ಗುರುವಾರ , ಜುಲೈ 16, 2020
23 °C
ಎಂಥ ಸಂದಿಗ್ಧ ಪರಿಸ್ಥಿತಿಯನ್ನೂ ನಿಭಾಯಿಸಬಲ್ಲೆವು ಎಂಬುದಕ್ಕೆ ಸಾಕ್ಷಿ ಇದು ಎಂದು ಜಿಲ್ಲಾಧಿಕಾರಿ

ದಾವಣಗೆರೆಯಲ್ಲಿ 9 ದಿನಗಳಲ್ಲಿ 100 ಮಂದಿ ಸೋಂಕಿತರು ಗುಣಮುಖ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ನಾವೆಲ್‌ ಕೊರೊನಾ ವೈರಸ್‌ ಸೋಂಕಿಗೆ ಒಳಗಾಗಿದ್ದವರಲ್ಲಿ ಕಳೆದ ಒಂಬತ್ತು ದಿನಗಳಲ್ಲಿ 100 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಸೋಂಕು ಶತಕ ದಾಟಿ ಮುನ್ನುಗ್ಗುತ್ತಿದ್ದ ಜಿಲ್ಲೆಯಲ್ಲಿ ಈಗ ಬಿಡುಗಡೆಯಾಗುವವರ ಸಂಖ್ಯೆ ಏರುತ್ತಿರುವುದು ಸಮಾಧಾನ ಉಂಟು ಮಾಡಿದೆ.

ವಿದೇಶದಿಂದ ಬಂದಿದ್ದ ಇಬ್ಬರು ಏಪ್ರಿಲ್‌ ಮೊದಲ ವಾರದಲ್ಲಿ ಬಿಡುಗಡೆಗೊಂಡಿದ್ದರು. ಏಪ್ರಿಲ್‌ ಕೊನೆಗೆ ಮತ್ತೆ ಸೋಂಕು ಪತ್ತೆಯಾಗಿತ್ತು. ನಂತರ ಒಂದೇ ಸಮನೆ ಸೋಂಕಿತರ ಸಂಖ್ಯೆ ಏರುತ್ತಲೇ ಹೋಯಿತು. ಮೇ 19ರಂದು ನೂರರ ಗಡಿ ದಾಟಿತ್ತು.

ಅದರ ಮರುದಿನ ಮೇ 20ರಂದು ಎರಡನೇ ಹಂತದ ಬಿಡುಗಡೆ ಪರ್ವಕ್ಕೆ ಚಾಲನೆ ದೊರೆಯಿತು. ಮೊದಲ ದಿನವೇ 7 ಮಂದಿ ಮನೆ ಸೇರಿದರು. ಅಲ್ಲಿಂದ ಪ್ರತಿದಿನ ಆಸ್ಪತ್ರೆಯಿಂದ ಬಿಡುಗಡೆಗೊಳ್ಳತೊಡಗಿದರು. ಹಾಗಾಗಿ ಒಟ್ಟು ಸೋಂಕಿತರ ಸಂಖ್ಯೆ ನೂರೈತ್ತರ ಗಡಿ ದಾಟಿದ್ದರೂ (156) ಸಕ್ರಿಯ ಪ್ರಕರಣಗಳ ಸಂಖ್ಯೆ 31ಕ್ಕೆ ಸೀಮಿತವಾಗಿದೆ. ನಾಲ್ವರು ಮೃತಪಟ್ಟಿದ್ದರೆ 121 ಮಂದಿ ಬಿಡುಗಡೆಗೊಂಡಿದ್ದಾರೆ.

‘ಇದು ನನ್ನ ಸಾಧನೆಯಲ್ಲ. ನಮ್ಮ ತಂಡದ ಪ್ರತಿಯೊಬ್ಬರೂ ತಮಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರಿಂದ ಸಾಧ್ಯವಾಯಿತು. ವೈದ್ಯರು, ಶುಶ್ರೂಷಕರು, ಸಹಾಯಕರು, ಆಸ್ಪತ್ರೆಯ ಎಲ್ಲ ಸಿಬ್ಬಂದಿ, ಆಡಳಿತಗಾರರು, ಪೊಲೀಸರು ಎಲ್ಲರ ಸಹಕಾರದಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಈ ಪರಿಯಲ್ಲಿ ಕಾಣಲು ಸಾಧ್ಯವಾಗಿದೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ನಾನೊಬ್ಬ ಎಲ್ಲರಂತೆ ಸೇವಕ. ಉಳಿದ ಎಲ್ಲರೂ ಒಳ್ಳೆಯ ಕೆಲಸ ಮಾಡಿದ್ದರಿಂದ ಸಕಾರಾತ್ಮಕ ಫಲಿತಾಂಶ ಬಂದಿದೆ. ಎಂಥ ಸಂದಿಗ್ಧ ಪರಿಸ್ಥಿತಿಯನ್ನೂ ನಿಭಾಯಿಸಬಹುದು ಎಂಬುದಕ್ಕೆ ಈಗ ಬಿಡುಗಡೆಯಾಗುತ್ತಿರುವವರೇ ಸಾಕ್ಷಿ’ ಎಂದು ತಿಳಿಸಿದರು.

‘ಸೋಂಕು ಪತ್ತೆಯಾದಾಗ ಅವರ ಪರೋಕ್ಷ ಸಂಪರ್ಕಗಳನ್ನೂ ಕಂಡು ಹಿಡಿದು ತಂದು ಕ್ವಾರಂಟೈನ್‌ ಮಾಡಿದ್ದರಿಂದ ಒಮ್ಮೆಗೆ ಸೋಂಕು ಜಾಸ್ತಿ ಕಂಡುಬಂದಂತೆ ಆಗಿರಬಹುದು. ಆದರೆ ಇದರಿಂದ ಸೋಂಕಿನ ಕೊಂಡಿಯನ್ನೇ ಮುರಿಯಲು ಸಾಧ್ಯವಾಗಿದೆ. ಈಗ ಎಲ್ಲರೂ ಗುಣಮುಖರಾಗುತ್ತಿದ್ದಾರೆ. ಅಲ್ಲೊಂದು ಇಲ್ಲೊಂದು ಪ್ರಕರಣಗಳು ಕಂಡು ಬರುತ್ತಿದ್ದರೂ ಅದೆಲ್ಲವೂ ಕಂಟೈನ್‌ಮೆಂಟ್‌ ವಲಯದ ಸಂಪರ್ಕ ಇಲ್ಲವೇ, ಸೋಂಕಿತರ ಸಂಪರ್ಕವೇ ಆಗಿದೆ’ ಎನ್ನುವುದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್‌ ಅಭಿಪ್ರಾಯ.

ಆಸ್ಪತ್ರೆಯಲ್ಲಿ ಕೆಲಸ ಮಾಡಿದವರಿಗೆ ವಿಶೇಷ ಐಸೊಲೇಶನ್‌

ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಕೆಲಸ ಮಾಡುವಾಗ ಸೋಂಕು ಬಂದರೆ ಅವರನ್ನು ವಿಶೇಷವಾಗಿ ಐಸೊಲೇಶನ್‌ ಮಾಡಲಾಗುತ್ತದೆ. ಭಾನುವಾರ ಪತ್ತೆಯಾದ ಸೋಂಕಿತರಲ್ಲಿ ಮೂವರು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿದವರು. ಹಾಗಾಗಿ ಅವರನ್ನು ಎಸ್‌ಎಸ್‌ ವೈದ್ಯಕೀಯ ಆಸ್ಪತ್ರೆಯಲ್ಲಿ ಇನ್‌ಸ್ಟಿಟ್ಯೂಷನಲ್‌ ಕ್ವಾರಂಟೈನ್‌ ಮಾಡಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್‌ ಮಾಹಿತಿ ನೀಡಿದರು.

ಅವರು ಬೇಗ ಗುಣಮುಖರಾಗಿ ಬಂದು ಮತ್ತೆ ಸೋಂಕಿತರ ಸೇವೆಗೆ ಲಭ್ಯವಾಗಬೇಕು ಎಂಬ ಕಾರಣಕ್ಕಾಗಿ ಈ ಅವಕಾಶವನ್ನು ಸರ್ಕಾರ ನೀಡಿದೆ ಎಂದರು.

ಗುಣಮುಖರಾದವರು

ದಿನಾಂಕ ಸಂಖ್ಯೆ

ಮೇ 20  7

ಮೇ 21  5

ಮೇ 22  7

ಮೇ 23  7

ಮೇ 24  18

ಮೇ 25  4

ಮೇ 26 15

ಮೇ 27  1

ಮೇ 28  13

ಮೇ 29  5

ಮೇ 30  20

ಮೇ 31  17

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು