ಮಂಗಳವಾರ, ಏಪ್ರಿಲ್ 7, 2020
19 °C

ಹಕ್ಕಿಜ್ವರ: ದಾವಣಗೆರೆ, ಹರಿಹರ ನಗರದಲ್ಲಿ ಕೋಳಿ, ಮೊಟ್ಟೆ ಮಾರಾಟ ನಿಷೇಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಬನ್ನಿಕೋಡು ಗ್ರಾಮದಲ್ಲಿ ಹಕ್ಕಿಜ್ವರ (ಎಚ್‌5ಎನ್‌1) ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ 10 ಕಿ.ಮೀ ವ್ಯಾಪ್ತಿಯ ಜಾಗೃತ ವಲಯದೊಳಗಿನ ದಾವಣಗೆರೆ ನಗರ ಹಾಗೂ ಹರಿಹರ ನಗರದಲ್ಲಿ ಕೋಳಿ, ಕೋಳಿ ಮಾಂಸ, ಮೊಟ್ಟೆ ಮಾರಾಟ ಮತ್ತು ಕೋಳಿ ಉತ್ಪನ್ನದ ಅಡುಗೆ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಬುಧವಾರ ಆದೇಶಿಸಿದ್ದಾರೆ.

ಬನ್ನಿಕೋಡಿನ ಫಾರ್ಮ್‌ನಲ್ಲಿ ಸತ್ತ ಕೋಳಿಯಲ್ಲಿ ಹಕ್ಕಿಜ್ವರ ದೃಢಪಟ್ಟಿರುವುದರಿಂದ ಪ್ರಾಣಿಗಳಲ್ಲಿ ಸೋಂಕುಕಾರಕ ಮತ್ತು ಸಾಂಕ್ರಾಮಿಕ ರೋಗಗಳ ಪ್ರತಿಬಂಧಕ ಮತ್ತು ನಿಯಂತ್ರಣ ಅಧಿನಿಯಮ 2009ರ ಕಲಂ 6ರಡಿ ಹಾಗೂ ಕೇಂದ್ರ ಸರ್ಕಾರ ಪ್ರಕಟಿಸಿದ ಕ್ರಿಯಾಯೋಜನೆ ಪ್ರಕಾರ ಬನ್ನಿಕೋಡು ಗ್ರಾಮದ ಒಂದು ಕಿ.ಮೀ ವ್ಯಾಪ್ತಿ ಪ್ರದೇಶವನ್ನು ರೋಗ ಪೀಡಿತ ವಲಯ ಹಾಗೂ 10 ಕಿ.ಮೀ ವ್ಯಾಪ್ತಿ ಪ್ರದೇಶವನ್ನು ಜಾಗೃತ ವಲಯದ ಎಂದು ಘೋಷಿಸಲಾಗಿದೆ.

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ರೋಗಪೀಡಿತ ವಲಯದಲ್ಲಿ ಎಲ್ಲಾ ಕೋಳಿ, ಮೊಟ್ಟೆ ಹಾಗೂ ಕೋಳಿ ಆಹಾರ ಇತ್ಯಾದಿಗಳನ್ನು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ನಾಶಪಡಿಸಬೇಕು. ಈ ಪ್ರದೇಶದಲ್ಲಿ ಅವಶ್ಯಕ ವಾಹನಗಳನ್ನು ಹೊರತುಪಡಿಸಿ ಸಾರ್ವಜನಿಕರ ಹಾಗೂ ಇತರೆ ವಾಹನಗಳ ಚಲನವಲನಗಳನ್ನು ನಿರ್ಬಂಧಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ಜಾಗೃತ ವಲಯ ವ್ಯಾಪ್ತಿಯೊಳಗೆ ಬರುವ ದಾವಣಗೆರೆ ನಗರ ಹಾಗೂ ಹರಿಹರ ನಗರದಲ್ಲಿ ಕೋಳಿ, ಕೋಳಿ ಮಾಂಸ, ಮೊಟ್ಟೆ ಮಾರಾಟ ಕೇಂದ್ರಗಳು ಹಾಗೂ ಹೋಟೆಲ್‌ಗಳಲ್ಲಿ ಕೋಳಿ ಮಾಂಸ ಮತ್ತು ಮೊಟ್ಟೆಯ ಮಾರಾಟ ಮತ್ತು ಅಡುಗೆಯನ್ನೂ ಮುಂದಿನ ಆದೇಶ ಹೊರಡಿಸುವವರೆಗೂ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕೊರೊನಾ: ದಾವಣಗೆರೆಯಲ್ಲಿ 24ರವರೆಗೆ ನಿಷೇಧಾಜ್ಞೆ

ದಾವಣಗೆರೆ: ಕೊರೊನಾ ವೈರಸ್‌ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಗಟ್ಟುವ ಸಲುವಾಗಿ ಬುಧವಾರದಿಂದ ಮಾರ್ಚ್‌ 24ರವರೆಗೆ ದಾವಣಗೆರೆ ಜಿಲ್ಲೆಯಾದ್ಯಂತ ಜಿಲ್ಲಾಧಿಕಾರಿ ನಿಷೇಧಾಜ್ಞೆ ಹೊರಡಿಸಿದ್ದಾರೆ.

ಜಿಲ್ಲೆಯಲ್ಲಿ ಐದು ಜನಕ್ಕಿಂತ ಹೆಚ್ಚು ಜನ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಈ ಆದೇಶವು ಅಂತ್ಯಕ್ರಿಯೆ ಮೆರವಣಿಗೆ ಹಾಗೂ ಪರೀಕ್ಷೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು