬಯಸಿದ್ದ ಬಗ್ಗೆಯೂ ನನಗೆ ಗೊತ್ತಿಲ್ಲ. ಇಂತಹ ವಿಷಯದ ಬಗ್ಗೆ ರಾಷ್ಟ್ರೀಯ, ರಾಜ್ಯ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ’ ಎಂದರು.

ವಿಜಯೇಂದ್ರ ಹಸ್ತಕ್ಷೇಪ ಇಲ್ಲ: ‘ಸರ್ಕಾರದಲ್ಲಿ ವಿಜಯೇಂದ್ರ ಅವರ ಹಸ್ತಕ್ಷೇಪ ಇದೆ ಎಂಬುದು ತಪ್ಪು ಕಲ್ಪನೆ. ಸರ್ಕಾರಕ್ಕೂ ಅವರಿಗೂ ಯಾವುದೇ ಸಂಬಂಧ ಇಲ್ಲ.  ಇದು ಊಹಾಪೋಹ. ಏನಾದರೂ ಮಾಡಬೇಕು ಅವರ ಮೇಲೆ ಗೂಬೆ ಕೂರಿಸಬೇಕು ಎಂಬ ದೃಷ್ಟಿಯಿಂದ ಹೇಳಿಕೆ ನೀಡುತ್ತಿದ್ದಾರೆ. ಹಸ್ತಕ್ಷೇಪ ಮಾಡುತ್ತಿಲ್ಲ. ಅವರು ಅವರದೇ ಆದ ಕಾರ್ಯಕ್ರಮದಲ್ಲಿ ಇದ್ದಾರೆ. ಗೊಂದಲ ಸೃಷ್ಟಿಸಬೇಕು ಏನಾದರೂ ಹುಡುಕಬೇಕು ಎನ್ನುವ ದೃಷ್ಟಿಯಿಂದ, ಆಡಿಯೊ ಇದ್ದರೆ ಕೊಡಿ’ ಎಂದಷ್ಟೇ ಉತ್ತರಿಸಿದರು.

ಸಚಿವರ ಬದಲಾವಣೆ ಸಿಎಂ ವಿವೇಚನೆಗೆ ಬಿಟ್ಟಿದ್ದು: ‘ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಮಾಡುವುದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಅವರಿಗೆ ಅಧಿಕಾರ ಇದ್ದು, ಯಾವಾಗ ಬೇಕಾದರೂ ಸಂಪುಟ ವಿಸ್ತರಣೆ ಮಾಡುವ ತೀರ್ಮಾನ ಕೈಗೊಳ್ಳಬಹುದು. ಎಂಟಿಬಿ ನಾಗರಾಜ್, ಆರ್.ಶಂಕರ್ ಅವರಿಗೆ ಸಚಿವ ಸ್ಥಾನ ನೀಡುವುದಕ್ಕಾಗಿಯೇ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದ್ದಾರೆ. ಮುಖ್ಯಮಂತ್ರಿಗಳ ನಿರ್ಧಾರಕ್ಕೆ ಬದ್ಧರಾಗಿದ್ದೇವೆ’ ಎಂದರು.

‘ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸಿಗದೇ ಇರುವ ಪ್ರಕರಣಗಳು ಜಿಲ್ಲೆಯಲ್ಲಿ ನೆಡೆದಿಲ್ಲ. ಯಾವುದೇ ಪ್ರಕರಣಗಳು ನಡೆಯದಂತೆ ಎಚ್ಚರಿಕೆಯಿಂದ ಕೆಲಸ ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚಿಸುತ್ತೇನೆ. ಜಿಲ್ಲೆಯಲ್ಲಿ 25 ವೆಂಟಿಲೇಟರ್‌ಗಳನ್ನು ಜೋಡಿಸುವ ಕಾರ್ಯ ನಡೆಯುತ್ತಿದೆ. ಇದಕ್ಕೆ ಬೇಕಾದ ವೈದ್ಯರು ಹಾಗೂ ಸಿಬ್ಬಂದಿ ನೇಮಕದ ಬಗ್ಗೆ ಚರ್ಚಿಸುತ್ತೇನೆ’ ಎಂದರು.

‘ಜಿಲ್ಲೆಗೆ ಉತ್ತಮ ಕಾರ್ಯ ಮಾಡಬೇಕು ಎನ್ನುವ ದೃಷ್ಟಿಯಿಂದ ನಾನು ಬಂದ 4 ತಿಂಗಳಲ್ಲೇ ಕೋವಿಡ್ ಟೆಸ್ಟ್ ಲ್ಯಾಬ್ ಆರಂಭವಾಗಿದೆ. ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಮುಖ್ಯಮಂತ್ರಿಗಳನ್ನು ಇನ್ನಷ್ಟು ಅನುದಾನ ಕೇಳಿದ್ದೇನೆ. ಹೆಣ ನೋಡಲು ಆಸ್ಪತ್ರೆಯ ಸಿಬ್ಬಂದಿ ಹಣ ಕೇಳುತ್ತಾರೆ ಎನ್ನುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಆ ತರಹದ ಯಾವುದಾದರೂ ಪ್ರಕರಣ ಇದ್ದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು