ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಷಾನಗರದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ

ಜಾಲಿನಗರದಲ್ಲಿ 17 ಮಂದಿಯನ್ನು ಇನ್‌ಸ್ಟಿಟ್ಯೂಷನ್‌ಗೆ ಕಳುಹಿಸಿದ ಕಮಾಂಡರ್‌
Last Updated 1 ಮೇ 2020, 9:13 IST
ಅಕ್ಷರ ಗಾತ್ರ

ದಾವಣಗೆರೆ: ಬಾಷಾನಗರದ ಕಂಟೈನ್‌ಮೆಂಟ್‌ ವಲಯದಲ್ಲಿ ಸಿಸಿಟಿವಿ ಕ್ಯಾಮೆರಾವನ್ನು ಇನ್ಸಿಡೆಂಟ್‌ ಕಮಾಂಡರ್‌ ಮಮತಾ ಹೊಸಗೌಡರ್‌ ಅಳವಡಿಸಿದ್ದಾರೆ. ಜಾಲಿನಗರದಲ್ಲಿ ಸೋಂಕು ಪತ್ತೆಯಾದವರಿಗೆ ನಿಕಟವರ್ತಿಗಳಾಗಿದ್ದ 17 ಮಂದಿಯನ್ನು ಪತ್ತೆ ಹಚ್ಚಿರುವ ಇನ್ಸಿಡೆಂಟ್‌ ಕಮಾಂಡರ್‌ ಕುಮಾರಸ್ವಾಮಿ ಅವರನ್ನು ಹೋಟೆಲ್‌ಗಳಲ್ಲಿ ಇನ್‌ಸ್ಟಿಟ್ಯೂಷನಲ್‌ ಕ್ವಾರಂಟೈನ್‌ಗೆ ಒಳಪಡಿಸಿದ್ದಾರೆ.

‘ಸೀಲ್‌ಡೌನ್‌ ಏರಿಯಾದ ಹೊರಗಿನ ಗೇಟ್‌ನಲ್ಲಿ ಪೊಲೀಸರು, ನಮ್ಮ ಸಿಬ್ಬಂದಿ ಇರುವುದರಿಂದ ನಿರ್ವಹಣೆ ಸುಲಭ. ಆದರೆ ಒಳಗೆ ನಿರ್ವಹಿಸುವುದು ಕಷ್ಟ. ಅದಕ್ಕಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಲ್ಲದೇ ಅಲ್ಲಿ ನಡೆಯುವ ಚಟುವಟಿಕೆ ನನ್ನ ಮೊಬೈಲ್‌ನಲ್ಲೇ ಕಾಣುವಂತೆ ಮಾಡಿದ್ದೇನೆ. ಅಲ್ಲಿರುವ ಏಳೆಂಟು ಮುಖಂಡರಿಗೆ ಈ ಬಗ್ಗೆ ಮಾಹಿತಿ ಕೂಡ ನೀಡಿದ್ದೇನೆ’ ಎಂದು ಉಪ ವಿಭಾಗಾಧಿಕಾರಿಯೂ ಆಗಿರುವ ಮಮತಾ ಹೊಸಗೌಡರ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಸೀಲ್‌ಡೌನ್‌ ಪ್ರದೇಶದಲ್ಲಿ ಯಾವುದೂ ತೆರೆದಿರಬಾರದು. ಆದರೂ ಮೂರು ಮೆಡಿಕಲ್‌ ಶಾಪ್‌ಗಳು ತೆರೆದಿದ್ದವು. ಅವುಗಳನ್ನು ಬಂದ್‌ ಮಾಡಿಸಿದ್ದೇನೆ. ಒಂದು ಕ್ಲೀನಿಕ್‌ ತೆರೆದಿದ್ದು, ಅದರ ವಿರುದ್ಧ ಕ್ರಮ ಕೈಗೊಳ್ಳಲು ಮೇಲಧಿಕಾರಿಗೆ ಬರೆದಿದ್ದೇನೆ’ ಎಂದು ಇಂದಿನ ಚಟುವಟಿಕೆ ವಿವರಿಸಿದರು.

‘ಸ್ಥಳೀಯ ಪಿಎಸ್‌ಐ ಶೈಲಜಾ ಮತ್ತು ನಾನು ಸೀಲ್‌ಡೌನ್‌ ಪ್ರದೇಶದ ಒಳಗೆ ಹೋಗಿ ಅಲ್ಲಿನವರಿಗೆ ಜಾಗೃತಿ ಮೂಡಿಸಿದ್ದೇವೆ. ಸ್ಥಳೀಯ ಧಾರ್ಮಿಕ ಮುಖಂಡರು ಕೂಡ ಉತ್ತಮ ಸ್ಪಂದನೆ ನೀಡಿದ್ದಾರೆ. ಯಾವುದೇ ಕಾರಣಕ್ಕೆ ಯಾರೂ ಹೊರಬರುವುದಿಲ್ಲ ಎಂದು ತಿಳಿಸಿದ್ದಾರೆ. ಜನರು ಹೊರ ಬಾರದಂತೆ ಮನವೊಲಿಸಿ ಎಂದು ನಾವೂ ಸೂಚನೆ ನೀಡಿದ್ದೇವೆ. ಜಿಲ್ಲಾ ಸರ್ವೇಕ್ಷಣಾಧಿಕಾರಿಗೆ ತಿಳಿಸಿ ಒಂದು ಆಂಬುಲೆನ್ಸ್‌ ಸದಾ ಜಾಗೃತ ಸ್ಥಿತಿಯಲ್ಲಿರುವಂತೆ ವ್ಯವಸ್ಥೆ ಮಾಡಿದ್ದೇನೆ. ಆರೋಗ್ಯ ಸಮಸ್ಯೆ ಎದುರಾದರೆ ಜನರು ನಮ್ಮ ತಂಡವನ್ನು ಸಂಪರ್ಕಿಸಿದ ಕೂಡಲೇ ಆಂಬುಲೆನ್ಸ್‌ ಒದಗಿಸಲಾಗುತ್ತದೆ’ ಎಂದರು.

‘ಸ್ಲಂ ಸಂಬಂಧ ಇರುವುದರಿಂದ ಬೇಗನೇ ಹರಡುವ ಅಪಾಯ ಇರುವುದರಿಂದ ಹೆಚ್ಚು ಎಚ್ಚರಿಕೆಯಿಂದ ಇರಬೇಕಾದ ಅಗತ್ಯವನ್ನು ಜಾಲಿನಗರದಲ್ಲಿ ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಮನೆಯಿಂದ ಹೊರಬರುವುದಿಲ್ಲ ಎಂದು ಜನರು ಒಪ್ಪಿಕೊಂಡಿದ್ದಾರೆ’ ಎಂದು ದೂಡಾ ಆಯುಕ್ತರೂ ಆಗಿರುವ ಬಿ.ಟಿ. ಕುಮಾರಸ್ವಾಮಿ ತಿಳಿಸಿದ್ದಾರೆ.

‘ಪಾರ್ಕ್‌ ಬಳಿಯ ಕೆಲವು ನಿವಾಸಿಗಳಿಗೂ ಕೋವಿಡ್‌ ಸೋಂಕು ಪತ್ತೆಯಾಗಿರುವವರಿಗೂ ನಿಕಟ ಸಂಪರ್ಕ ಇರುವುದು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಯಿತು’ ಎಂದು ವಿವರಿಸಿದರು.

ಮೂರು ಪಾಳಿಯಲ್ಲಿ ಕೆಲಸ

24*7 ಕೆಲಸ ಮಾಡಲು ಪೊಲೀಸರು, ಪಾಲಿಕೆ, ಆರೋಗ್ಯ ಇಲಾಖೆಗಳು ಒಳಗೊಂಡಂತೆ 12 ಮಂದಿಯನ್ನು ಕಮಾಂಡರ್‌ ಟೀಮ್‌ ಮಾಡಲಾಗಿದೆ. ಈ ಟೀಮ್‌ ಮೂರು ಪಾಳಿಯಲ್ಲಿ ಕೆಲಸ ಮಾಡುತ್ತದೆ.

ಈ ತಂಡದ ಪಾತ್ರವೇನು? ನಿರ್ವಹಣೆ ಹೇಗೆ? ಎಂಬುದನ್ನು ಇನ್ಸಿಡೆಂಟ್‌ ಕಮಾಂಡರ್‌ ಸಭೆ ನಡೆಸಿ ತಿಳಿಸಿದ್ದಾರೆ.

ದಿನಸಿ, ಹಾಲು, ಮೆಡಿಕಲ್‌ ಸಹಿತ ಜನರಿಗೆ ಅಗತ್ಯ ಇದ್ದರೆ ಕೂಡಲೇ ಕರೆ ಮಾಡಲು ಮೂವರ ಮೊಬೈಲ್‌ ಸಂಖ್ಯೆ ಇರುವ ಕರಪತ್ರವನ್ನು ವಿತರಿಸಲಾಗಿದೆ. ಕರೆ ಬಂದರೆ ಅವರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಅವರ ಮನೆಗೇ ತಲುಪಿಸಲಾಗುತ್ತದೆ.

ಆರೋಗ್ಯ ಸಮಸ್ಯೆಯಾದರೆ ಕರೆ ಮಾಡಲು ಹೆ‌ಲ್ಪ್‌ಲೈನ್‌ ನಂಬರ್‌ ಕೂಡ ಅದರಲ್ಲಿ ಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT