ಸೋಮವಾರ, 29 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ತಲ್ಲಣ ಬಿಚ್ಚಿಟ್ಟ ಕವಿಗೋಷ್ಠಿ

Last Updated 3 ಮಾರ್ಚ್ 2021, 2:25 IST
ಅಕ್ಷರ ಗಾತ್ರ

ದಾವಣಗೆರೆ: ಕೊರೊನಾ ಕಾಲದ ಸಂಕಷ್ಟವನ್ನು, ಸಂಬಂಧಗಳ ಬೆಸುಗೆಯನ್ನು, ತಲ್ಲಣಗಳನ್ನು, ನೋವನ್ನು ತೆರೆದಿಡಲು ಕೊರೊನಾ ಕವಿಗೋಷ್ಠಿ ವೇದಿಕೆಯಾಯಿತು. ಕೆಲವು ಅತ್ಯುತ್ತಮ ಕವನಗಳು ಬೆಳಕಿಗೆ ಬರಲು ಕಾರಣವಾಯಿತು.

ಅಪ್ಪ ನೀ ಹೋಗಿದ್ದೇ ಒಳ್ಳೆಯದಾಯಿತು

ಈಗಿದ್ದಿದ್ದರೆ ಮುಳ್ಳ ಬೇಲಿನ ಬಟ್ಟೆಗೂ

ನಾಜೂಕು ನಡಿಗೆಯಾಗಿ

ಹೆಜ್ಜೆಗಳೇ ನಾಚಬೇಕಿತ್ತು


ಎಂದು ಸೈಯದ್‌ ಫೈಜುಲ್ಲಾ ಸಂತೇ ಬೆನ್ನೂರು (ಫೈಜ್ನಟ್ರಾಜ್‌) ಆಶಯ ನುಡಿಗಳ ಕೊನೆಯಲ್ಲಿ ವಾಚಿಸಿದ ಕವನ ಮೊದಲನೇಯದ್ದಾದರೆ,

ಯಾವ ಸೀಮೆಯ ದಾಟಿ

ಎಲ್ಲಿ ನಂಜಾಡುವ ಉಸಿರು

ಸುಳಿ ಸುಳಿದು ಬಿರುಗಾಳಿ ಎದ್ದು

ನೆಲಮುಗಿಲು ಬುಗುಬುಗಿಲು

ಎಂದು ಅಧ್ಯಕ್ಷತೆ ವಹಿಸಿದ್ದ ಬಿ.ಎನ್‌. ಮಲ್ಲೇಶ್‌ ವಾಚಿಸಿದ ‘ಯಾವ ಸಮಾಧಿಯ ಮೇಲೆ ಯಾರ ಹೆಸರು’ ಎಂಬ ಕವನ ಕೊನೆಯದ್ದಾಯಿತು. ಮಧ್ಯೆ 25 ಕವಿಗಳು ಕವನ ವಾಚಿಸಿದರು.

ಸಮ್ಮೇಳನದ ಸರ್ವಾಧ್ಯಕ್ಷ ಎನ್‌.ಟಿ. ಎರ‍್ರಿಸ್ವಾಮಿ ಕೂಡ ಕೊರೊನಾ ಕಾಲ ಹೇಗೆ ಸಂಬಂಧಗಳನ್ನು ಬೆಸೆಯಿತು ಎಂದು ತಿಳಿಸಿ ‘ಮಡದಿ ನಾವಿರುವ ಈ ಮನೆಯ ತತ್ವ ತಿಳಿದಿದೆಯೇನೆ..’ ಎಂದು ಮನೆಯನ್ನು ರೂಪಕವಾಗಿ ಇಟ್ಟುಕೊಂಡು ಗಟ್ಟಿಗೊಳ್ಳುವ ಸಂಬಂಧವನ್ನು ತೆರದಿಟ್ಟರು.

ಸಂಧ್ಯಾ ಸುರೇಶ್‌ ಅವರು ‘ಬರ್ಬರ ಬದುಕಿನ ದಿನಗಳು’ ಎಂಬ ಕವನದ ಮೂಲಕ ಭೂ ಮಂಡಲ ಕುಸಿಯುತ್ತಿರಲು ಹೆಣ ಎಣಿಕೆ ನಡೆಯುತ್ತಿರಲು ಎಂದು ಬರ್ಬರತೆಯನ್ನು ತೆರದಿಟ್ಟರು. ಎಂ.ಬಿ. ಸುನೀತಾ ಅವರು ‘ನಿನ್ನ ಏನೆಂದು ಸಂಬೋಧಿಸಲಿ’ ಎಂದು ಪ್ರಶ್ನಿಸಿದರು. ಕೆ.ಪಂಚಾಕ್ಷರಿ ಕಮಲಾಪುರ ‘ಸಾವಿನ ಸುತ್ತ’ದ ಮೂಲಕ ‘ಮುಗ್ದ ಹೃದಯಗಳ ರಕ್ತ ಹೀರುವ ತಿಗಣೆಗಳಿವೆ ಎಚ್ಚರ’ ಎಂದು ಕೊರೊನಾ ಕಾಲದಲ್ಲೂ ಕಾಸು ಮಾಡಲು ಹೊರಟವರನ್ನು ವಿಡಂಬಿಸಿದರು. ಡಿ. ಅಂಜಿನಪ್ಪ ‘ಸ್ಮಶಾನಾತಂಕ’ದ ಕವನದಲ್ಲಿ ಕಾಣದ ಕಣವೊಂದು ಬಂದು ಕಂಗೆಡಿಸಿದ ಬಗೆ ಕಟ್ಟಿಕೊಟ್ಟರು. ಶುಶ್ರೂಷಕಿ ಎಚ್‌.ಎಸ್‌. ಪುಷ್ಪಾ ಮಂಜುನಾಥ್ ತನ್ನ ಅನುಭವದ ಆಧಾರದಲ್ಲಿ ‘ಕೊರೊನಾ’ ತೆರೆದಿಟ್ಟರು.

ಕೆ.ಎಚ್‌. ಮರಿರಾಜ್‌ ಭಾನುವಳ್ಳಿ ಅವರ ‘ಕೊರೊನೊ ಬಂತು ಕೊರೊನಾ’, ಅಮೋಘಸಿದ್ಧ ಪೂಜಾರಿ ಅವರ ‘ಕೊರೊನಾದಿಂದ ಹುಷಾರ್‌’, ಬಿ. ಗಾಯತ್ರಿ ಚಂದ್ರು ಅವರ ‘ಕೊರೊನಾ ನಿನಗೊಂದು ನಮನ’, ಜಿ.ಎಂ. ಹಿರೇಮಠ ಅವರ ‘ವಿಶ್ವದ ಹೆಮ್ಮಾರಿ’, ನಾಗರಾಜಪ್ಪ ಅರ್ಕಾಚಾರ್‌ ಅವರ ‘ಕೊರೊನಾ ಮಾರಿ’, ಎನ್‌.ಆರ್‌. ರಾಜಾರಾಂ ದೇಸಾಯಿ ಅವರ ‘ಏ ಕೊರೊನಾ’, ಕೆ.ಟಿ. ಗೀತಾ ಕೊಂಡಜ್ಜಿ ‘ಕೊರೊನಾ ನೀ ನಿಶ್ವರೂಪಿ ನಿಜನಾ’ ಕವನಗಳು ಗಮನಸೆಳೆದವು.

ಡಾ.ಬಿ.ಎ. ರಾಚಪ್ಪ ಅವರ ‘ಮಹಾಮಾರಿ ಕೊರೊನಾ’, ಯು.ಕೆ. ಅಣ್ಣಪ್ಪ ಭಾನುವಳ್ಳಿ ಅವರ ‘ವೈರಾಣು ಹೈರಾಣು’, ಬಸವರಾಜ್‌ ಕೆ. ಅವರ ‘ಮನ್ವಂತರ’, ಶಿವಯೋಗಿ ಹಿರೇಮಠ ಅವರ ‘ಜೀವ ಭಯದ ಭವ’, ಕುಂದೂರು ಮಂಜಪ್ಪ ಅವರ ‘ಕಾಣದ ಬದುಕು’ ಎಂ. ಬಸವರಾಜ್‌ ಅವರ ‘ಸಾಕು ನಿನ್ನ ನರ್ತನ’, ಎಂ. ಗೀತಾ ಕುಮಾರಿ ಐಗೂರು ಅವರ ‘ಕೊರೊನಾ ರೋಗ’, ನಾಗೇಂದ್ರಪ್ಪ ಸಿ.ಎಚ್. ಅವರ ‘ಕೊರೊನಾ ಜಾಗೃತಿ’, ಕೃಷ್ಣಮೂರ್ತಿಎಸ್‌. ಮಾಯಕೊಂಡ ಅವರ ‘ಕೊರೊನಾವೆಂಬ ಜವರಾಯ’, ಈಶ್ವರಪ್ಪ ಎಚ್‌. ಅವರ ‘ಕೊರೊನಾ ಮಹಾಮಾರಿ’, ಲೋಕಾಚಾರ್‌ ಮಂಡ್ಲೂರು ಅವರ ‘ಕರೆಮಾರಿ ಕೊರೊನಾ’, ಜಿ.ನಿಜಲಿಂಗಪ್ಪ ಅವರ ‘ಬೀಗದಿರು ಮಾನವ’ ಮುಂತಾದ ಕವನಗಳು ಮನುಷ್ಯನ ಅಹಮಿಕೆಗೆ ನೀಡಿದ ಪೆಟ್ಟನ್ನು ವಿವರಿಸಿದವು.

ಕಾರ್ಯಕ್ರಮ ನಿರೂಪಕಿ ಅನ್ನಪೂರ್ಣ ಪಟೇಲ್‌ ‘ಅವ್ವ ಮಾತಾಡವ್ವ’ದ ಮೂಲಕ ದುಡಿಮೆಗೆ ಬೇರೆ ಊರಿಗೆ ಹೋಗಿದ್ದ, ಕೊರೊನಾ ಸಂಕಷ್ಟದಿಂದ ಮರಳಿ ಬರುವ ಸಂಕಷ್ಟವನ್ನು ತಿಳಿಸಿತು. ಕರಿಬಸಪ್ಪ ಕುಂದೂರು ಅವರು ‘ಕೊಕಾ’ ಕವನವನ್ನು ಜನಪದ ಶೈಲಿಯಲ್ಲಿ ಹಾಡಿ ಮನಸೆಳೆದರು.

ತೇಜಸ್‌ ವಡ್ನಾಳ್‌ ಅವರ ಎರಡನೇ ಕೃತಿ ‘ಮಣ್ಕಣ್ಣ ಮಾರಿಜಾತ್ರೆ’ ಎಂಬ ಕಾದಂಬರಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಹಗಾರ್‌ ಬಿಡುಗಡೆ ಮಾಡಿದರು.

...
ಎದೆಯ ಹಾಡು, ಮನದಾಳದ ರಂಗೋಲಿ, ತುಟಿಯ ಸಿಹಿಮಾತು ಕೊರೊನಾದ ದುರಿತ ಕಾಲದಲ್ಲಿ ಉಳಿದಿವೆಯೇ? ಮಾಸ್ಕ್‌ನ ಮರೆಯಲ್ಲಿ ಸ್ಯಾನಿಟೈಸರ್‌ನ ಸಾಗರದಲ್ಲಿ ಎಲ್ಲವೂ ಒಳಗಿದೆ, ಹೊರಗಿಲ್ಲ. ಸತ್ತಾಗ ಯಾರೂ ಇಲ್ಲ. ಸರಳ ವಿವಾಹವಾಗಿ, ಮದ್ಯ ಬೇಡ ಎಂಬುದನ್ನೆಲ್ಲ ಕೊರೊನಾ ಹೇಳಿಕೊಟ್ಟಿತು. ಈ ಕಾಲ ಕಾವ್ಯದ ಮಗ್ಗುಲನ್ನು ಹೇಗೆ ಬದಲಾಯಿಸಿದೆ ಎಂಬುದನ್ನು ಈ ಕವಿಗೋಷ್ಠಿ ಮೂಲಕ ಅನಾವರಣಗೊಳ್ಳುತ್ತಿದೆ.
-ಸೈಯದ್‌ ಫೈಜುಲ್ಲಾ ಸಂತೇಬೆನ್ನೂರು

*

ಸಾಮಾಜಿಕ ತಲ್ಲಣಗಳಿಗೆ ಸ್ಪಂದಿಸದೇ ಇರುವವನು ಕವಿಯಾಗಲಾರ. ಕವಿತೆ ಎನ್ನುವುದು ಮೋಹಕತೆಗಿಂತ, ಕಲಾತ್ಮಕತೆಗಿಂತ ಮಾನವೀಯತೆಗೆ ಒತ್ತು ನೀಡುವಂತಿರಬೇಕು. ಅಂಥ ಕವಿತೆಗಳೇ ದೀರ್ಘ ಕಾಲ ಉಳಿಯುವಂಥವುಗಳು. ಕವಿತೆಗಳಲ್ಲಿ ಚಂದ್ರ, ಪ್ರಕೃತಿ, ಸೌಂದರ್ಯಗಳ ಬಗ್ಗೆ ಬರೆಯುವ ಶುದ್ಧ ಕಾವ್ಯ ಮತ್ತು ಸಾಮಾಜಿಕ ಆಗುಹೋಗುಗಳಿಗೆ ಸ್ಪಂದಿಸಿ ಬರೆಯುವ ಅನ್ವಯಿಕ ಕಾವ್ಯ ಎಂಬ ಎರಡು ವಿಭಾಗಗಳಿವೆ. ಇಂದು ವಾಚನಗಳಾದ ಎಲ್ಲ ಕವನಗಳು ಅನ್ವಯಿಕ ಕವನಗಳು.
- ಬಿ.ಎನ್‌. ಮಲ್ಲೇಶ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT