ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ವರ್ಷದೊಳಗೆ ಕಾಮಗಾರಿ ಮುಗಿಸಿ: ಸಂಸದ

ಧೂಡಾದಿಂದ ₹ 2.75 ಕೋಟಿ ವೆಚ್ಚದಲ್ಲಿ ಟಿ.ವಿ. ಸ್ಟೇಷನ್ ಕೆರೆ ಅಭಿವೃದ್ಧಿ
Last Updated 22 ಜನವರಿ 2022, 4:43 IST
ಅಕ್ಷರ ಗಾತ್ರ

ದಾವಣಗೆರೆ: ‘ಟಿ.ವಿ. ಸ್ಟೇಷನ್ ಕೆರೆಯಲ್ಲಿ ಗುಣಮಟ್ಟದ ಕಾಮಗಾರಿ ನಡೆಯಬೇಕು. ಹೂಳು ತೆಗೆಯುವ ಸಂದರ್ಭ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಬೇಕು. ಒಂದು ವರ್ಷದೊಳಗೆ ಎಲ್ಲಾ ಕೆಲಸಗಳು ಮುಗಿಯಬೇಕು’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅಧಿಕಾರಿಗಳಿಗೆ ಸೂಚಿಸಿದರು.

ಧೂಡಾದಿಂದ ₹ 2.75 ಕೋಟಿ ವೆಚ್ಚದಲ್ಲಿ ನಗರದ ಟಿ.ವಿ. ಸ್ಟೇಷನ್ ಕೆರೆ ಅಭಿವೃದ್ಧಿಪಡಿಸುವ ಕಾಮಗಾರಿಗಳಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿದ ನಂತರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಟಿ.ವಿ. ಸ್ಟೇಷನ್ ಕೆರೆಯ ಸುತ್ತಲೂ ಸೂಕ್ತ ವಾಕಿಂಗ್ ಪಾತ್ ಇಲ್ಲ. ಆಸನಗಳು, ಬೀದಿದೀಪಗಳ ವ್ಯವಸ್ಥೆಯಿಲ್ಲ. ಹಂದಿ, ನಾಯಿಗಳು ಕೆರೆ ಆವರಣದೊಳಗೆ ನುಗ್ಗುತ್ತಿವೆ. ಅಭಿವೃದ್ಧಿ ಕಾಮಗಾರಿಗಳು ನಡೆಯುವುದರಿಂದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು’ ಎಂದರು.

‘ಸ್ಮಾರ್ಟ್ ಸಿಟಿ, ಮಹಾನಗರಪಾಲಿಕೆ, ಧೂಡಾದಿಂದ ಹಿಂದೆಂದೂ ಆಗದಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು ದಾವಣಗೆರೆಯನ್ನು ಸುಂದರ ನಗರವಾಗಿಸಲು ಪಣ ತೊಟ್ಟಿದ್ದೇವೆ’ ಎಂದು ಸಂಸದರು ತಿಳಿಸಿದರು.

‘₹ 8 ಕೋಟಿಯಿಂದ ₹ 10 ಕೋಟಿ ವೆಚ್ಚದಲ್ಲಿ ಬಾತಿ ಕೆರೆಯನ್ನು ಅಭಿವೃದ್ಧಿಪಡಿಸುವ ಉದ್ದೇಶವಿದ್ದು, 2ರಿಂದ 3 ದಿನಗಳಲ್ಲಿ ಅದಕ್ಕೆ ಒಪ್ಪಿಗೆ ಸಿಗುವ ನಿರೀಕ್ಷೆಯಿದೆ. ಶೀಘ್ರವೇ ಕಾಮಗಾರಿಗೆ ಚಾಲನೆ ನೀಡಲಾಗುವುದು. ಅದೇ ರೀತಿ ದಾವಣಗೆರೆ ಸುತ್ತಮುತ್ತಲ ಇನ್ನೂ 2-3 ಕೆರೆಗಳನ್ನು ₹ 12 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಯೋಜನೆಯಿದೆ’ ಎಂದು ಹೇಳಿದರು.

‘ನಗರದಲ್ಲಿ ₹ 125 ಕೋಟಿ ವಿಶೇಷ ಅನುದಾನದಲ್ಲಿ ಕೆಲಸಗಳು ನಡೆಯುತ್ತಿವೆ. ರಸ್ತೆ, ಬೀದಿದೀಪ, ಉದ್ಯಾನಗಳ ಅಭಿವೃದ್ಧಿಯಾಗುತ್ತಿದೆ. ಸದ್ಯದಲ್ಲೇ ಪಾಲಿಕೆಗೆ ₹ 40 ಕೋಟಿ ಬಿಡುಗಡೆಯಾಗಲಿದ್ದು, ಅದರ ಜತೆ ಶಾಸಕರ ಅನುದಾನ ₹ 50 ಕೋಟಿ ಬಳಸಿಕೊಂಡು ಕಚ್ಚಾ ರಸ್ತೆಗಳಿಗೆ ಕಾಯಕಲ್ಪ ನೀಡಲಾಗುವುದು’ ಎಂದು ತಿಳಿಸಿದರು.

‘ಬಾತಿ ಕೆರೆ ಬಳಿ ಮತ್ತು ಡಿಸಿಎಂ ಸೇತುವೆಯಿಂದ ಆವರಗೆರೆವರೆಗಿನ ರಸ್ತೆಯಲ್ಲಿ ಬೀದಿ ದೀಪಗಳನ್ನು ಅಳವಡಿಸಬೇಕು’ ಎಂದು ಹೇಳಿದರು.

ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ‘ಅಧಿಕಾರಿಗಳು ಆಸಕ್ತಿ ವಹಿಸಿ ಕೆಲಸ ಮಾಡಬೇಕು. ಟಿ.ವಿ. ಸ್ಟೇಷನ್ ಕೆರೆಯನ್ನು ಪ್ರೇಕ್ಷಣೀಯ ತಾಣವಾಗಿಸಬೇಕು’ ಎಂದು ಹೇಳಿದರು.

‘ಟಿ.ವಿ. ಸ್ಟೇಷನ್ ಕೆರೆ ಅಭಿವೃದ್ಧಿ ಕಾರ್ಯವನ್ನು ಅಧಿಕಾರಿಗಳು, ಗುತ್ತಿಗೆದಾರರು ಒಂದು ವರ್ಷದೊಳಗೆ ಮುಗಿಸಬೇಕು. ಗುಣಮಟ್ಟದ ಕಾಮಗಾರಿ ಆಗಬೇಕು. ಶೀಘ್ರವೇ ಬಾತಿ ಕೆರೆಯ ಅಭಿವೃದ್ಧಿಗೆ ಚಾಲನೆ ನೀಡಲಾಗುವುದು’ ಎಂದು ಧೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್ ತಿಳಿಸಿದರು.

ಮೇಯರ್ ಎಸ್‌.ಟಿ.ವೀರೇಶ್ ಮಾತನಾಡಿ, ‘ದಾವಣಗೆರೆಯು ಅಭಿವೃದ್ಧಿ ಪರ್ವದಲ್ಲಿದೆ. ಸಾರ್ವಜನಿಕ ಸ್ಪಂದನೆಯ ಆಡಳಿತವಿದೆ. ಮುಂದಿನ ದಿನಗಳಲ್ಲಿ ಆವರಗೆರೆ ಕೆರೆಯ ಅಭಿವೃದ್ಧಿಯನ್ನು ಧೂಡಾ ಕೈಗೆತ್ತಿಕೊಳ್ಳಲಿದ್ದು, ಪಾಲಿಕೆಯಿಂದ ಸಹಕಾರ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಧೂಡಾ ಸದಸ್ಯರಾದ ಲಕ್ಷ್ಮಣ, ಮಾರುತಿರಾವ್ ಘಾಟ್ಗೆ, ಬಾತಿ ಚಂದ್ರಶೇಖರ್, ಗೌರಮ್ಮ ವಿ. ಪಾಟೀಲ್, ಉಪ ಮೇಯರ್ ಶಿಲ್ಪಾ ಜಯಪ್ರಕಾಶ್, ಧೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಸದಸ್ಯ ಕೆ.ಎಂ. ವೀರೇಶ್, ಧೂಡಾ ಆಯುಕ್ತ ಬಿ.ಟಿ. ಕುಮಾರಸ್ವಾಮಿ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT