ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಸೀಕೆರೆ: ಜೋಳದ ಬೆಳೆ ರಕ್ಷಣೆಗೆ ದೇಶಿ ಪದ್ಧತಿಗೆ ಮೊರೆ

ಉತ್ತಮ ಇಳುವರಿ ನಿರೀಕ್ಷೆಗೆ ತಣ್ಣೀರೆರಚಿದ ಪಕ್ಷಿ
Last Updated 15 ಸೆಪ್ಟೆಂಬರ್ 2021, 4:08 IST
ಅಕ್ಷರ ಗಾತ್ರ

ಅರಸೀಕೆರೆ (ಉಚ್ಚಂಗಿದುರ್ಗ): ಅರಸೀಕೆರೆ ಹೋಬಳಿ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಜೋಳ ನಿರೀಕ್ಷಿತ ಇಳುವರಿಯ ಭರವಸೆ ಮೂಡಿಸಿದ್ದು, ಪಕ್ಷಿಗಳಿಂದ ಜೋಳ ರಕ್ಷಿಸಿಕೊಳ್ಳಲು ದೇಶಿ ಪದ್ಧತಿಯ ಹಲವು ತಂತ್ರಗಳನ್ನು ರೈತರು ಅನುಸರಿಸುತ್ತಿದ್ದಾರೆ.

ಹೋಬಳಿ ವ್ಯಾಪ್ತಿಯಲ್ಲಿ ಅಂದಾಜು 192.95 ಹೆಕ್ಟೇರ್‌ ಪ್ರದೇಶದಲ್ಲಿ ಜೋಳ ಬಿತ್ತನೆ ಮಾಡಲಾಗಿದೆ. ಅತಿವೃಷ್ಟಿ–ಅನಾವೃಷ್ಟಿ ನಡುವೆಯೂ ಜೋಳ ಕಾಳು ಕಟ್ಟುವ ಹಂತಕ್ಕೆ ತಲುಪಿದ್ದು, ಪಕ್ಷಿಗಳ ಹಾವಳಿಯಿಂದ ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ.

ಸೂರ್ಯೋದಯ ಆಗುವ ಮೊದಲೇ ರೈತರು ಹೊಲಗಳಲ್ಲಿ ಬೀಡು ಬಿಟ್ಟು ತಮಟೆ, ತಟ್ಟೆ, ಡಬ್ಬಿಗಳ ಶಬ್ದ ಮಾಡುತ್ತಾ ಪಕ್ಷಿಗಳನ್ನು ಓಡಿಸುವ ಕಾಯಕದಲ್ಲಿ ತಲ್ಲೀನರಾಗಿದ್ದಾರೆ. ಕೆಲ ರೈತರು ಹೊಲದ ಎತ್ತರ ಪ್ರದೇಶದಲ್ಲಿ ಬೆದರು ಬೊಂಬೆ ನಿಲ್ಲಿಸಿದ್ದಾರೆ. ಮತ್ತೆ ಕೆಲವರು ಸೀರೆ, ಬಣ್ಣ ಬಣ್ಣದ ಪ್ಲಾಸ್ಟಿಕ್‌ ಚೀಲ, ಕ್ಯಾಸೆಟ್ ಟೇಪ್‌ಗಳನ್ನು ಜಮೀನಿನ ಸುತ್ತಾ ಸುತ್ತಿದ್ದಾರೆ.

ಗುಬ್ಬಿಗಳು, ಗೊರವಂಕ, ಪಾರಿವಾಳ, ಕಾಗೆಗಳು ಜೋಳದ ಬೆಳೆಗೆ ಹಾನಿಯುಂಟು ಮಾಡುತ್ತವೆ. ಇದರ ನಡುವೆಯೂ ನಗರ ಪ್ರದೇಶಗಳಿಂದ ವಲಸೆ ಬರುತ್ತಿರುವ ಗಿಳಿಗಳ ಹಿಂಡು ತಂಡೋಪತಂಡವಾಗಿ ದಾಳಿ ಮಾಡುತ್ತಿರುವುದು ತಲೆನೋವಾಗಿ ಪರಿಣಮಿಸಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಅರಸೀಕೆರೆ, ಪುಣಭಘಟ್ಟ, ತವಡೂರು, ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಜೋಳ ಬಿತ್ತನೆ ಮಾಡಿರುವುದರಿಂದ ಅಷ್ಟಾಗಿ ಪಕ್ಷಿಗಳ ಕಾಟವಿಲ್ಲ. ಆದರೆ ಉಚ್ಚಂಗಿದುರ್ಗ, ಹಿರೇಮೆಗಳಗೆರೆ, ಲಕ್ಷ್ಮೀಪುರ, ಅಣಜಿಗೆರೆ ಪಂಚಾಯಿತಿ ವ್ಯಾಪ್ತಿಯ ಅಲ್ಲಲ್ಲಿ ಕನಿಷ್ಠ ಪ್ರಮಾಣದಲ್ಲಿ ಜೋಳ ಬಿತ್ತನೆ ಮಾಡಿದ್ದು, ಪಕ್ಷಿಗಳ ಕಾಟಕ್ಕೆ ರೈತರು ನಲುಗಿ ಹೋಗಿದ್ದಾರೆ.

ದಿನ ಬಳಕೆಯ ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಸಣ್ಣ ರೈತರು ಅಲ್ಪ ಸ್ವಲ್ಪ ಜಮೀನಿನಲ್ಲಿ ಆಹಾರ ಧಾನ್ಯಗಳನ್ನು ಬೆಳೆದು ಸ್ವಾವಲಂಬಿ ಜೀವನಕ್ಕೆ ಊಟದ ಜೋಳ ಬಿತ್ತನೆ ಮಾಡಿದ್ದಾರೆ. ಪಕ್ಷಿಗಳ ಕಾಟಕ್ಕೆ ತೆನೆಯ ಅರ್ಧದಷ್ಟು ಬೆಳೆ ಹಾಳಾಗುತ್ತಿದ್ದು, ಬೆಳೆ ರಕ್ಷಿಸಿಕೊಳ್ಳುವುದು ಸವಾಲಾಗಿದೆ ಎನ್ನುತ್ತಾರೆ ಹಿರಿಯ ರೈತ ಯರಬಳ್ಳಿಯ ಎಂ. ಉಮಾಪತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT