ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಮನೂರು ಟೀಕಿಸುವ ನೈತಿಕತೆ ಇಲ್ಲ: ಎಚ್‌.ಬಿ. ಮಂಜಪ್ಪ

ಜಿ.ಬಿ.ವಿನಯ್‌ಕುಮಾರ್ ವಿರುದ್ಧ ಕಾಂಗ್ರೆಸ್‌ ಮುಖಂಡರ ವಾಗ್ದಾಳಿ
Published 12 ಆಗಸ್ಟ್ 2024, 16:07 IST
Last Updated 12 ಆಗಸ್ಟ್ 2024, 16:07 IST
ಅಕ್ಷರ ಗಾತ್ರ

ದಾವಣಗೆರೆ: ರಾಜಕಾರಣಕ್ಕೆ ಈಗಷ್ಟೇ ಪ್ರವೇಶ ಪಡೆದಿರುವ ಜಿ.ಬಿ.ವಿನಯ್‌ಕುಮಾರ್‌ ಪಕ್ಷ ಸಂಘಟನೆ ಮಾಡದೇ ನಾಯಕರಾಗುವ ಉಮೇದಿನಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಹೀನಾಯ ಸೋಲು ಕಂಡಿದ್ದಾರೆ. ಶಾಸಕ ಶಾಮನೂರು ಶಿವಶಿಂಕರಪ್ಪ ಹಾಗೂ ಅವರ ಕುಟುಂಬವನ್ನು ಟೀಕಿಸುವ ನೈತಿಕತೆ ಅವರಿಗಿಲ್ಲ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಬಿ.ಮಂಜಪ್ಪ ವಾಗ್ದಾಳಿ ನಡೆಸಿದರು.

‘ಪಕ್ಷಕ್ಕೆ ದುಡಿದ ಸಾಕಷ್ಟು ಕಾರ್ಯಕರ್ತರು ಜಿಲ್ಲೆಯಲ್ಲಿದ್ದಾರೆ. ಅತಿಥಿಯಂತೆ ದಾವಣಗೆರೆಗೆ ಬಂದ ಅವರಿಗೆ ಲೋಕಸಭಾ ಚುನಾವಣೆಯ ಟಿಕೆಟ್‌ ನೀಡಲು ಪಕ್ಷದಲ್ಲಿ ಅವಕಾಶ ಇರಲಿಲ್ಲ. ಪಕ್ಷವನ್ನು ಮುಜುಗರಕ್ಕೀಡು ಮಾಡುವ ಉದ್ದೇಶದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ಸೋಲಿನಿಂದ ಕಂಗೆಟ್ಟು ಶಾಮನೂರು ಶಿವಶಂಕರಪ್ಪ ಅವರ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಇನ್ನೊಮ್ಮೆ ಮಾತನಾಡುವಾಗ ಎಚ್ಚರವಿರಲಿ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಶಾಮನೂರು ಕುಟುಂಬದ ಬಗ್ಗೆ ವಿನಯ್‌ಕುಮಾರ್‌ ಅವರಿಗೆ ಪರಿಜ್ಞಾನವಿಲ್ಲ. ಅವರ ಜಾತ್ಯತೀತ ನಿಲುವಿನ ಬಗ್ಗೆ ಗೊತ್ತಿಲ್ಲ. ಶಿವಶಂಕರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ. ಮೈಸೂರಿನಲ್ಲಿ ನಡೆದ ಜನಾಂದೋಲನಾ ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಪಾಲ್ಗೊಂಡಿದ್ದಾರೆ. ಇದನ್ನು ಅರಿಯದೇ ಸುಳ್ಳು ಆರೋಪ ಮಾಡುವುದು ತಪ್ಪು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಾವಣಗೆರೆ–ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್‌ ಕೆ.ಶೆಟ್ಟಿ, ಮುಖಂಡರಾದ ಅಯೂಬ್‌, ಕೆ.ಜಿ.ಶಿವಕುಮಾರ್‌, ಎ.ನಾಗರಾಜ್‌, ಎಂ.ಮಂಜುನಾಥ್‌, ದಾಕ್ಷಾಯಣಮ್ಮ, ಮಂಗಳಮ್ಮ ಇದ್ದರು.

Cut-off box - ‘ಉಚ್ಚಾಟನೆಗೆ ಶಿಫಾರಸು’ ಕಾಂಗ್ರೆಸ್‌ ಹೆಸರು ಬಳಸಿಕೊಂಡು ವಿರೋಧ ಪಕ್ಷಗಳ ಜತೆ ಕೈಜೋಡಿಸಿದ ಜಿ.ಬಿ.ವಿನಯ್‌ ಕುಮಾರ್‌ ಉಚ್ಚಾಟನೆಗೆ ಪಕ್ಷದ ಶಿಸ್ತು ಸಮಿತಿಗೆ ಶಿಫಾರಸು ಮಾಡಲಾಗಿದೆ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಬಿ.ಮಂಜಪ್ಪ ತಿಳಿಸಿದರು. ‘ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹೋರಾಟ ನಡೆಸುವ ಪ್ರತಿಪಕ್ಷಗಳೊಂದಿಗೆ ವಿನಯ್‌ಕುಮಾರ್‌ ಒಡನಾಟ ಇಟ್ಟುಕೊಂಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಶಕ್ತಿಗುಂದಿಸುವ ಹುನ್ನಾರದಲ್ಲಿ ಇವರ ಪಾತ್ರವೂ ಇದೆ. ಮುಖ್ಯಮಂತ್ರಿ ಮಾತಿಗೆ ಗೌರವ ಕೊಡದೇ ನಡೆದುಕೊಂಡ ರೀತಿಯನ್ನು ಮತದಾರರು ಗಮನಿಸಿದ್ದಾರೆ. ಇಂಥವರು ಪಕ್ಷದಲ್ಲಿ ಇರುವುದು ಸರಿಯಲ್ಲ. ಈ ಸಂಬಂಧ ಜಿಲ್ಲಾ ಸಮಿತಿ ಕೈಗೊಂಡ ತೀರ್ಮಾನವನ್ನು ಪಕ್ಷದ ಶಿಸ್ತು ಸಮಿತಿಗೆ ಕಳುಹಿಸಿಕೊಡಲಾಗಿದೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT