ಗುರುವಾರ , ಅಕ್ಟೋಬರ್ 6, 2022
23 °C
ಶಿವನಗರ: ಹಳದಿಯಾಗಿದೆ ಪಾಲಿಕೆ ಪೂರೈಸುತ್ತಿರುವ ನೀರಿನ ಬಣ್ಣ

ಕಲುಷಿತ ನೀರು ಪೂರೈಕೆ: ಕಂಗಾಲಾದ ಜನ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ನಗರಕ್ಕೆ ಪೂರೈಸುವ ನೀರು ಮಳೆಗಾಲದಲ್ಲಿ ಕೆಂಪಾ ಬಣ್ಣಕ್ಕೆ ತಿರುಗುವುದು ಸಹಜ. ಆದರೆ, ಮಹಾನಗರ ಪಾಲಿಕೆ ವ್ಯಾಪ್ತಿಯ ಶಿವನಗರದಲ್ಲಿ ಪೂರೈಸಿರುವ ನೀರು ಈ ಬಾರಿ ಹಳದಿ ಬಣ್ಣಕ್ಕೆ ತಿರುಗಿದ್ದು, ಸ್ಥಳೀಯರು ಈ ಕಲುಷಿತ ನೀರನ್ನೇ ಕುಡಿಯಲು ಬಳಸುತ್ತಿದ್ದಾರೆ.

ಶಿವನಗರ 4ನೇ ಕ್ರಾಸ್‌ ಮತ್ತು ಸುತ್ತಲ ಪ್ರದೇಶಗಳಲ್ಲಿ 10–12 ದಿನಗಳಿಗೊಮ್ಮೆ ಮಾತ್ರ ನಲ್ಲಿ ಮೂಲಕ ನೀರು ಪೂರೈಸಲಾಗುತ್ತದೆ. ಇದೀಗ ಕಳೆದೆರಡು ಬಾರಿ ಪೂರೈಸಲಾದ ನೀರು ಅರಿಶಿಣ ಮಿಶ್ರಣ ಮಾಡಿದಂತಾಗಿದ್ದು, ಹಳದಿ ಬಣ್ಣಕ್ಕೆ ತಿರುಗಿದೆ. ರಾತ್ರಿ ನೀರು ಬಂದಿದ್ದರಿಂದ ಹಾಗೇ ಅದನ್ನು ತುಂಬಿಸಿಕೊಂಡಿರುವ ಜನ, ಕುಡಿಯಲು, ಅಡುಗೆಗೆ, ಬಟ್ಟೆ ತೊಳೆಯಲು ಬಳಸಿದ್ದಾರೆ.

‘ನಲ್ಲಿ ಮೂಲಕ ನೀರನ್ನು ಆರಂಭದಲ್ಲಿ ಚರಂಡಿಗೆ ಚೆಲ್ಲುತ್ತೇವೆ. ಬಳಿಕ ಮನೆಗೆ ಬೇಕಾದ ನೀರನ್ನು ಹಿಡಿದುಕೊಳ್ಳುತ್ತೇವೆ. ಇದೀಗ ಬರುತ್ತಿರುವ ನೀರು ಹಳದಿ ಬಣ್ಣದಲ್ಲಿದ್ದರೂ ಬಳಸುತ್ತಿದ್ದೇವೆ’ ಎಂದು ಶಿವನಗರ ನಿವಾಸಿ ಫಾತಿಮಾಬಿ ಮಾಹಿತಿ ನೀಡಿದರು.

‘ಈ ಪ್ರದೇಶದಲ್ಲಿ ಸುಮಾರು 600 ಮನೆಗಳಿಗೆ ಎಲ್ಲ ಕಡೆಗಳಲ್ಲಿ 10–12 ದಿನಗಳ ಹಿಂದೆ ಮತ್ತು ಈಗ ಹಳದಿ ನೀರು ಬಂದಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಕೆಂಪು ನೀರು ಬರುತ್ತಿತ್ತು. ಈಗ ಹಳದಿ ಬಣ್ಣಕ್ಕೆ ಬದಲಾಗಿದೆ. ನಡುರಾತ್ರಿ ಬಿಡುವುದರಿಂದ ನೀರಿನ ಬಣ್ಣ ಗೊತ್ತಾಗುವುದಿಲ್ಲ. ಆದರೂ ತುಂಬಿಕೊಳ್ಳುತ್ತೇವೆ. ಕೆಲವರು ಬಣ್ಣ ಗುರಿತಿಸಿ ಬಳಸಬೇಡಿ ಎಂದು ಹೇಳಿದ ಮೇಲೆ ನಮಗೂ ಗೊತ್ತಾಯಿತು’ ಎಂದು ಫಜ್ಲುನ್ನಿಸಾ ಹೇಳಿದರು.

ಈ ನೀರನ್ನು ಬಳಸಿ ಬಟ್ಟೆ ಒಗೆದಾಗ ಕೈಯೆಲ್ಲ ತುರಿಕೆಯಾಗುತ್ತಿದೆ. ಗಾಯವಾಗುತ್ತಿದೆ. ಹಾಗಾಗಿ ಮಹಾನಗರ ಪಾಲಿಕೆಯವರು ಶುದ್ಧ ನೀರನ್ನು ಪೂರೈಕೆ ಮಾಡಬೇಕು ಎಂದು ಸ್ಥಳೀಯರಾದ ಸಬ್ರಿನ್‌ ತಾಜ್‌ ಆಗ್ರಹಿಸಿದರು.

‘ಇಲ್ಲಿ ನೀರಿನ ಸಮಸ್ಯೆ ಮಾತ್ರವಲ್ಲ, ಸ್ವಚ್ಛತೆಯ ಸಮಸ್ಯೆಯೂ ಇದೆ. ಕಸ ವಿಲೇವಾರಿ ಸಮರ್ಪಕವಾಗಿಲ್ಲ. ಚರಂಡಿ ಗಬ್ಬು ನಾರುತ್ತಿದೆ. ಪಾಲಿಕೆ ಸದಸ್ಯರು, ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಇಲ್ಲಿ ಬಡವರು, ಕೂಲಿ ಕಾರ್ಮಿಕರೇ ಹೆಚ್ಚು ಇರುವುದರಿಂದ ಯಾರೂ ಪ್ರಶ್ನೆ ಮಾಡುವುದಿಲ್ಲ ಎಂಬ ಧೈರ್ಯದಿಂದ ನಿರ್ಲಕ್ಷಿಸಲಾಗಿದೆ’ ಎಂದು ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ಅಧ್ಯಕ್ಷೆ ಜಬೀನಾ ಖಾನಂ ದೂರಿದರು.

‘ಮಿಶ್ರಣ ಆಗಿರಬೇಕು; ಸರಿಪಡಿಸುತ್ತೇವೆ’

‘ಹಳದಿ ನೀರು ಬರುತ್ತಿದೆ ಎಂದರೆ ಎಲ್ಲೋ ಪೈಪ್‌ ಒಡೆದು ಮಿಶ್ರಣ ಆಗುತ್ತಿರಬೇಕು. ನಮ್ಮ ಗಮನಕ್ಕೆ ಬಂದಿರಲಿಲ್ಲ. ಎಂಜಿನಿಯರ್‌ ಮತ್ತು ನೀರು ಪೂರೈಕೆ ಸಿಬ್ಬಂದಿಯನ್ನು ಕೂಡಲೇ ಸ್ಥಳಕ್ಕೆ ಕಳುಹಿಸಿ ಪೈಪ್‌ ಒಡೆದಿರಬಹುದೇ ಎಂಬುದನ್ನು ನೋಡಿ ಸರಿಪಡಿಸಲಾಗುವುದು’ ಎಂದು ಪಾಲಿಕೆ ಕಾರ್ಯಪಾಲಕ ಎಂಜಿನಿಯರ್‌ ವಿನಯ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಶಿವನಗರ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿನ ಮನೆಗಳು ಇಕ್ಕಟ್ಟಾದ ಸ್ಥಳದಲ್ಲಿವೆ. ಅಲ್ಲಿ ಹಳೆಯ ಪೈಪ್‌ಲೈನ್‌ ಇದೆ. ಅಲ್ಲದೆ, ಆ ಭಾಗದಲ್ಲಿ ಓವರ್‌ಹೆಡ್‌ ಟ್ಯಾಂಕ್‌ ಸಹ ಕಡಿಮೆ ಇವೆ. ಬಾಷಾನಗರದ ಓವರ್‌ಹೆಡ್‌ ಟ್ಯಾಂಕ್‌ನಿಂದಲೇ ನೀರು ಪೂರೈಸಬೇಕು. ಇದರಿಂದ ನಿತ್ಯ ನೀರು ಪೂರೈಕೆಯೂ ಸಮಸ್ಯೆಯಾಗಿದೆ. ಜಲಸಿರಿ ಯೋಜನೆ ಕಾಮಗಾರಿಗಳು ಮುಗಿದಾಗ ನೀರು ಪೂರೈಕೆಯ ಸಮಸ್ಯೆ ಸರಿಯಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಶಿವನಗರದಲ್ಲಿ ಹಳದಿ ನೀರಿನ ಬಗ್ಗೆ ನನ್ನ ಗಮನಕ್ಕೆ ತಂದಿಲ್ಲ. ನಾಳೆಯೇ ಹೋಗಿ ಸಮಸ್ಯೆ ಏನು ಎಂದು ನೋಡಿ ಸರಿಪಡಿಸುತ್ತೇನೆ ಎಂದು ಸ್ಥಳೀಯ ವಾರ್ಡ್‌ನ ಪಾಲಿಕೆ ಸದಸ್ಯ ಅಹ್ಮದ್ ಕಬೀರ್ ಖಾನ್ ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು