ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷ್ಮೆ ಮನೆಯಲ್ಲಿ ಸೆರೆಯಾದ ಚಿರತೆ

ರೈತರು ಮಾಡಿದ ಉಪಾಯದಿಂದ ಚಿರತೆ ಸೆರೆ
Last Updated 3 ಆಗಸ್ಟ್ 2021, 5:00 IST
ಅಕ್ಷರ ಗಾತ್ರ

ಹರಪನಹಳ್ಳಿ: ಸಾಕುಪ್ರಾಣಿಗಳನ್ನು ತಿಂದು ಹಾಕಿ ಗ್ರಾಮಸ್ಥರನ್ನು ನಿದ್ದೆಗೆಡಿಸಿದ್ದ ಚಿರತೆಯನ್ನು ತಾಲ್ಲೂಕಿನ ಚಿಕ್ಕಮಜ್ಜಿಗೇರೆ ರೈತರು ಉಪಾಯದಿಂದ ರೇಷ್ಮೆ ಮನೆಯಲ್ಲಿ ಸೆರೆಹಿಡಿಯುವಲ್ಲಿ ಸೋಮವಾರ ರಾತ್ರಿ ಯಶಸ್ವಿಯಾಗಿದ್ದಾರೆ.

ತೋಟದ ಮಾಲೀಕರಾದ ವಿರೂಪಾಕ್ಷಪ್ಪ, ಬಸಪ್ಪ, ಮಂಜಪ್ಪ ಅವರ ಮನೆಯಲ್ಲಿ ಚಿರತೆ ಸೆರೆಯಾಗಿದೆ. ಭಾನುವಾರ ಗ್ರಾಮದ ರೈತರೊಬ್ಬರ ಏಳು ತಿಂಗಳ ಹೋರಿಕರುವಿನ ಮೇಲೆ ದಾಳಿ ಮಾಡಿ ಸಾಯಿಸಿತ್ತು, ತಿಂದು ಉಳಿದಿದ್ದ ಮಾಂಸವನ್ನು ಜಮೀನಿನ ಮೂಲೆಯೊಂದರಲ್ಲಿ ಬಿಟ್ಟು ಹೋಗಿತ್ತು.

ಇದನ್ನು ಗಮನಿಸಿದ ರೈತರು, ಕರುವಿನ ಕಳೆಬರವನ್ನು ತೆಗೆದುಕೊಂಡು ಹೋಗಿ ರೇಷ್ಮೆ ಮನೆಯಲ್ಲಿ ನೇತು ಹಾಕಿ, ಅದೇ ಹಗ್ಗಕ್ಕೆ ಗಂಟೆ ಕಟ್ಟಿದ್ದರು. ಮನೆಯ ಬಾಗಿಲಿಗೂ ಉದ್ದವಾದ ಹಗ್ಗ ಕಟ್ಟಿ, ಸಂಜೆ ಚಿರತೆ ಒಳಗಡೆ ಪ್ರವೇಶ ಮಾಡುತ್ತಿದ್ದಂತೆಯೇ ರೈತ ವಿರೂಪಾಕ್ಷಪ್ಪ ಬಾಗಿಲು ಮುಚ್ಚಿ ಅರಣ್ಯ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ ಎನ್ನಲಾಗಿದೆ. ಚಿರತೆಯನ್ನು ನೋಡಲು ಗ್ರಾಮದ ನೂರಾರು ಜನರು ಜಮಾಯಿಸಿದ್ದರು.

ರೈತ ಮಲ್ಲಿಕಾರ್ಜುನ್ ಮಾತನಾಡಿ, ‘ಅನೇಕ ದಿನಗಳಿಂದ ನಮ್ಮ ಗ್ರಾಮದ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾಗಿದ್ದು, ಗ್ರಾಮದ ವಿವಿಧ ರೈತರ ಕುರಿ, ಮೇಕೆ, ನಾಯಿ, ಕರುಗಳನ್ನು ತಿಂದು ಹಾಕುತ್ತಿದೆ. ಭಾನುವಾರ ಕರುವನ್ನು ಸಾಯಿಸಿತ್ತು. ಮಾಂಸದ ವಾಸನೆಗೆ ಚಿರತೆ ಬರುತ್ತದೆ ಎಂದು ಊಹಿಸಿಕೊಂಡು, ಸತ್ತಿದ್ದ ಕರುವನ್ನು ತೆಗೆದುಕೊಂಡು ರೇಷ್ಮೆ ಮನೆಯಲ್ಲಿ ಕಟ್ಟಿ, ದೂರದಲ್ಲಿ ಕುಳಿತುಕೊಂಡಿದ್ದೆವು’ ಎಂದರು.

ನಾವು ಅಂದುಕೊಂಡಂತೆ ಬಂದ ಚಿರತೆ ಮನೆ ಒಳಗೆ ಹೋಗುತ್ತಿದ್ದಂತೆಯೇ ಹಗ್ಗದಿಂದ ಬಾಗಿಲನ್ನು ಭದ್ರವಾಗಿ ಮುಚ್ಚಿದೆವು ಎಂದು ನಡೆದ ಘಟನೆಯನ್ನು ವಿವರಿಸಿದರು. ಪೂಜಾರ ಬಸಪ್ಪ, ಈರಪ್ಪ, ಮಂಜಪ್ಪ, ಮಲ್ಲಿಕಾರ್ಜುನ್, ಕೊಟ್ರೇಶ್, ಹಾಲೇಶ್, ಪ್ರಶಾಂತ್, ಬಸಪ್ಪ ಇತರರಿದ್ದರು.

ದೌಡಾಯಿಸಿದ ಅರಣ್ಯ ಸಿಬ್ಬಂದಿ

ಗ್ರಾಮದ ಸಮೀಪದಲ್ಲಿರುವ ತೋಟದಲ್ಲಿ ಚಿರತೆ ವಿಷಯ ತಿಳಿಯುತ್ತಿದ್ದಂತೆಯೇ ವಲಯ ಅರಣ್ಯಾಧಿಕಾರಿ ಡಿ. ಭರತ್ ನೇತೃತ್ವದ ಸಿಬ್ಬಂದಿ ದೌಡಾಯಿಸಿದರು. ಬೇರೆಡೆಗೆ ಇದ್ದ ಬೋನಿನಲ್ಲಿ ಚಿರತೆಯನ್ನು ಸೆರೆ ಹಿಡಿದು ತೆಗೆದುಕೊಂಡು ಹೋಗುವುದಾಗಿ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT