ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುತಂತ್ರಿಗಳಿಗೆ ಸಾಂವಿಧಾನಿಕವಾಗಿ ಪಾಠ ಕಲಿಸಿ: ಬಿ.ಟಿ. ಲಲಿತಾ ನಾಯಕ್‌

‘ಒಡೆದಾಳುವ ಮತ್ತು ಭ್ರಷ್ಟ ರಾಜಕೀಯ ಕೊನೆಗೊಳಿಸೋಣ’ ಕಾರ್ಯಕ್ರಮ
Last Updated 1 ಮೇ 2022, 4:06 IST
ಅಕ್ಷರ ಗಾತ್ರ

ದಾವಣಗೆರೆ: ರಾಜಕೀಯ ಕುತಂತ್ರದ ಮೂಲಕ ಪ್ರಜಾತಂತ್ರವನ್ನು ಹಾಳು ಮಾಡುವವರನ್ನು ವೈಯಕ್ತಿಕವಾಗಿ ದ್ವೇಷಿಸದೇ ಸಾಂವಿಧಾನಿಕವಾಗಿ ಪಾಠ ಕಲಿಸಬೇಕು ಎಂದು ಜನಪರ ಚಿಂತಕಿ ಬಿ.ಟಿ. ಲಲಿತಾ ನಾಯಕ್‌ ಹೇಳಿದರು.

‘ನೈಜ ನಿರೂಪಣೆಗಳನ್ನು ರೂಪಿಸಿ ಹೊಸ ವೇದಿಕೆ ನಿರ್ಮಿಸಿ’, ‘ಒಡೆದಾಳುವ ಮತ್ತು ಭ್ರಷ್ಟ ರಾಜಕೀಯವನ್ನು ಕೊನೆಗೊಳಿಸೋಣ’, ‘ಸಂವಿಧಾನ ಉಳಿಸಿ ಕರ್ನಾಟಕವನ್ನು ರಕ್ಷಿಸೋಣ’ ಮುಂತಾದ ಧ್ಯೇಯಗಳನ್ನು ಇಟ್ಟುಕೊಂಡು ಮುಂಬರುವ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಸಮಾಜವಾದಿ ಅಧ್ಯಯನ ಕೇಂದ್ರ, ರೈತ ಸಂಘಟನೆಗಳ ವೇದಿಕೆ ವತಿಯಿಂದ ಇಲ್ಲಿನ ಸಹಕಾರ ಸಮುದಾಯ ಭವನದಲ್ಲಿ ಶನಿವಾರ ನಡೆದ ಒಂದು ಕಾಳಜಿಯ ಕರೆ ಕಾರ್ಯಕ್ರಮದಲ್ಲಿ ‘ಕರೆಪತ್ರ’ ಬಿಡುಗಡೆ ಮಾಡಿ ಅವರು ಮಾತನಾಡಿದರು.

ರೈತರ, ಅಲ್ಪಸಂಖ್ಯಾತರ, ಮಹಿಳೆಯರ, ದಲಿತರ, ಹಿಂದುಳಿದವರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಕೆಲಸಗಳಾಗುತ್ತಿವೆ. ಇವರನ್ನು ಸಹಿಸಿ ಸಾಕಾಗಿದೆ. ಮುಂದಿನ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಬೇಕಿದೆ. ಸಂವಿಧಾನ ನಮ್ಮ ಕೈಜಾರಿ ಹೋಗುತ್ತಿದೆ. ಎಚ್ಚೆತ್ತುಕೊಳ್ಳದೇ ವಂಚನೆಯ ಮಾತುಗಳಿಗೆ ಮರುಳಾದರೆ ನೂರಾರು ವರ್ಷ ಹಿಂದಕ್ಕೆ ಹೋಗುತ್ತೇವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೈತ ಮುಖಂಡ ತೇಜಸ್ವಿ ಪಟೇಲ್‌, ‘ಸಾರ್ವಜನಿಕ ಸಮಸ್ಯೆಗಳನ್ನು ಸರಿಯಾಗಿ ಭಾವಿಸಲು ಸಾಧ್ಯವಾದರೆ ಮಾತ್ರ ಹೋರಾಟ ಸಾಧ್ಯ. ಕರೆನ್ಸಿ ವ್ಯಾಲ್ಯುನಿಂದ ಕಾನ್‌ಸ್ಟಿಟ್ಯೂಷನ್‌ ವ್ಯಾಲ್ಯುಗೆ ಬರಬೇಕಿದೆ. ಜಾತಿ, ಧರ್ಮಗಳಿಗೆ ಅಂಟಿಕೊಂಡವರನ್ನು ಘರ್‌ ವಾಪಸಿ ಮಾಡಬೇಕಿದೆ’ ಎಂದು ಹೇಳಿದರು.

‘ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೇ ಆಯ್ಕೆ ಇದ್ದರೆ ಕಾಂಗ್ರೆಸನ್ನೇ ಆಯ್ಕೆ ಮಾಡುತ್ತೇನೆ. ಈ ಎರಡನ್ನು ಬಿಟ್ಟು ಜನಶಕ್ತಿಯ ಪಕ್ಷ ಬಂದರೆ ಆಗ ಅದನ್ನು ಬೆಂಬಲಿಸುತ್ತೇನೆ. ಹೊಂದಾಣಿಕೆ ಮಾಡಿಕೊಳ್ಳುವುದಿದ್ದರೆ ಅಕ್ಕಪಕ್ಕದ ಮನೆಗಳ ಜತೆಗೆ ಹೊಂದಾಣಿಕ ಮಾಡಿಕೊಂಡು ಬದುಕಿ. ಅವರ ಜತೆಗೆ ಹೋರಾಟ ಮಾಡಬೇಡಿ. ಹೋರಾಟ ಮಾಡಬೇಕಿದ್ದರೆ ಭ್ರಷ್ಟ ಪಕ್ಷಗಳು, ಭ್ರಷ್ಟ ಸರ್ಕಾರಗಳ ವಿರುದ್ಧ ಹೋರಾಡಿ’ ಎಂದರು.

‘ರಾಜ್ಯದಲ್ಲಿ 10 ಪರ್ಸೆಂಟ್‌ ಕಮಿಷನ್‌ ನಡೆಯುತ್ತಿದೆ ಎಂದು ಅಮಿತ್‌ ಶಾ, ಮೋದಿ ಹಿಂದೆ ಆರೋಪಿಸಿದ್ದರು. ಈಗ 40 ಪರ್ಸೆಂಟೇಜ್‌ ನಡೆಯುತ್ತಿದೆ ಎಂಬ ಆರೋಪಗಳಿವೆ. ದಯವಿಟ್ಟು ಶಾ, ಮೋದಿ ಅವರು ಹಿಂದಿನ 10 ಪರ್ಸೆಂಟ್‌ಗಾದರೂ ಇಳಿಸಬೇಕು’ ಎಂದು ವ್ಯಂಗ್ಯವಾಡಿದರು.

ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಎಸ್‌.ಆರ್‌. ಹಿರೇಮಠ್‌, ‘ಸಂವಿಧಾನದ ಬಗ್ಗೆ ಮಕ್ಕಳಿಗೆ ಸಮಗ್ರ ಪರಿಕಲ್ಪನೆಗಳಿಲ್ಲ. ಸಂವಿಧಾನವು ದೇಶವನ್ನು ಆಳಬೇಕು. ಸಂವಿಧಾನಕ್ಕೆ ಕುತ್ತು ತರುವ ರೀತಿಯಲ್ಲಿ ಆಡಳಿತ ಇರಬಾರದು. ಶ್ರಮಶಕ್ತಿಗೆ, ಶ್ರಮ ಜೀವಿಗಳಿಗೆ ಆನಂದಿಸುವ, ಪ್ರತಿಯೊಬ್ಬರಿಗೂ ಗೌರವಯುತವಾಗಿ ಬದುಕುವ ಹಕ್ಕನ್ನು ನೀಡಿರುವ ಸಂವಿಧಾನವನ್ನು ರಕ್ಷಿಸಬೇಕು’ ಎಂದು ತಿಳಿಸಿದರು.

ಕೃಷಿ ಆರ್ಥಿಕ ತಜ್ಞ ಪ್ರಕಾಶ್‌ ಕಮ್ಮರಡಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಚುನಾವಣೆ ಎಂದರೆ ಐದು ವರ್ಷ ಆಡಳಿತ ಮಾಡಿದ ಮೇಲೆ ಅದರ ಫಲಿತಾಂಶವನ್ನು ನೋಡುವುದಾಗಿತ್ತು. ಚೆನ್ನಾಗಿ ಆಡಳಿತ ನೀಡಿದ್ದರೆ ಗೆಲ್ಲುತ್ತಾರೆ. ಇಲ್ಲದಿದ್ದರೆ ಸೋಲುತ್ತಾರೆ ಎಂಬುದು ಪ್ರಜಾಪ್ರಭುತ್ವದ ಆಶಯವಾಗಿತ್ತು. ಆದರೆ, ಈಗ ಹೇಗೆ ಆಡಳಿತ ಮಾಡಿದರೂ ಗೆಲ್ಲುವ ಕಲೆ ಕರಗತ ಮಾಡಿಕೊಂಡರೆ ಸಾಕು ಎಂಬ ಸ್ಥಿತಿಗೆ ಡಬಲ್ ಎಂಜಿನ್‌ ಸರ್ಕಾರಗಳು ಪ್ರಜಾಪ್ರಭುತ್ವವನ್ನು ತಂದಿಟ್ಟಿವೆ’ ಎಂದು ಕೃಷಿ ಆರ್ಥಿಕ ತಜ್ಞ ಪ್ರಕಾಶ್‌ ಕಮ್ಮರಡಿ ವಿಶ್ಲೇಷಿಸಿದರು.ನೂಲೆನೂರು ಶಂಕರಪ್ಪ ಸ್ವಾಗತಿಸಿದರು. ಅನೀಸ್‌ ಪಾಷಾ ವಂದಿಸಿದರು. ಈಚಲಘಟ್ಟ ಸಿದ್ಧವೀರಪ್ಪ ಕಾರ್ಯಕ್ರಮ ನಿರೂಪಿಸಿದರು. ನಾಗೇಶ್‌, ಮಧು ಚಂದನ್‌ ಇದ್ದರು.

***

ಮುಖ್ಯಮಂತ್ರಿಯಾದವರೊಬ್ಬರು, ಮುಖ್ಯಮಂತ್ರಿಯಾಗಲು ಹಾದಿಯಲ್ಲಿರುವವರೊಬ್ಬರು ಜೈಲಿಗೆ ಹೋಗಿ ಬಂದರೆ ಭವ್ಯ ಸ್ವಾಗತ ನೀಡುವ ಸಮಾಜ ಬದಲಾಗಬೇಕು.

- ಬಡಗಲಪುರ ನಾಗೇಂದ್ರಪ್ಪ, ರೈತ ಹೋರಾಟಗಾರ

***

5 ವರ್ಷಗಳ ಹಿಂದೆ ಟ್ವೀಟ್‌ ಮಾಡಿದವರನ್ನು ಬಂಧಿಸುತ್ತಾರೆ. ನಿತ್ಯ ದ್ವೇಷ ಭಾಷಣ ಮಾಡುವ ಮುತಾಲಿಕ್‌ ಜತೆಗೆ ಮುಖ್ಯಮಂತ್ರಿ ಸಭೆ ಮಾಡುತ್ತಾರೆ.

- ಶ್ರೀಪಾದ ಭಟ್‌, ಆರ್ಥಿಕ ವಿಶ್ಲೇಷಕರು

***

ಮಾಡಬಾರದನ್ನು ಮಾಡಿಯೂ ಮತ ಮತ್ತು ಮನಸ್ಸುಗಳನ್ನು ಒಡೆದು ಆಳುವ ಪಕ್ಷಗಳು ಗೆಲ್ಲುತ್ತಿವೆ. ಇದರಿಂದ ಪ್ರಜಾಪ್ರಭುತ್ವಕ್ಕೆ ಗಂಡಾಂತರ ಬಂದಿದೆ.

- ಎ. ನಾರಾಯಣ, ರಾಜಕೀಯ ಅಂಕಣಕಾರ

***

ರಾಜಕೀಯ ಅಂದರೆ ಅಸಹ್ಯ ಪಡುವುದನ್ನು ಬಿಡಬೇಕು. ಇಲ್ಲಿ ಬಂದಿರುವ ಎಲ್ಲರೂ ರಾಜಕೀಯದಲ್ಲಿ ತೊಡಗಿಸಿಕೊಳ್ಳಬೇಕು. ಆಗ ಮಾತ್ರ ಬದಲಾವಣೆ ಸಾಧ್ಯ.

-ಪೃಥ್ವಿ ರೆಡ್ಡಿ, ಎಎಪಿ ರಾಜ್ಯಾಧ್ಯಕ್ಷ

***

ರೈತರನ್ನು, ಕಾರ್ಮಿಕರನ್ನು ಬಗಲಲ್ಲಿ ಇಟ್ಟುಕೊಳ್ಳುವ ಪಕ್ಷಗಳು ಚುನಾವಣೆ ಮುಗಿದ ಕೂಡಲೇ ಎತ್ತಿ ಕೆಳಗೆ ಹಾಕುತ್ತವೆ. ಯಾವ ಪಕ್ಷವನ್ನೂ ಸುಲಭದಲ್ಲಿ ನಂಬಬೇಡಿ.

- ಬಲ್ಲೂರು ರವಿಕುಮಾರ್‌, ರೈತ ಹೋರಾಟಗಾರ

***

ಶಿಕ್ಷಣ, ಆರೋಗ್ಯ, ಉದ್ಯೋಗ, ಕೆಲಸಕ್ಕೆ ಸರಿಯಾದ ವೇತನ ನೀಡಿ ಎಂದರೆ ಹಿಜಾಬ್ ವಿವಾದ ತರುತ್ತಾರೆ. ಸಹಬಾಳ್ವೆ ಬೇಕು ಅಂದರೆ ಹಲಾಲ್‌ಕಟ್‌ ಎನ್ನುತ್ತಾರೆ.

- ಜಬೀನಾಖಾನಂ, ಹೋರಾಟಗಾರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT