ಗುರುವಾರ , ಆಗಸ್ಟ್ 5, 2021
24 °C
ಜಿಲ್ಲೆಯಲ್ಲಿ ಸರಿಯಾಗಿ ಅಪ್‌ಡೇಟ್‌ 170 ಆಸ್ಪತ್ರೆ, ನರ್ಸಿಂಗ್‌ ಹೋಂಗಳು

ಐಎಲ್‌ಐ, ಸಾರಿ ಪ್ರಕರಣ ಅಪ್‌ಡೇಟ್ ಮಾಡದ 11 ಆಸ್ಪತ್ರೆ ಸೀಜ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಆಸ್ಪತ್ರೆ, ನರ್ಸಿಂಗ್‌ ಹೋಂಗಳಿಗೆ ಬರುವವರಲ್ಲಿ ಶೀತ, ಜ್ವರ (ಐಎಲ್‌ಐ) ಮತ್ತು ತೀವ್ರ ಉಸಿರಾಟದ ತೊಂದರೆ(ಎಸ್‌ಎಆರ್‌ಐ) ಪ್ರಕರಣಗಳನ್ನು ಪ್ರತಿದಿನ ಆರೋಗ್ಯ ಇಲಾಖೆಯ ವೆಬ್‌ಪೋರ್ಟಲ್‌ಗೆ ಅಪ್‌ಡೇಟ್ ಮಾಡಬೇಕು ಎಂದು ಸರ್ಕಾರದ ಆದೇಶ ಇದೆ. ಈ ಆದೇಶವನ್ನು ಉಲ್ಲಂಘಿಸಿದ ನಗರದ 11 ಖಾಸಗಿ ಆಸ್ಪತ್ರೆ, ನರ್ಸಿಂಗ್‌ ಹೋಂಗಳನ್ನು ಗುರುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಘವೇಂದ್ರ ಸ್ವಾಮಿ ಮತ್ತು ತಂಡದವರು ತಾತ್ಕಾಲಿಕವಾಗಿ ಸೀಜ್‌ ಮಾಡಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 742 ಆಸ್ಪತ್ರೆ/ನರ್ಸಿಂಗ್‌ ಹೋಂಗಳಿವೆ. ಅದರಲ್ಲಿ 170 ಆಸ್ಪತ್ರೆ, ನರ್ಸಿಂಗ್‌ ಹೋಂಗಳು ರಾಜ್ಯದ ವೆಬ್‌ ಪೋರ್ಟಲ್‌ನಲ್ಲಿ ಅಪ್‌ಲೋಡು ಮಾಡುತ್ತಿರಲಿಲ್ಲ. ಇದರ ಜತೆಗೆ ಕೆಪಿಎಂಇ ಅಡಿ ನವೀಕರಿಸದ ಆಸ್ಪತ್ರೆಗಳನ್ನು ಸೇರಿಸಿದರೆ 280 ಆಗುತ್ತದೆ ಎಂದು ರಾಜ್ಯದಿಂದ ಜಿಲ್ಲಾಡಳಿಕ್ಕೆ ಮಾಹಿತಿ ಬಂದಿತ್ತು. ಅದರಂತೆ ಮೊದಲ ದಿನ 11 ಆಸ್ಪತ್ರೆಗಳನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸೀಜ್‌ ಮಾಡಲಾಯಿತು ಎಂದು ಡಿಎಚ್‌ಒ ರಾಘವೇಂದ್ರ ಸ್ವಾಮಿ ತಿಳಿಸಿದ್ದಾರೆ.

ಸರ್ಕಾರದ ಆದೇಶದ ಮೇರೆಗೆ ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ 2 ತಿಂಗಳಿಂದ ಆರೋಗ್ಯ ನಿರ್ದೇಶನಾಲಯದ ಆಯುಕ್ತರು, ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದರು. ಕೆಪಿಎಂಇ ಕಾಯ್ದೆ ಅಡಿ ನೋಂದಣಿಯಾದ ಪ್ರತಿ ಖಾಸಗಿ ಆಸ್ಪತ್ರೆಗಳಿಗೆ ಯೂಸರ್ ಐಡಿ, ಪಾಸ್‌ವರ್ಡ್ ನೀಡಿ ಆನ್‌ಲೈನ್ ಮೂಲಕ ತಮ್ಮ ಆಸ್ಪತ್ರೆಗಳಿಗೆ ಬರುವ ಐಎಲ್‌ಐ ಮತ್ತು ಎಸ್‌ಎಆರ್‌ಐ ಪ್ರಕರಣಗಳನ್ನು ಅಪ್‌ಡೇಟ್ ಮಾಡಬೇಕೆಂದು ತಿಳಿಸಲಾಗಿತ್ತು. ಈ ವರದಿಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರದವರೆಗೆ ತಲುಪಿಸಿ ಅವರ ವ್ಯಾಪ್ತಿಯಲ್ಲಿ ಬರುವವರಿಗೆ ಗಂಟಲು ದ್ರವ ಪರೀಕ್ಷೆಗೆ ಸಹಕಾರಿಯಾಗುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

‘ಎಲ್ಲ ದಾಖಲೆ ಸರಿ ಇದ್ದರೂ ಸೀಜ್‌’

ಅಪ್‌ಲೋಡ್‌ ಮಾಡಿರುವ ದಾಖಲೆಗಳು ಸರಿ ಇದ್ದರೂ ಸೀಜ್‌ ಮಾಡಿದ್ದಾರೆ. ನನ್ನ ದಾಖಲೆಗಳು ಸರಿ ಇವೆ. ಸರಿ ಇಲ್ಲದವರಿಗೂ ಎಚ್ಚರಿಕೆ ಕೊಡಬೇಕಿತ್ತು. ಅದು ಬಿಟ್ಟು ಕೊರೊನಾ ಇರುವ ಇಂಥ ಸಂದಿಗ್ಧ ಸಮಯದಲ್ಲಿ ಆಸ್ಪತ್ರೆಗಳನ್ನು ಮುಚ್ಚುವ ಕ್ರಮ ಸರಿಯಲ್ಲ’ ಎಂದು ವೈದ್ಯರೊಬ್ಬರು ನೋವು ತೋಡಿಕೊಂಡಿದ್ದಾರೆ.

‘ನೋಟಿಸ್‌ ನೀಡಲಾಗಿದೆ ಎಂದು ಹೇಳಿದ್ದಾರೆ. ಆದರೆ ನನಗೆ ಯಾವುದೇ ನೋಟಿಸ್ ಬಂದಿಲ್ಲ. 100ಕ್ಕೂ ಅಧಿಕ ಆಸ್ಪತ್ರೆಗಳನ್ನು ಬಂದ್‌ ಮಾಡಲು ಹೊರಡುವುದು ಸರಿಯಾದ ಕ್ರಮವಲ್ಲ. ಒಳ್ಳೆಯ ಬೆಳವಣಿಗೆಯೂ ಅಲ್ಲ’ ಎಂದು ‘ಪ್ರಜಾವಾಣಿಗೆ ತಿಳಿಸಿದ್ದಾರೆ.

‘ಕೊರೊನಾ ಹೋರಾಟಕ್ಕೆ ಕೈ ಜೋಡಿಸುವಂತೆ ಮಾಡಲು ಈ ಕ್ರಮ’

ಎರಡು ತಿಂಗಳ ಹಿಂದೆಯೇ ಈ ಬಗ್ಗೆ ತಿಳಿಸಲಾಗಿತ್ತು. ಜಿಲ್ಲಾಧಿಕಾರಿಗಳು ಹಲವು ಬಾರಿ ವೈದ್ಯರು, ಐಎಂಎ ಪದಾಧಿಕಾರಿಗಳ ಜತೆ ಸಭೆಯನ್ನೂ ಮಾಡಿದ್ದರು. ಆದರೂ ಕೆಲವರು ಮಾಡಿರಲಿಲ್ಲ. ನೋಟಿಸ್‌ ನೀಡಿದರೂ ಪ್ರತಿಕ್ರಿಯಿಸಿರಲಿಲ್ಲ. ಈ ನಿರ್ಲಕ್ಷ್ಯವನ್ನು ತಡೆಯಲು ಜಿಲ್ಲಾಧಿಕಾರಿ ನೀಡಿದ ಆದೇಶದಂತೆ ದಾಳಿ ಮಾಡಲಾಗಿದೆ ಎಂದು ಡಿಎಚ್‌ಒ ಡಾ. ರಾಘವೇಂದ್ರಸ್ವಾಮಿ ತಿಳಿಸಿದ್ದಾರೆ.

‘ವೆಬ್‌ಪೋರ್ಟಲ್‌ನಲ್ಲಿ ದಾಖಲು ಮಾಡಿದ್ದರೆ ಅದರ ದಾಖಲೆ ಕೊಡಲಿ. ಇಲ್ಲದೇ ಇದ್ದರೆ ಇನ್ನು ಮುಂದೆ ವೆಬ್‌ಪೋರ್ಟಲ್‌ ಅಪ್‌ಲೋಡು ಮಾಡುತ್ತೇವೆ ಎಂದು ಪತ್ರ ನೀಡಬೇಕು. ಬಳಿಕ ಸರಿಯಾಗಿ ಅಪ್‌ಲೋಡ್‌ ಮಾಡಬೇಕು. ಕೊರೊನಾ ಹೋರಾಟದಲ್ಲಿ ಅವರೂ ಈ ಮೂಲಕ ಕೈಜೋಡಿಸಬೇಕು’ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು