ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಗಿರಿ: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಇಲ್ಲದೇ ಪ್ರಯಾಣಿಕರಿಗೆ ತೊಂದರೆ

ಖಾಸಗಿ ನಿಲ್ದಾಣದೊಳಗೆ ಪ್ರವೇಶಿಸಲು ಬಿಡದ ಬಸ್ ಮಾಲೀಕರು
Published 2 ಫೆಬ್ರುವರಿ 2024, 5:53 IST
Last Updated 2 ಫೆಬ್ರುವರಿ 2024, 5:53 IST
ಅಕ್ಷರ ಗಾತ್ರ

ಚನ್ನಗಿರಿ: ಪಟ್ಟಣದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ನಿಲುಗಡೆಗೆ ಸೂಕ್ತ ನಿಲ್ದಾಣವೇ ಇಲ್ಲದಿರುವುದರಿಂದ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.

ಪಟ್ಟಣದಲ್ಲಿ ಪುರಸಭೆ ವತಿಯಿಂದ ನಿರ್ಮಾಣವಾಗಿರುವ ಖಾಸಗಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‌ನವರು ಪ್ರತಿದಿನ ಬಸ್ ನಿಲ್ದಾಣದೊಳಗೆ ಪ್ರವೇಶಿಸಲು ₹20 ಶುಲ್ಕ ಪಾವತಿಸುತ್ತಾರೆ. ಆದರೆ ಕೆಎಸ್‌ಆರ್‌ಟಿಸಿ ಬಸ್‌ನವರು ಶುಲ್ಕ ಪಾವತಿಸುವುದಿಲ್ಲ.

ಸರ್ಕಾರದ ‘ಶಕ್ತಿ’ ಯೋಜನೆ ಜಾರಿಗೊಳ್ಳುವವರೆಗೂ ಕೆಎಸ್‌ಆರ್‌ಟಿಸಿ ಬಸ್‌ಗಳು ಖಾಸಗಿ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತಿದ್ದವು. ಯೋಜನೆ ಜಾರಿಯಾದ ಮೇಲೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸಲು ತೊಡಗಿದರು. ಹೀಗಾಗಿ ಖಾಸಗಿ ಬಸ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಕುಸಿಯಿತು. ಈ ಕಾರಣಕ್ಕೆ, ಖಾಸಗಿ ಬಸ್‌ನವರು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಖಾಸಗಿ ಬಸ್ ನಿಲ್ದಾಣದೊಳಗೆ ಬರಲು ಅಡ್ಡಿಪಡಿಸಿದರು. 

ಚನ್ನಗಿರಿಯಿಂದ ಶಿವಮೊಗ್ಗ-ಚಿತ್ರದುರ್ಗ-ಚಿಕ್ಕಮಗಳೂರು, ಬೀರೂರು, ಕಡೂರು, ಬಳ್ಳಾರಿ, ಮಂಗಳೂರು, ರಾಣೆಬೆನ್ನೂರು, ದಾವಣಗೆರೆ, ಮಡಿಕೇರಿ ಮುಂತಾದ ಪ್ರದೇಶಗಳಿಗೆ ಹೋಗಲು ಸಾಕಷ್ಟು ಸಂಖ್ಯೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತಿವೆ. ಈ ಪೈಕಿ ಶಿವಮೊಗ್ಗ ಹಾಗೂ ಚಿತ್ರದುರ್ಗ ಕಡೆಗೆ ಹೋಗುವ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಖಾಸಗಿ ಬಸ್ ನಿಲ್ದಾಣದೊಳಗೆ ಪ್ರವೇಶಿಸದಂತೆ ಖಾಸಗಿ ಬಸ್ ಮಾಲೀಕರು ಹಾಗೂ ಏಜೆಂಟರು ತಡೆಹಿಡಿಯುತ್ತಾರೆ.

ಹೀಗಾಗಿ, ಶಿವಮೊಗ್ಗ ಹಾಗೂ ಚಿತ್ರದುರ್ಗ ಕಡೆಗೆ ಹೋಗುವ ಕೆಎಸ್‌ಆರ್‌ಟಿಸಿ ಬಸ್‌ಗಳು ದಟ್ಟಣೆ ಇರುವ ರಾಷ್ಟ್ರೀಯ ಹೆದ್ದಾರಿ– 13ರ ಪಕ್ಕದಲ್ಲಿಯೇ ನಿಲ್ಲಿಸಿ, ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಹೆದ್ದಾರಿ ಬದಿ ನಿಲುಗಡೆ ಮಾಡುವುದರಿಂದ, ಶಿವಮೊಗ್ಗ ಹಾಗೂ ಚಿತ್ರದುರ್ಗ ಕಡೆಗೆ ತೆರಳುವ ಪ್ರಯಾಣಿಕರು ಉಸಿರು ಬಿಗಿ ಹಿಡಿದುಕೊಂಡು ಬಸ್ ಹತ್ತಬೇಕಾಗಿದೆ. ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಎಲ್ಲಿ ತಮ್ಮ ಮೇಲೆ ನುಗ್ಗುತ್ತವೋ ಎಂಬ ಆತಂಕದಲ್ಲಿಯೇ ಬಸ್ ಹತ್ತಬೇಕಿದೆ.

ಖಾಸಗಿ ಬಸ್‌ನವರ ವಾದವೇನು?

‘ಶಕ್ತಿ’ ಯೋಜನೆ ಜಾರಿಯಾದ ಮೇಲೆ ಶಿವಮೊಗ್ಗ ಹಾಗೂ ಚಿತ್ರದುರ್ಗ ಕಡೆಗೆ ಹೋಗಲು ಹೆಚ್ಚಿನ ಸಂಖ್ಯೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಓಡಿಸಲಾಗುತ್ತಿದೆ. ಕೆಲವೊಮ್ಮೆ 4 ಕೆಎಸ್‌ಆರ್‌ಟಿಸಿ ಬಸ್‌ಗಳು ಒಮ್ಮೆಲೇ ಬರುತ್ತವೆ. ಖಾಸಗಿ ಬಸ್‌ಗಳಿಗೆ ಹತ್ತುವ ಪ್ರಯಾಣಿಕರು ಸಂಖ್ಯೆ ತುಂಬಾ ಕಡಿಮೆಯಾಗಿದೆ. ಹೀಗಾಗಿ ಶಿವಮೊಗ್ಗ ಹಾಗೂ ಚಿತ್ರದುರ್ಗ ಕಡೆಗೆ ಹೋಗುವ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಮಾತ್ರ ಖಾಸಗಿ ಬಸ್ ನಿಲ್ದಾಣದೊಳಗೆ ಪ್ರವೇಶ ಮಾಡದಂತೆ ತಡೆ ಹಿಡಿಯಲಾಗಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ತನ್ನದೇ ಪ್ರತ್ಯೇಕ ಬಸ್ ನಿಲ್ದಾಣವನ್ನು ಮಾಡಿಕೊಳ್ಳಲಿ’ ಎಂದು ಖಾಸಗಿ ಬಸ್ ಮಾಲೀಕರಾದ ಸಿ. ರಮೇಶ್ ತಿಳಿಸಿದರು. ಪ್ರತ್ಯೇಕ ನಿಲ್ದಾಣ ನಿರ್ಮಾಣವೊಂದೇ ಪರಿಹಾರ ಕೆಎಸ್‌ಆರ್‌ಟಿಸಿ ಬಸ್‌ಗಳು ಹಾಗೂ ಪ್ರಯಾಣಿಕರು ಅನುಭವಿಸುತ್ತಿರುವ ಈ ಎಲ್ಲ ಸಮಸ್ಯೆಗೆ ಪರಿಹಾರವೆಂದರೆ ಕೆಎಸ್‌ಆರ್‌ಟಿಸಿ ಬಸ್‌ಗಳಿಗಾಗಿ ಪ್ರತ್ಯೇಕ ಬಸ್ ನಿಲ್ದಾಣ ತುರ್ತಾಗಿ ನಿರ್ಮಾಣವಾಗಬೇಕಿದೆ. ಪ್ರತ್ಯೇಕ ಬಸ್ ನಿಲ್ದಾಣ ನಿರ್ಮಾಣವಾಗುವವರೆಗೆ ಖಾಸಗಿ ಬಸ್ ನಿಲ್ದಾಣದೊಳಗೆ ಕೆಎಸ್‌ಆರ್‌ಟಿಸಿ ಬಸ್ ಪ್ರವೇಶಿಸಲು ಸ್ಥಳೀಯ ಜನಪ್ರತಿನಿಧಿಗಳು ಅನುಕೂಲ ಮಾಡಿಕೊಟ್ಟು ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು ಎನ್ನುತ್ತಾರೆ ಶಿವಮೊಗ್ದತ್ತ ತೆರಳಲು ಬಂದಿದ್ದ ಸುಶೀಲಮ್ಮ. ಚನ್ನಗಿರಿಯಲ್ಲಿ ಜಾಗದ ಕೊರತೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಚನ್ನಗಿರಿಯಲ್ಲಿ ಜಾಗದ ಕೊರತೆಯಿದೆ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ಹೇಳುತ್ತಾರೆ.  ಬಸ್ ನಿಲ್ದಾಣಕ್ಕೆ ದೊಡ್ಡ ಹಾಗೂ ಸೂಕ್ತ ಜಾಗ ಅಗತ್ಯವಿದ್ದು ಅದಕ್ಕಾಗಿ ಹುಡುಕಾಟ ನಡೆಯುತ್ತಿದೆ. ಜಾಗ ಸಿಕ್ಕ ಬಳಿಕ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT