ಬುಧವಾರ, ಆಗಸ್ಟ್ 4, 2021
25 °C

‘ವಿಧಾನ ಪರಿಷತ್ತಿಗೆ ಚಿದಾನಂದ ಗೌಡ ಬಿಟ್ಟು ಅಭ್ಯರ್ಥಿ ಆಯ್ಕೆ ಮಾಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ವಿಧಾನ ಪರಿಷತ್‌ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಬಿಜೆಪಿಯ ನಿಷ್ಠಾವಂತರಿಗೆ ಬಿ ಫಾರ್ಮ್‌ ನೀಡಬೇಕು. ವರ್ಷದ ಹಿಂದೆಯಷ್ಟೇ ಪಕ್ಷಕ್ಕೆ ಬಂದಿರುವ ಚಿದಾನಂದ ಗೌಡರನ್ನು ಯಾವುದೇ ಕಾರಣಕ್ಕೂ ಅಭ್ಯರ್ಥಿಯನ್ನಾಗಿ ಮಾಡಬಾರದು ಎಂದು ವಿಧಾನ ಪರಿಷತ್ತಿಗೆ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳ ತಂಡ ಒತ್ತಾಯಿಸಿದೆ.

ಅಕಾಂಕ್ಷಿಗಳಾದ ದಾವಣಗೆರೆಯ ಜಯಪ್ರಕಾಶ್‌ ಕೊಂಡಜ್ಜಿ, ಡಾ. ಜೆ. ಮಂಜುನಾಥ ಗೌಡ, ಎಚ್‌.ಎನ್‌. ಶಿವಕುಮಾರ, ತುಮಕೂರಿನ ಡಾ. ಹಾಲನೂರು ಎಸ್‌.ಲೇಪಾಕ್ಷ, ಸಿ. ಮಲ್ಲಿಕಾರ್ಜುನ, ಪಿ.ಆರ್‌. ಬಸವರಾಜು, ಚಿತ್ರದುರ್ಗದ ಡಾ. ಆನಂದ್‌ ಕಿರಿಶ್ಯಾಳ, ಎಂ. ಶಿವಲಿಂಗಪ್ಪ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಆಗ್ರಹ ಮಂಡಿಸಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್‌ನಿಂದ ಟಿಕೆಟ್‌ ಸಿಕ್ಕಿಲ್ಲ ಎಂಬ ಕಾರಣಕ್ಕೆ ಪಕ್ಷೇತರನಾಗಿ ನಿಂತು ಠೇವಣಿ ಕಳೆದುಕೊಂಡಿದ್ದರು. ಅಂಥವರನ್ನು ಬಿಜೆಪಿಯ ಅಭ್ಯರ್ಥಿ ಎಂದು ಮಾಡುವುದು ಸರಿಯಲ್ಲ. ರಾಜ್ಯ ಸಮಿತಿಯಿಂದ ಕೇಂದ್ರ ಸಮಿತಿಗೆ ಆಗ್ನೇಯ ಕ್ಷೇತ್ರದಿಂದ ಡಾ. ಮಂಜುನಾಥ ಗೌಡ ಮತ್ತು ಚಿದಾನಂದ ಗೌಡರ ಹೆಸರು ಶಿಫಾರಸು ಮಾಡಲಾಗಿದೆ. ಅಧಿಕೃತ ಅಭ್ಯರ್ಥಿಯ ಆಯ್ಕೆ ಆಗಿಲ್ಲ. ಆದರೂ ಚಿದಾನಂದ ಗೌಡರೇ ಅಭ್ಯರ್ಥಿ ಎಂದು ಹಾಲಿ ವಿಧಾನ ಪರಿಷತ್ತಿನ ಸದಸ್ಯರಾಗಿರುವ ವೈ.ಎ. ನಾರಾಯಣ ಸ್ವಾಮಿ ಪ್ರಚಾರ ಮಾಡುತ್ತಿರುವುದು ಸರಿಯಲ್ಲ ಎಂದು ಟೀಕಿಸಿದರು.

‘ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ರಾಜ್ಯದಿಂದ ಶಿಫಾರಸು ಮಾಡಲಾದ ಹೆಸರು ಮತ್ತು ಹೈಕಮಾಂಡ್‌ ಘೋಷಣೆ ಮಾಡಿದ ಹೆಸರು ಬೇರೆ ಬೇರೆ. ಅದೇ ರೀತಿ ವಿಧಾನ ಪರಿಷತ್ತಿಗೂ ಆಗಬಹುದು. ನಮ್ಮಲ್ಲಿ ಯಾರನ್ನಾದರೂ ಒಬ್ಬರನ್ನು ಅಥವಾ ಪಕ್ಷದ ಬೇರೆ ಕಾರ್ಯಕರ್ತರನ್ನು ಅಭ್ಯರ್ಥಿಯನ್ನಾಗಿ ಮಾಡಿದರೆ ಬೆಂಬಲಿಸುತ್ತೇವೆ. ಚಿದಾನಂದ ಗೌಡರನ್ನು ಮಾಡಿದರೆ ಬೆಂಬಲ ನೀಡುವುದಿಲ್ಲ. ಒಂದು ವೇಳೆ ಅವರಿಗೆ ಟಿಕೆಟ್‌ ನೀಡಿದರೆ ಮುಂದಿನ ಹೆಜ್ಜೆ ಬಗ್ಗೆ ಆಗ ಸಮಾಲೋಚನೆ ಮಾಡುತ್ತೇವೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.