ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಜಾ, ಸ್ಫೋಟಕಗಳ ನಿಯಂತ್ರಣಕ್ಕೆ ಕಟ್ಟೆಚ್ಚರ

Last Updated 16 ಮಾರ್ಚ್ 2021, 3:08 IST
ಅಕ್ಷರ ಗಾತ್ರ

ದಾವಣಗೆರೆ: ಗಾಂಜಾ ಮಾರಾಟ ಹಾಗೂ ಸ್ಫೋಟಕಗಳ ಬಳಕೆಗಳ ಬಗ್ಗೆ ಜಿಲ್ಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.

‘ಕಲ್ಲು ಕ್ವಾರಿಗಳಲ್ಲಿ ಅಕ್ರಮವಾಗಿ ಸಂಗ್ರಹಿಸುವ ಸ್ಫೋಟಕಗಳ ಸಂಗ್ರಹಣೆ ಬಗ್ಗೆ ನಿಗಾವಹಿಸಲಾಗುತ್ತಿದೆ. ಪರವಾನಗಿ ಇದ್ದವರು ಸಹ ಸ್ಫೋಟಕ ಬಳಸುವ ಸಂದರ್ಭದಲ್ಲಿ ಡಿಜೆಎಂಎಸ್‌ನಿಂದ ಅನುಮತಿ ಪಡೆಯಬೇಕಾಗುತ್ತದೆ.ಕಲ್ಲು ಗಣಿಕಾರಿಕೆ ನಡೆಸಲು ಪರವಾನಗಿ ಪಡೆಯಲು ಜಿಲ್ಲೆಯಲ್ಲಿ ಹೊಸದಾಗಿ 10 ಅರ್ಜಿಗಳು ಬಂದಿದ್ದು, ಅವುಗಳಿಗೆ ಇನ್ನೂ ಅನುಮತಿ ನೀಡಿಲ್ಲ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸ್ಫೋಟಕಗಳ ಬಳಕೆಗೂ ಮುನ್ನ ಸಂಬಂಧಿಸಿದವರು ಮಾಹಿತಿ ನೀಡಬೇಕಾಗುತ್ತದೆ. ಒಂಟಿಹಾಳ್‌ನಲ್ಲಿ ಈಚೆಗೆ ಅಕ್ರಮವಾಗಿ ದಾಸ್ತಾನು ಮಾಡಿದ್ದ ಸ್ಫೋಟಕಗಳನ್ನುವಶಕ್ಕೆ ಪಡೆಯಲಾಗಿದೆ. ಜಿಲ್ಲೆಯ ಕಾಡಜ್ಜಿ ಮತ್ತು ತಾಯಿಟೋಣಿ ಕ್ವಾರಿಯ ಪರವಾನಗೆ ರದ್ದಾಗಲಿದೆ’ ಎಂದು ತಿಳಿಸಿದರು.

‘ಗಾಂಜಾ ಪ್ರಕರಣ ಸಂಬಂಧ ಹರಿಹರದಲ್ಲಿ ಈಚೆಗೆ ಸಿಕ್ಕಿಬಿದ್ದ ಭದ್ರಾವತಿ ಮೂಲದ ಇಬ್ಬರು ಆರೋಪಿಗಳು ಆಂಧ್ರಪ್ರದೇಶದ ಕಾಕಿನಾಡದಿಂದ ಗಾಂಜಾ ತಂದು ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ’ ಎಂದರು.

‘ಸೈಬರ್ ಕಳ್ಳರು ಹಣ ಮಾಡಲು ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ನನ್ನ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಿ ಸುಮಾರು 100 ಜನರಿಗೆ ರಿಕ್ವೆಸ್ಟ್ ಕಳುಹಿಸಿ ಅದರಲ್ಲಿ ಒಬ್ಬರಿಗೆ ₹9 ಸಾವಿರ ಬೇಡಿಕೆ ಇಡಲಾಗಿತ್ತು. ಈ ವಿಷಯ ನನ್ನ ಗಮನಕ್ಕೆ ಬರುತ್ತಿದ್ದಂತೆಯೇ ನಕಲಿ ಖಾತೆಯನ್ನು ಡಿಲೀಟ್ ಮಾಡಲಾಗಿದೆ. ಸೈಬರ್ ಕ್ರೈಂ ವಿಭಾಗಕ್ಕೆ ದೂರು ಸಲ್ಲಿಸಿದ್ದು, ತನಿಖೆ ನಡೆಯುತ್ತಿದೆ’ ಎಂದು ತಿಳಿಸಿದರು.

‘ಸಾರ್ವಜನಿಕರು ಫೇಸ್‌ಬುಕ್ ಇತರೆ ಸಾಮಾಜಿಕ ಜಾಲತಾಣಗಳ ಬಳಕೆ ಮಾಡುವಾಗ ಯಾವುದೇ ಕಾರಣಕ್ಕೂ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬಾರದು. ಕೆಲವರು ಕರೆ ಮಾಡಿ, ಪಿನ್ ನಂಬರ್, ಇ-ಮೇಲ್ ಐಡಿ, ಒಟಿಪಿ ನಂಬರ್ ಕೇಳುತ್ತಾರೆ. ಸಂಬಂಧಪಟ್ಟ ಸಂಸ್ಥೆ, ತುಂಬಾ ಪರಿಚಯ ಇದ್ದವರ ಹೊರತುಪಡಿಸಿ ಬೇರೆಯವರಿಗೆ ಯಾವುದೇ ಕಾರಣಕ್ಕೂ ವೈಯಕ್ತಿಕ ವಿವರ ನೀಡಲೇಬಾರದು’ ಎಂದು ಮನವಿ ಮಾಡಿದರು.

‘ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ತೋಟದಲ್ಲಿ ಶ್ರೀಗಂಧದ ಮರಗಳ ಕಳವು ಪ್ರಕರಣ ಸಂಬಂಧ ತನಿಖೆ ನಡೆಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಶಾಸಕರ ತೋಟದಲ್ಲಿ ಈಗಾಗಲೇ 3 ಬಾರಿ ಗಂಧದ ಮರಗಳ ಕಳ್ಳತನ ನಡೆದಿದೆ. ಈ ನಿಮಿತ್ತ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT