ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವರಾಜ ತಂಗಡಗಿ ಹೇಳಿಕೆ ಸಮರ್ಥಿಸಿಕೊಂಡ ಡಿ.ಬಸವರಾಜ್

Published 28 ಮಾರ್ಚ್ 2024, 5:08 IST
Last Updated 28 ಮಾರ್ಚ್ 2024, 5:08 IST
ಅಕ್ಷರ ಗಾತ್ರ

ದಾವಣಗೆರೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನೀಡಿರುವ ಹೇಳಿಕೆ ಸರಿಯಾಗಿದೆ ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಸಮರ್ಥಿಸಿಕೊಂಡಿದ್ದಾರೆ.

‘ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದ ನರೇಂದ್ರ ಮೋದಿಯವರುಯ ಉದ್ಯೋಗ ಕೇಳಿದರೆ ಪಕೋಡ ಮಾರಲು ಹೋಗಿ ಎಂದಿದ್ದಾರೆ. ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡಲಾಗಿದೆಯಾ? ನೀಡಿದ್ದೇ ಆದರೆ 10 ವರ್ಷಗಳಲ್ಲಿ 20 ಕೋಟಿ ಉದ್ಯೋಗ ನೀಡಬೇಕಿತ್ತು. ವಿದ್ಯಾರ್ಥಿಗಳು, ಯುವಕರು ಜವಾಬ್ದಾರಿ ಇಲ್ಲದೇ ಮೋದಿಯವರ ಜಪ ಮಾಡುತ್ತಿದ್ದಾರೆ. ಅಂತಹವರ ಕಪಾಳಕ್ಕೆ ಹೊಡೆಯಬೇಕು ಎಂದಿದ್ದಾರೆ ಇದರಲ್ಲಿ ತಪ್ಪೇನಿದೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

‘2023ರ ಡಿಸೆಂಬರ್ ವೇಳೆಗೆ 100 ನಗರಗಳನ್ನು ‘ಸ್ಮಾರ್ಟ್‌ ಸಿಟಿ’ಗಳನ್ನು ನಿರ್ಮಾಣ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ 2015ರಲ್ಲೇ ಹೇಳಿತ್ತು. ಯೋಜನೆ ಘೋಷಣೆಯಾಗಿ 9 ವರ್ಷಗಳಾಗಿದ್ದರೂ ₹ 22.218 ಕೋಟಿ ಮೊತ್ತದ ಸ್ಮಾರ್ಟ್‌ ಸಿಟಿ ಯೋಜನೆ ತೆವಳಲು ಆರಂಭಿಸಿದಂತೆಯೂ ಕಾಣುತ್ತಿಲ್ಲ. ಮೋದಿ ಅವರ ಸರ್ಕಾರದಲ್ಲಿ ರಸ್ತೆಗಳು ಸ್ಮಾರ್ಟ್ ಆಗಿಲ್ಲ. ಬದಲಾಗಿ ನರೇಂದ್ರ ಮೋದಿಯವರೇ ಸ್ಮಾರ್ಟ್ ಆಗಿದ್ದಾರೆ’ ಎಂದು ಟೀಕಿಸಿದರು.

‘ಬಿಜೆಪಿ ಮುಖಂಡ ಸಿ.ಟಿ.ರವಿ ಅವರು ತಂಗಡಗಿ ಅವರ ಬಗ್ಗೆ ಕೀಳು ಭಾಷೆಯಲ್ಲಿ ಮಾತನಾಡಿದ್ದಾರೆ. ನೀವು ಭ್ರಷ್ಟಾಚಾರ ಮಾಡಿಲ್ಲ ಎನ್ನುವುದಾದರೆ ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಪ್ರಮಾಣ ಮಾಡಿ, ನಿಮ್ಮ ಮೊದಲ ಚುನಾವಣೆಯಲ್ಲಿ ಘೋಷಿಸಿದ ಆಸ್ತಿ ಎಷ್ಟಿತ್ತು. ಈಗ ಎಷ್ಟಾಗಿದೆ ಎಂದು ಘೋಷಿಸಿ. ನೀವು ಭ್ರಷ್ಟಾಚಾರ ಮಾಡಿಲ್ಲ ಎಂಬುದು ಸಾಬೀತಾದರೆ ನಾವು ರಾಜಕಾರಣದಿಂದ ನಿವೃತ್ತಿಯಾಗುತ್ತೇನೆ’ ಎಂದು ಸವಾಲು ಹಾಕಿದರು.

‘ಶಿವರಾಜ ತಂಗಡಗಿ ಅವರು ಭೋವಿ ಸಮುದಾಯದ ನಾಯಕ. ಮೂರು ಬಾರಿ ಸಚಿವರಾಗಿದ್ದಾರೆ. ಉದ್ದೇಶಪೂರ್ವಕವಾಗಿ ಪರಿಶಿಷ್ಟ ಜಾತಿಯವರ ಮೇಲೆ ವಾಗ್ದಾಳಿ ನಡೆಸುವುದು ಬಿಜೆಪಿಯ ತಂತ್ರ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಟೀಕಿಸುವುದು ಬಿಜೆಪಿಯವರ ಸಂಸ್ಕೃತಿ’ ಎಂದು ಟೀಕಿಸಿದರು.

ಮುಖಂಡರಾದ ಕೆ.ಎನ್. ಮಂಜುನಾಥ್, ಹುಲಿಕಟ್ಟೆ ಚಂದ್ರಪ್ಪ, ಎಂ.ಕೆ.ಲಿಯಾಖತ್, ಎನ್.ಎಸ್.ವೀರಭದ್ರಪ್ಪ, ಬಿ.ಎಚ್. ಉದಯ್‌ಕುಮಾರ್, ಬಿ.ಶಿವಕುಮಾರ್, ಮುಬಾರಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT