ಸೋಮವಾರ, ಅಕ್ಟೋಬರ್ 18, 2021
24 °C
‘ಗಾಂಧಿ ಮತ್ತು ಕೋಮು ಸೌಹಾರ್ದ’ ವಿಚಾರ ಸಂಕಿರಣದಲ್ಲಿ ವಕೀಲ ಅರುಣ ಕುಮಾರ್‌

ದಾವಣಗೆರೆ: ರಜೆ ನೀಡದೇ ಗಾಂಧಿ ಜಯಂತಿ ಆಚರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಮಹಾತ್ಮ ಗಾಂಧೀಜಿ ಸೇರಿದಂತೆ ಎಲ್ಲ ಆದರ್ಶ ವ್ಯಕ್ತಿಗಳ ದಿನವನ್ನು ಶಾಲೆಗಳಿಗೆ ರಜೆ ನೀಡಿ ಆಚರಿಸುವ ಬದಲು ರಜೆ ನೀಡದೇ ವಿದ್ಯಾರ್ಥಿಗಳಿಗೆ ಅವರ ತತ್ವ, ಸಿದ್ಧಾಂತಗಳನ್ನು ತಿಳಿಸಿ ಕೊಡುವ ಕೆಲಸ ಆಗಬೇಕು ಎಂದು ಹಿರಿಯ ವಕೀಲ ಎಲ್‌.ಎಚ್‌. ಅರುಣ ಕುಮಾರ್‌ ಹೇಳಿದರು.

ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ವತಿಯಿಂದ ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ಯೂನಿಯನ್‌ನ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡ ‘ಗಾಂಧಿ ಮತ್ತು ಕೋಮು ಸೌಹಾರ್ದ’ ವಿಚಾರ ಸಂಕಿರಣ ಹಾಗೂ ಮನೆಗೆಲಸ, ಕಟ್ಟಡ ಕಾರ್ಮಿಕರಿಗೆ ಫುಡ್‌ಕಿಟ್‌ ವಿತರಣೆ ಕಾರ್ಯಕ್ರಮವನ್ನು ಉದ್ಭಾಟಿಸಿ ಅವರು ಮಾತನಾಡಿದರು.

ಗಾಂಧಿ ಜಯಂತಿ ಅಂದರೆ ರಜೆ ಎಂಬುದನ್ನು ಮಕ್ಕಳ ಮನಸ್ಸಿನಿಂದ ಹೋಗಲಾಡಿಸುವ ಕೆಲಸ ಆಗಬೇಕು. ಗಾಂಧೀಜಿಯ ಚಿಂತನೆಗಳನ್ನು, ಅವರ ಬದುಕಿನ ರೀತಿಯನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು. ಯಾಕೆಂದರೆ ವರ್ಷಗಳು ಕಳೆದಂತೆ ಗಾಂಧೀಜಿ ಅವರನ್ನು ಮರೆಗೆ ಸರಿಸುವ ಪ್ರಯತ್ನಗಳಾಗುತ್ತಿವೆ. ಎಲ್ಲ ಕಾಲಕ್ಕೂ ಪ್ರಸ್ತುತರಾದ ಗಾಂಧಿಯವರನ್ನು ಈ ರೀತಿ ಮರೆಯಾಗಲು ಬಿಡಬಾರದು ಎಂದು ಹೇಳಿದರು.

ಪ್ರಜಾಪ್ರಭುತ್ವ ಮತ್ತು ಹಿಂಸೆ, ಒಳ್ಳೆಯ ಸರ್ಕಾರ ಮತ್ತು ಭ್ರಷ್ಟಾಚಾರ ಒಟ್ಟೊಟ್ಟಿಗೆ ಇರಲು ಸಾಧ್ಯವಿಲ್ಲ. ಗಾಂಧೀಜಿಯ ತತ್ವಕ್ಕೆ ವಿರುದ್ಧವಾಗಿ ಆಡಳಿತ ನಡೆಸುವವರು, ಅಧಿಕಾರಿಗಳು ಇದ್ದಾರೆ. ಜಾತ್ಯತೀತ, ಕೋಮು ಸೌಹಾರ್ದಕ್ಕೆ ಮತ್ತೊಂದು ಹೆಸರಾದ ಗಾಂಧೀಜಿಯ ತತ್ವಗಳು ಆಡಳಿತ ನಡೆಸುವವರಿಗೆ ಪಾಠ ಆಗಬೇಕು ಎಂದರು.

ಪೀಪಲ್ಸ್‌ ಲಾಯರ್ಸ್‌ ಗಿಲ್ಡ್‌ ಅಧ್ಯಕ್ಷ ಅನೀಸ್‌ ಪಾಷ ಮಾತನಾಡಿ, ‘ಪ್ರೀತಿಯಿಂದ, ಸೌಹಾರ್ದದಿಂದ, ಶಾಂತಿಯಿಂದ, ಅಹಿಂಸೆಯಿಂದ ಕಟ್ಟಿದ ದೇಶ ಬೆಳೆಯುತ್ತದೆ. ಉನ್ನತ ಸ್ಥಾನಕ್ಕೆ ಹೋಗುತ್ತದೆ. ದ್ವೇಷದಿಂದ ದೇಶ ಕಟ್ಟಲು ಹೊರಟರೆ ಅದಕ್ಕೆ ದೀರ್ಘಾಯುಷ್ಯ ಇರುವುದಿಲ್ಲ’ ಎಂದು ಹೇಳಿದರು.

ಬ್ರಿಟಿಷರಿಂದ ವಿಮೋಚನೆ, ಹಸಿವಿನಿಂದ, ಬಡತನದಿಂದ, ಅಸಮಾನತೆಯಿಂದ ವಿಮೋಚನೆ ಗಾಂಧೀಜಿಯ ಗುರಿಯಾಗಿತ್ತು. ಅದರಲ್ಲಿ ಬ್ರಿಟಿಷರಿಂದ ವಿಮೋಚನೆ ಮಾತ್ರ ಸಿಕ್ಕಿತು. ಹಸಿವಿನಿಂದ, ಬಡತನದಿಂದ, ಅಸಮಾನತೆಯಿಂದ ವಿಮೋಚನೆ ಇನ್ನೂ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಎಲ್ಲರೂ ಶಾಂತಿಯಿಂದ, ಸೌಹಾರ್ದದಿಂದ ಇರಬೇಕು. ಸರ್ಕಾರ ಎಲ್ಲರ ಪರ ಇರಬೇಕು ಎಂಬುದು ನಮ್ಮ ಸಂವಿಧಾನದ ಆಶಯ. ಆದರೆ ಕರ್ನಾಟಕದ ಅಸೆಂಬ್ಲಿಯಲ್ಲಿಯೇ ಆರ್‌ಎಸ್‌ಎಸ್‌ಗೆ ಜೈಕಾರ ಕೂಗಿರುವುದು ದೇಶ ಎತ್ತ ಸಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.

‘ಅಂಬೇಡ್ಕರ್‌, ಗಾಂಧೀಜಿ, ನೆಹರೂ ಅವರ ಸಿದ್ಧಾಂತಗಳಲ್ಲಿ, ಹೋರಾಟಗಳಲ್ಲಿ ವ್ಯತ್ಯಾಸ ಇರಬಹುದು. ಎಲ್ಲವನ್ನು ಗೌರವಿಸುತ್ತಾ, ಒಳ್ಳೆಯ ಅಂಶಗಳನ್ನು ನಾವು ಪಡೆದುಕೊಳ್ಳಬೇಕು. ದ್ವೇಷಿಸುವುದು ಅದಕ್ಕೆ ಪರಿಹಾರ ಅಲ್ಲ’ ಎಂದು ಸಲಹೆ ನೀಡಿದರು.

ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ಅಧ್ಯಕ್ಷೆ ಜಬೀನಾ ಖಾನಂ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಕರಿಬಸಪ್ಪ ಎಂ., ಮನೆಕೆಲಸದವರ ಯೂನಿಯನ್‌ನ ಲಕ್ಷ್ಮಮ್ಮ, ಬೀಡಿ ಕಾರ್ಮಿಕರ ಯೂನಿಯನ್‌ನ ಶಿರಿನ್ ಬಾನು, ಪ್ರಗತಿಪರ ಚಿಂತಕರಾದ ಅಬ್ದುಲ್‌ ಘನಿ ತಾಹೀರ್‌, ಬಾಲಕೃಷ್ಣ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು