ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಬೇಡಿಕೆ ಆಲಿಸಲು ಸಿಎಂಗೆ ಇಲ್ಲ ಒಲವು

ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪ
Published 2 ಮೇ 2024, 7:04 IST
Last Updated 2 ಮೇ 2024, 7:04 IST
ಅಕ್ಷರ ಗಾತ್ರ

ದಾವಣಗೆರೆ: ‘ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ಕುರಿತ ಬೇಡಿಕೆಯನ್ನು ಆಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಲವು ತೋರುತ್ತಿಲ್ಲ. ಅವರ ಎದುರು ಗಟ್ಟಿಯಾಗಿ ಮಾತನಾಡಲು ಸಮುದಾಯದ ಶಾಸಕರು ಸಿದ್ಧರಿಲ್ಲ’ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಟೀಕಿಸಿದರು.

ದಾವಣಗೆರೆ ಜಿಲ್ಲಾ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ಬಂಟರ ಭವನದಲ್ಲಿ ಬುಧವಾರ ಆಯೋಜಿಸಿದ್ದ ಲಿಂಗಾಯತ ಪಂಚಮಸಾಲಿ ಸಮಾಜದ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಬೆಳಗಾವಿಯ ಸುವರ್ಣಸೌಧದಲ್ಲಿ ವಿಧಾನಸಭಾ ಅಧಿವೇಶನದ ಸಮಯದಲ್ಲಿ ಮೀಸಲಾತಿ ಕುರಿತು ಸಿದ್ದರಾಮಯ್ಯ ಜೊತೆ ಮಾತನಾಡಲು ಸ್ವಾಮೀಜಿ ಬಯಸಿದ್ದರು. ಆದರೆ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಶಾಸಕ ವಿನಯ್ ಕುಲಕರ್ಣಿ ಮತ್ತು ವಿಜಯಾನಂದ ಕಾಶಪ್ಪನವರ್ ಅವರಿಗೆ ಒಂದು ವಾರವಾದರೂ ಸಾಧ್ಯವಾಗಲಿಲ್ಲ. ಕೊನೆಗೆ ನಾನು ಹೇಳಿಕೆ ನೀಡಿದ ನಂತರವೇ ಮುಖ್ಯಮಂತ್ರಿ ಸಮಯ ನೀಡಿದರು’ ಎಂದು ಸ್ಮರಿಸಿದರು.

‘ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಹೋರಾಟದಿಂದ ಬಿಜೆಪಿ ಸರ್ಕಾರವಿದ್ದಾಗ ಲಿಂಗಾಯತ ಸಮಾಜಕ್ಕೆ ‘2ಡಿ’ ಮೀಸಲಾತಿ ದೊರೆಕಿತ್ತು’ ಎಂದರು.

‘ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯತರ ಬಗ್ಗೆ ಅಲರ್ಜಿ ಇದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ನನ್ನ ಬಳಿ ಹೇಳಿದ್ದರು. ಈ ಬಗ್ಗೆ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ಎದುರು ಪ್ರಮಾಣ ಮಾಡಲು ಸಿದ್ಧ’ ಎಂದರು.

‘ಬಿಜೆಪಿಗೆ ಮತ ನೀಡಬಾರದು ಎಂದು ಹೇಳಲು ಅವರಿಗೆ ಅನುಮತಿ ಕೊಟ್ಟವರು ಯಾರು’ ಎಂದು ಪ್ರಶ್ನಿಸಿದರು.

‘ಲಿಂಗಾಯತ ಸಮುದಾಯಕ್ಕೆ 2ಡಿ ಅಡಿಯಲ್ಲಿ ನೀಡಲಾಗಿದ್ದ ಶೇ 7ರ ಮೀಸಲಾತಿ ತಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ರವಿಕುಮಾರ್ ಅವರು ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿರುವುದೇ ಕಾರಣ’ ಎಂದು ಶಾಸಕ ಅರವಿಂದ ಬೆಲ್ಲದ್ ಆರೋಪಿಸಿದರು.

‘ಮುಸ್ಲಿಮರಿಗೆ 2ಬಿ ಅಡಿಯಲ್ಲಿ ನೀಡಲಾಗಿರುವ ಮೀಸಲಾತಿ ಸಂವಿಧಾನ ಬಾಹಿರವಾಗಿದ್ದು, ಈ ಬಗ್ಗೆ ನಾನು ಬಿಜೆಪಿ ವರಿಷ್ಠರ ಗಮನಕ್ಕೆ ತಂದಿದ್ದೆ. ಸಂವಿಧಾನಬಾಹಿರವಾದ ಈ ಮೀಸಲಾತಿ ಬಗ್ಗೆ ಈಗ ವ್ಯಾಪಕವಾಗಿ ಚರ್ಚೆಯಾಗುತ್ತಿದೆ’ ಎಂದರು.

‘ಸಿದ್ದರಾಮಯ್ಯ ಅವರ ಕಾರ್ಯಕ್ರಮಕ್ಕೆ ಕೌಂಟರ್ ಆಗಿ ವೀರಶೈವ ಮಹಾ ಅಧಿವೇಶನ ಮಾಡಿದ್ದಾಗ ಎಷ್ಟು ಜನ ಇದ್ರು. ನಾವು ಕಷ್ಟಪಟ್ಟು ಸಮಾಜ ಸಂಘಟನೆ ಮಾಡಿರುವೆ ಸ್ವಾಮೀಜಿ ಮಾತು ಕೇಳಬೇಡಿ. ಎಸಿ ರೂಮ್ ಸ್ವಾಮಿ ಬೇಡೇ ಬೇಡ‌‌ ನನ್ನ ಹೊರಗೆ ಆಗೋಕೆ ಆಗಲ್ಲ. ಯಾಕಂದ್ರೆ ನನ್ನ ಹಿಂದೆ ಇಡೀ ಕರ್ನಾಟಕದ ಪಂಚಮಸಾಲಿ ಸಮಾಜದ ಶಕ್ತಿ ಇದೆ’ ಎಂದರು.

‘ನಿನ್ನ ಬಾಯಿ ಸರಿ ಇದ್ದರೆ ನೀನೆ ಮುಖ್ಯಮಂತ್ರಿ ಆಗ್ತಿದ್ದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳ್ತಾ ಇದ್ರು, ನಾನು ಆಸ್ತಿ ಮಾಡಿಲ್ಲ, ಐಟಿ, ಇಡಿ ದಾಳಿ ಮಾಡಿದರೆ ಏನೂ ಸಿಗಲ್ಲ‌. ಇಡೀ ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯ  ಮೂರು ಕುಟುಂಬಗಳ ಕಪಿಮುಷ್ಠಿಯಲ್ಲಿದೆ. ಇವರು ಎಲ್ಲಾದರು ಹಾಸ್ಟೇಲ್ ಕಟ್ಟಿದ್ದಾರಾ. ಎಲ್ಲಾ ರಾಜಕೀಯ ಪಕ್ಷದವರು ಪಂಚಮಸಾಲಿ ತುಳಿದಿದ್ದಾರೆ‌‌’ ಎಂದು ಆರೋಪಿಸಿದರು.

ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಮಾತನಾಡಿ, ‘ಮೀರ್ ಸಾಧಿಕ್ ಮನೋಭಾವದ ಕೆಲವರು ಕಾಂಗ್ರೆಸ್ ಪಕ್ಷಕ್ಕೆ ಪಂಚಮಸಾಲಿ ಸಮಾಜದ ಬೆಂಬಲ ಇದೆ ಎಂದು ಬಿಂಬಿಸಲು ಹೊರಟಿದ್ದಾರೆ. ಇವರು ತಮ್ಮ ಸ್ವಾರ್ಥಕ್ಕಾಗಿ ಪಂಚಮಸಾಲಿ ಸಮಾಜ ಒಡೆದು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುತ್ತಿದ್ದಾರೆ ಎಂದ ಅವರು, ಪಂಚಮಸಾಲಿ ಮೀಸಲಾತಿ ಹೋರಾಟದ ಪಾದಯಾತ್ರೆ ದಾವಣಗೆರೆಗೆ ಬಂದಾಗ ಕಾಂಗ್ರೆಸ್‌ನ ಯಾವ ನಾಯಕ ಬೆಂಬಲಿಸಿದರು? ಎಂದು ಪ್ರಶ್ನಿಸಿದರು.

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ‘ಜಿಲ್ಲಾ ಉಸ್ತುವಾರಿ ಸಚಿವರು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅವರ ಅಡಿಕೆ ಉದ್ಯಮದ ಬಗ್ಗೆ ವೈಯಕ್ತಿಕ ಟೀಕೆ ಮಾಡಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಐ.ಟಿ. - ಬಿ.ಟಿ. ಉದ್ಯಮ ಹಾಗೂ ಬೈರನಪಾದ ಏತನೀರಾವರಿ ಯೋಜನೆ ಈಗ ಕಾಣುತ್ತಿದೆ. ನಾನು ಈಗಾಗಲೇ ಎಸ್.ಟಿ.ಪಿ.ಐ. ಘಟಕ ದಾವಣಗೆರೆ ತಂದಿದ್ದೇನೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೇಜಸ್ವಿ ಪಟೇಲ್ ಮಾತನಾಡಿ, ‘ಹೆಚ್ಚು ಜನಸಂಖ್ಯೆ ಇದ್ದರೂ ಅದರ ಮುಖಂಡರು ಚುನಾವಣೆಯಲ್ಲಿ ಸೋಲುವ ಪ್ರವೃತ್ತಿ ಪಂಚಮಸಾಲಿ ಸಮಾಜದಲ್ಲಿ ಮಾತ್ರ ಕಂಡು ಬರುತ್ತಿದೆ. ಚುನಾವಣೆಯಲ್ಲಿ ಹಣಬಲದ ಪ್ರಾಬಲ್ಯ ಹೆಚ್ಚಾಗಿರುವುದೇ ಇದಕ್ಕೆ ಕಾರಣ’ ಎಂದರು.

ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಿಷತ್ ಸದಸ್ಯರಾದ ರವಿಕುಮಾರ್, ನಾರಾಯಣಸ್ವಾಮಿ, ಮುಖಂಡರಾದ ಜಿ.ಎಸ್. ಅನಿತ್ ಕುಮಾರ್, ಪರಮೇಶ್ವರ ಗೌಡ್ರು, ರಘುಚಂದ್ರನ್, ನಾಗರಾಳ್ ಹುಲಿ, ಎಂ.ಎಸ್. ರುದ್ರಗೌಡ್ರು, ಬಿ. ಚಿದಾನಂದಪ್ಪ, ಆರುಂಡಿ ನಗಾರಾಜ್, ಚಂದ್ರಶೇಖರಪ್ಪ, ಗಾಯತ್ರಿ, ಮಂಜುಳ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT