ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ | ಗ್ರಾಮಗಳತ್ತ ‘ಸಂವಿಧಾನ ಜಾಗೃತಿ’ ರಥ

194 ಗ್ರಾಮ ಪಂಚಾಯಿತಿ, 7 ನಗರ ಸ್ಥಳೀಯ ಸಂಸ್ಥೆಗಳ ಕಚೇರಿಗಳಿಗೆ ಸ್ಥಬ್ಧಚಿತ್ರ ಮೆರವಣಿಗೆ
ರಾಮಮೂರ್ತಿ ಪಿ.
Published 25 ಜನವರಿ 2024, 6:00 IST
Last Updated 25 ಜನವರಿ 2024, 6:00 IST
ಅಕ್ಷರ ಗಾತ್ರ

ದಾವಣಗೆರೆ: ಸಂವಿಧಾನದ ಪೀಠಿಕೆಯ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸಮಾಜ ಕಲ್ಯಾಣ ಇಲಾಖೆಯು ಜಿಲ್ಲೆಯಲ್ಲಿ ‘ಸಂವಿಧಾನ ಜಾಗೃತಿ ಜಾಥಾ’ ಹಮ್ಮಿಕೊಂಡಿದ್ದು, ಇದಕ್ಕಾಗಿ ಸ್ಥಬ್ಧಚಿತ್ರಗಳನ್ನೊಳಗೊಂಡ ವಿಶೇಷ ರಥವೊಂದು ಸಿದ್ಧವಾಗುತ್ತಿದೆ.

ಬುದ್ಧ, ಬಸವ, ಅಂಬೇಡ್ಕರ್‌, ಸಂವಿಧಾನದ ಪೀಠಿಕೆಯ ಮಹತ್ವ ಸಾರುವಂತಹ ಅಂಶಗಳನ್ನು ಒಳಗೊಂಡಿರುವ ಸ್ಥಬ್ಧಚಿತ್ರದ ಮೆರವಣಿಗೆ ನಡೆಯಲಿದೆ. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಅವರು ಸ್ಥಬ್ಧಚಿತ್ರದ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. 

ಸ್ಥಬ್ಧಚಿತ್ರದ ಮೆರವಣಿಗೆ ಹಾಗೂ ಇನ್ನಿತರ ಕಾರ್ಯಕ್ರಮಗಳ ಖರ್ಚುಗಳಿಗೆ ಸಮಾಜ ಕಲ್ಯಾಣ ಇಲಾಖೆಯು ₹ 25 ಲಕ್ಷ ಅನುದಾನ ಮೀಸಲಿಟ್ಟಿದೆ. ಸ್ಥಳೀಯ ಆಡಳಿತಗಳೂ ಹೆಚ್ಚುವರಿ ಖರ್ಚುಗಳನ್ನು ಭರಿಸಲಿವೆ.

ಜ.26ರಿಂದ ಫೆಬ್ರುವರಿ 23ರ ವರೆಗೆ ಜಿಲ್ಲೆಯ ಎಲ್ಲ (194) ಗ್ರಾಮ ಪಂಚಾಯಿತಿಗಳು ಹಾಗೂ 7 ನಗರ ಸ್ಥಳೀಯ ಸಂಸ್ಥೆಗಳು ಸೇರಿದಂತೆ ಒಟ್ಟು 201 ಆಡಳಿತ ಕಚೇರಿಗಳಿಗೆ ಮೆರವಣಿಗೆ ಸಾಗಲಿದೆ. ನಿತ್ಯವೂ 7 ಗ್ರಾಮ ಪಂಚಾಯಿತಿ / ಸ್ಥಳೀಯ ಸಂಸ್ಥೆಗಳ ಆಡಳಿತ ಕಚೇರಿಗಳಿಗೆ ತೆರಳಿ, ವೇದಿಕೆ ಕಾರ್ಯಕ್ರಮ ನಡೆಸುವ ಗುರಿ ಹೊಂದಲಾಗಿದೆ.

ಸಂವಿಧಾನ ಜಾಗೃತಿ ಜಾಥಾದ ಸ್ಥಬ್ಧಚಿತ್ರದ ಮೆರವಣಿಗೆಯನ್ನು ಆಯಾ ಗ್ರಾಮ ಪಂಚಾಯಿತಿಯಲ್ಲಿನ ಸ್ಥಳೀಯ ಅಧಿಕಾರಿಗಳು, ಸಿಬ್ಬಂದಿ, ಜನಪ್ರತಿನಿಧಿಗಳು, ಸಾಮಾಜಿಕ ಹೋರಾಟಗಾರರು, ಸ್ವಯಂ ಸೇವಾ ಸಂಘಟನೆಗಳು, ಸ್ಥಳೀಯ ಸಂಘ ಸಂಸ್ಥೆಗಳು, ಒಕ್ಕೂಟಗಳ ಸದಸ್ಯರು, ಮುಖಂಡರು ಸ್ವಾಗತಿಸಲಿದ್ದಾರೆ.

ಮೆರವಣಿಗೆಯಲ್ಲಿ ಜಾನಪದ ಕಲಾವಿದರಿಂದ ಕಲಾ ಪ್ರದರ್ಶನ ನಡೆಯಲಿದ್ದು, ವೇದಿಕೆ ಕಾರ್ಯಕ್ರಮದಲ್ಲಿ ‘ಸಂವಿಧಾನದ ಬಗ್ಗೆ ಅರಿವು, ಸಾಮಾಜಿಕ ನ್ಯಾಯ, ಅಂಬೇಡ್ಕರ್ ಪರಿಕಲ್ಪನೆ’ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ತಜ್ಞರಿಂದ ಭಾಷಣವೂ ಇರಲಿದೆ. ಸಂವಿಧಾನ ಪೀಠಿಕೆಯ ಕರಪತ್ರಗಳನ್ನು ಹಂಚಲು ಉದ್ದೇಶಿಸಲಾಗಿದೆ.

ಸ್ಥಬ್ಧಚಿತ್ರದಲ್ಲಿ ಏನಿರಲಿದೆ:

ಸ್ಥಬ್ಧಚಿತ್ರದಲ್ಲಿ ಭಾರತದ ಸಂವಿಧಾನದ ಪ್ರತಿಯ ಚಿತ್ರ, ಬೃಹತ್ ಎಲ್‌.ಇ.ಡಿ. ಪರದೆ, ಸಂವಿಧಾನದ ಪ್ರಸ್ತಾವನೆಯ ಚಿತ್ರ, ಡಾ.ಬಿ.ಆರ್‌. ಅಂಬೇಡ್ಕರ್‌, ಬುದ್ಧ ಹಾಗೂ ಬಸವಣ್ಣ ಅವರ ಮೂರ್ತಿಗಳು ಇರಲಿವೆ. ರಾಜ್ಯ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಪ್ರಚಾರ, ಸಂವಿಧಾನದ ಮಹತ್ವ ಸಾರುವ ಸಾಲುಗಳೂ ಗಮನ ಸೆಳೆಯಲಿವೆ. ಸಮಾಜ ಕಲ್ಯಾಣ ಇಲಾಖೆಯ ಬಗ್ಗೆಯೂ ಮಾಹಿತಿ ಇರಲಿದೆ.

ಸ್ಥಬ್ಧಚಿತ್ರ ತಯಾರಿಸುವ ಕಾರ್ಯ ಭರದಿಂದ ಸಾಗಿದೆ
ಸ್ಥಬ್ಧಚಿತ್ರ ತಯಾರಿಸುವ ಕಾರ್ಯ ಭರದಿಂದ ಸಾಗಿದೆ

ನಾಳೆಯಿಂದ ಫೆಬ್ರುವರಿ 23ರ ವರೆಗೆ ಮೆರವಣಿಗೆ ನಿತ್ಯವೂ 7 ಆಡಳಿತ ಕಚೇರಿಗಳಿಗೆ ಭೇಟಿ, ಕಾರ್ಯಕ್ರಮ 5 ಗ್ಯಾರಂಟಿ ಯೋಜನೆಗಳ ಬಗ್ಗೆಯೂ ಪ್ರಚಾರ

ಸಂವಿಧಾನ ಜಾಗೃತಿ ಜಾಥಾದ ಅಂಗವಾಗಿ ಸ್ಥಬ್ಧಚಿತ್ರದ ಮೆರವಣಿಗೆಗೆ ವಿಶೇಷ ವಾಹನದ ವ್ಯವಸ್ಥೆ ಮಾಡಲಾಗಿದೆ. ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಲು ಸಾಧ್ಯವಾಗುವಂತೆ ಮಾರ್ಗವನ್ನು (ರೂಟ್‌ಮ್ಯಾಪ್‌ ) ರೂಪಿಸಲಾಗಿದೆ–
ಕೆ.ನಾಗರಾಜ ಉಪನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ

ಫೆ.25ರಂದು ರಾಷ್ಟ್ರೀಯ ಸಮಾವೇಶ ‘ಜಿಲ್ಲೆಯಲ್ಲಿ ಸಂಚಾರ ಮುಗಿಸಿದ ಬಳಿಕ ರಥವು ಫೆ.24ರಂದು ಬೆಂಗಳೂರಿಗೆ ತೆರಳಲಿದೆ. ಫೆ.25ರಂದು ಬೆಂಗಳೂರಿನಲ್ಲಿ ‘ಸಂವಿಧಾನ ಜಾಗೃತಿ ಜಾಥಾ ರಾಷ್ಟ್ರೀಯ ಮಟ್ಟದ ಸಮಾವೇಶ ನಡೆಯಲಿದ್ದು 1 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ನಾಗರಾಜ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. ‘ಸಂವಿಧಾನ ಜಾಗೃತಿ ಜಾಥಾದ ಯಶಸ್ಸಿಗಾಗಿ ಜಿಲ್ಲಾ ಸಮಿತಿಯನ್ನೂ ರಚಿಸಿದ್ದು ಸಿದ್ಧತೆಗಳು ಜೋರಾಗಿ ಸಾಗಿವೆ. ಭವ್ಯತೆ ನಾವೀನ್ಯತೆ ಭಾಗವಹಿಸುವಿಕೆ ಪರಿಣಾಮಕಾರಿತ್ವ ಹಾಗೂ ಮಾಧ್ಯಮ / ಸಮಾಜದ ಪ್ರತಿಕ್ರಿಯೆ ಸೇರಿದಂತೆ ಹಲವು ಅಂಶಗಳನ್ನು ಆಧರಿಸಿ ಜಾಥಾದ ಮೌಲ್ಯಮಾಪನ ಮಾಡಲಾಗುತ್ತದೆ. ಅತ್ಯುತ್ತಮ ಸಾಧನೆ ತೋರಿದ ಮೂರು ಜಿಲ್ಲೆಗಳಿಗೆ ಫೆ.25ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ನೀಡಲಿದ್ದಾರೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT