ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೇಬೆನ್ನೂರು: ಬಂಪರ್ ಬೆಲೆಯಿರುವ ಹತ್ತಿಗೆ ಮಳೆಕಾಟ

ಡಿಸಿಎಚ್ ತಳಿಯ ಹತ್ತಿ ಕ್ವಿಂಟಲ್‌ಗೆ ₹ 16,500, ಬನ್ನಿ ತಳಿಗೆ ₹ 10,000 ಬೆಲೆ
Last Updated 10 ಅಕ್ಟೋಬರ್ 2021, 4:49 IST
ಅಕ್ಷರ ಗಾತ್ರ

ಸಂತೇಬೆನ್ನೂರು: ಹೋಬಳಿ ವ್ಯಾಪ್ತಿಯಲ್ಲಿ ಉತ್ಕೃಷ್ಟ ಡಿಸಿಎಚ್ ಹಾಗೂ ಬನ್ನಿ ತಳಿಯ ಹತ್ತಿಯನ್ನು ಬೆಳೆದಿದ್ದು, ಬಂಪರ್‌ ಬೆಲೆ ಇದೆ. ಆದರೆ, ಮಳೆ ಕಾಟದಿಂದಾಗಿ ಬೆಲೆ ಕಡಿಮೆಯಾಗುವ ಆತಂಕದಲ್ಲಿ ರೈತರು ಇದ್ದಾರೆ.

ಚಿತ್ರದುರ್ಗದ ಮಾರುಕಟ್ಟೆಯಲ್ಲಿ ಡಿಸಿಎಚ್ ತಳಿಯ ಹತ್ತಿ ಗುಣಮಟ್ಟದ ಆಧಾರದಲ್ಲಿ ‌ಪ್ರತಿ ಕ್ವಿಂಟಲ್‌ಗೆ ಗರಿಷ್ಠ ₹ 16,500 ಧಾರಣೆ ಇದೆ. ಬನ್ನಿ ತಳಿಯ ಹತ್ತಿಗೆ ಗರಿಷ್ಟ ₹ 10 ಸಾವಿರದವರೆಗೂ ಬೆಲೆ ನಿಗದಿಗೊಂಡಿದೆ. ಕಳೆದ ಬಾರಿ ಇದೇ ಸಮಯದಲ್ಲಿ ಡಿಸಿಎಚ್ ತಳಿಗೆ ₹ 10,000 ಹಾಗೂ ಬನ್ನಿ ತಳಿಗೆ ₹ 5000 ಇತ್ತು.

ಹೋಬಳಿಯ ತಣಿಗೆರೆ, ಭೀಮನೆರೆ, ಹಿರೇಕೋಗಲೂರು ರೈತರು 50 ಎಕರೆ ಪ್ರದೇಶದಲ್ಲಿ ಬನ್ನಿ ಹತ್ತಿ ಬೆಳೆದಿದ್ದಾರೆ. ಕಳೆದ ವಾರ ಮಳೆಯ ಆರ್ಭಟಕ್ಕಿಂತ ಪೂರ್ವದಲ್ಲಿ ಉತ್ತಮ ಇಳುವರಿ ಸಿಕ್ಕಿತ್ತು. ಮಳೆ ಹೊಡೆತಕ್ಕೆ ಸಿಕ್ಕ ನಂತರ ಅನಿಯಂತ್ರಿತ ಕಾಯಿಕೊರಕ ಹುಳು ಬಾಧೆ, ಕಾಯಿ ಕೊರೆಯುವಿಕೆಯಿಂದ ಇಳುವರಿಗೆ ತೀವ್ರ ಹೊಡೆತ ಬಿದ್ದಿದೆ. ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ರೈತರಿಗೆ ನಷ್ಟ ಸಂಭವಿಸಿದೆ.

‘4 ಎಕರೆಯಲ್ಲಿ ಬನ್ನಿ ಹತ್ತಿ (ದೊಡ್ಡಹತ್ತಿ) ಬೆಳೆದಿದ್ದೇನೆ. ಈಗಾಗಲೇ 2 ಕ್ವಿಂಟಲ್ ಹತ್ತಿ ಬಿಡಿಸಿದ್ದೇನೆ. ಎಕರೆಗೆ 8ರಿಂದ 10 ಕ್ವಿಂಟಲ್ ಇಳುವರಿ ನಿರೀಕ್ಷಿಸಿದ್ದೆ. ಮಳೆಯ ನಂತರ ಕಾಯಿ ಕಪ್ಪಾಗಿವೆ. ಹತ್ತಿ ಗುಣಮಟ್ಟ ಕುಂಠಿತಗೊಂಡಿದೆ. ಎಕರೆಗೆ ₹ 10ಸಾವಿರದಿಂದ ₹ 14 ಸಾವಿರ ಖರ್ಚು ತಗುಲಿದೆ. ₹ 10 ಸಾವಿರ ಪ್ರತಿ ಕ್ವಿಂಟಲ್ ಧಾರಣೆ ಇದೆ’ ಎನ್ನುತ್ತಾರೆ ಭೀಮನೆರೆ ರೈತ ಬಿ.ಸಿ. ರುದ್ರೇಶ್.

ಹಿರೇಕೋಗಲೂರು ರೈತ ಲಕ್ಷ್ಮಣಪ್ಪ ಅವರು ಮಾತನಾಡಿ, ‘ಎರಡು ಎಕರೆಯಲ್ಲಿ ದೊಡ್ಡ ಹತ್ತಿ ಬೆಳೆದಿದ್ದೆ. 2 ಕ್ವಿಂಟಲ್ ಹತ್ತಿ ಬಿಡಿಸಲಾಗಿತ್ತು. ಮಳೆಯ ನಂತರ ಕಾಯಿಕೊರಕ ಹುಳು ಬಾಧೆ ನಿಯಂತ್ರಣಕ್ಕೆ ಬರುತ್ತಿಲ್ಲ. ಗುಣಮಟ್ಟ ಕುಸಿದ ಕಾರಣ ಕೇವಲ ₹ 5000 ಪ್ರತಿ ಕ್ವಿಂಟಲ್‌ಗೆ ಮಾರಾಟ ಮಾಡಿದೆ’ ಎಂದು ಅಲವತ್ತು ಕೊಂಡರು.

ಹಿರೇಗಂಗೂರು, ಚಿಕ್ಕಗಂಗೂರು, ಕೊರಟಿಕೆರೆ ಭಾಗದಲ್ಲಿ ಹತ್ತಿಯ ಎರಡೂ ತಳಿಯನ್ನು ಬೆಳೆದಿದ್ದಾರೆ. ಹತ್ತಿ ಬಿಡಿಸುವ ಕಾರ್ಯ ನಡೆದಿದೆ. ಡಿಸಿಎಚ್ ಹತ್ತಿಗೆ ಉತ್ತಮ ಧಾರಣೆ ಇರುವ ಕಾರಣ ಸ್ಥಳೀಯವಾಗಿಯೇ ಖರೀದಿಸುತ್ತಿದ್ದಾರೆ. ಇಂದಿನ ಧಾರಣೆ ₹ 13600 ಇತ್ತು. ದೊಡ್ಡ ಹತ್ತಿಬೆಲೆ ₹ 10000 ಆಸುಪಾಸಿನಲ್ಲಿ ಖರೀದಿ ನಡೆದಿದೆ ಎನ್ನುತ್ತಾರೆ ಹಿರೇಗಂಗೂರಿನ ರೈತ ಕಾಂತರಾಜ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT