ದಾವಣಗೆರೆ: ತಿಂಗಳ ಹಿಂದಷ್ಟೇ ಸೇವಂತಿಗೆ ಹೂವಿನ ದರ ತೀವ್ರ ಕುಸಿತ ಕಂಡಿತ್ತು. ಖರ್ಚು ಮಾಡಿದ ಹಣವೂ ಬಾರದ ಸ್ಥಿತಿಯಿಂದ ಕಂಗೆಟ್ಟಿದ್ದ ರೈತರು ಹೂವಿನ ಬೆಳೆಯನ್ನೇ ನಾಶ ಮಾಡಿದ್ದರು. ಕೆಲವರು ಹೂವನ್ನು ರಸ್ತೆಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಬೇರೆ ಬೆಳೆ ಬೆಳೆಯಲೂ ಮುಂದಾಗಿದ್ದರು. ಇನ್ನೂ ಕೆಲವು ರೈತರು ಮುಂದೆ ಬರಲಿರುವ ಹಬ್ಬಗಳ ವೇಳೆ ಹೂವಿನ ದರ ಏರಿಕೆ ಆಗಲಿದೆ ಎಂಬ ಭರವಸೆಯೊಂದಿಗೆ ದಿನ ದೂಡಿದ್ದರು. ಅವರ ತಾಳ್ಮೆಗೆ ಈಗ ಫಲ ಸಿಗುತ್ತಿದೆ. ಸೇವಂತಿಗೆ ಹೂವಿಗೆ ಉತ್ತಮ ದರ ಲಭ್ಯವಾಗಿದ್ದು, ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.
ಕೆಲವೇ ವಾರಗಳ ಹಿಂದೆ 1 ಮಾರು ಸೇವಂತಿಗೆ ಹೂವಿನ ದರ ₹10 ರಿಂದ ₹20 ಇತ್ತು. ಆದರೀಗ ಮಾರುಕಟ್ಟೆಯಲ್ಲಿ ಮಾರು ಹೂವು ₹60ರಿಂದ ₹80ಕ್ಕೆ ಮಾರಾಟವಾಗುತ್ತಿದೆ. ತಳ್ಳು ಗಾಡಿಯವರು ಮಾರೊಂದಕ್ಕೆ ₹100 ರಿಂದ ₹120ಕ್ಕೆ ಮಾರಾಟ ಮಾಡುತ್ತಿದ್ದಾರೆ.
ಸೇವಂತಿಗೆ ಹೂವು ಬೆಳೆಗಾರರು ಮಾತ್ರವಲ್ಲದೇ ವ್ಯಾಪಾರಿಗಳಿಗೂ ಲಾಭ ತಂದು ಕೊಡುತ್ತಿದೆ. ಎಲ್ಲೆಡೆಯೂ ದಸರಾ ಹಬ್ಬದ ಸಂಭ್ರಮ ಕಳೆಗಟ್ಟಿದೆ. ದೇವಸ್ಥಾನಗಳು ಹಾಗೂ ಮನೆಗಳಲ್ಲಿ ವಿಶೇಷ ಪೂಜೆಗಳು ಹಾಗೂ ದೇವಿಯರಿಗೆ ವಿಶೇಷ ಅಲಂಕಾರ ಮಾಡಲಾಗುತ್ತಿದ್ದು, ಪೂಜೆಗಾಗಿ ಹೂವುಗಳ ಖರೀದಿಯೂ ಜೋರಾಗಿದೆ.
ಬೆಳಿಗ್ಗೆ ಎಪಿಎಂಸಿಯ ಹೂವಿನ ಮಾರುಕಟ್ಟೆಯಲ್ಲಿ ಹೂವಿನ ಸಗಟು ವ್ಯಾಪಾರ ನಡೆಯುತ್ತದೆ. ಅಲ್ಲಿ ಹೂವುಗಳನ್ನು ಖರೀದಿಸುವ ವ್ಯಾಪಾರಿಗಳು ನಗರದ ಹಳೇ ಬಸ್ ನಿಲ್ದಾಣ, ಗಾಂಧಿ ವೃತ್ತ, ಹೊಸ ಬಸ್ ನಿಲ್ದಾಣ, ಕೆ.ಆರ್.ಮಾರುಕಟ್ಟೆ ಸೇರಿದಂತೆ ನಗರದ ಹಲವೆಡೆ ಮಾರಾಟ ಮಾಡುತ್ತಾರೆ.
ಜಿಲ್ಲೆಯಲ್ಲಿ ಸೇವಂತಿಗೆ ಬೆಳೆ ಹೆಚ್ಚಾಗಿ ಬೆಳೆಯದಿದ್ದರೂ, ದಾವಣಗೆರೆ ನಗರವು ಹೂವುಗಳ ಮಾರಾಟ ಕೇಂದ್ರವಾಗಿದೆ. ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಿಂದ ನಗರಕ್ಕೆ ಭಾರಿ ಪ್ರಮಾಣದಲ್ಲಿ ಸೇವಂತಿಗೆ ಹೂವನ್ನು ತರಿಸಿಕೊಳ್ಳಲಾಗುತ್ತಿದೆ. ಜಿಲ್ಲೆಗೆ ಅಗತ್ಯವಿರುವ ಹೂವನ್ನು ಉಳಿಸಿಕೊಂಡು ಹುಬ್ಬಳ್ಳಿ, ಧಾರವಾಡ, ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಿಗೆ ಇಲ್ಲಿಂದ ಹೂವುಗಳನ್ನು ಕಳಿಸಲಾಗುತ್ತಿದೆ.
‘ಈ ಹಿಂದೆ ಸೇವಂತಿಗೆ ಹೂವಿಗೆ ಬೆಲೆಯೇ ಇರಲಿಲ್ಲವಾದ್ದರಿಂದ ನಮಗೂ ಹೆಚ್ಚಿನ ಲಾಭ ಸಿಗುತ್ತಿರಲಿಲ್ಲ. ಈಗ ಹಬ್ಬದ ಪರಿಣಾಮ ದರ ಏರಿಕೆ ಆಗಿದ್ದು, ವ್ಯಾಪಾರವೂ ಜೋರಾಗಿ ನಡೆಯುತ್ತಿರುವುದರಿಂದ ಉತ್ತಮ ಲಾಭ ಸಿಗುತ್ತಿದೆ’ ಎನ್ನುತ್ತಾರೆ ಪ್ರವಾಸಿ ಮಂದಿರ ರಸ್ತೆಯಲ್ಲಿ ಹೂವಿನ ವ್ಯಾಪಾರದಲ್ಲಿ ತೊಡಗಿದ್ದ ರಾಜು ಬಳ್ಳಾರಿ.
‘ಪಚ್ಚಿ ಸೇವಂತಿಗೆ, ಬಿಳಿ ಸೇವಂತಿಗೆ, ಬಟನ್ಸ್, ಮಾರಿಗೋಲ್ಡ್ ಸೇವಂತಿಗೆ ಹೂವುಗಳ ದರ ಮಾರಿಗೆ ₹50ರಿಂದ ₹80ರ ವರೆಗೆ ಇದೆ. ಬಿಳಿ ಸೇವಂತಿಗೆ ಹಾಗೂ ಪಚ್ಚಿ ಸೇವಂತಿಗೆಯನ್ನು ನಗರದಲ್ಲಿ ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಸೇವಂತಿಗೆ ಹೂವಿಗೆ ಉತ್ತಮ ದರ ಇದೆ. ಆದರೆ, ಚೆಂಡುಹೂವು ಕೂಡ ಹೆಚ್ಚಾಗಿ ಮಾರುಕಟ್ಟೆಗೆ ಬರುತ್ತಿರುವುದರಿಂದ ಚೆಂಡು ಹೂವಿನ ಖರೀದಿಯೇ ಹೆಚ್ಚಾಗಿದೆ’ ಎನ್ನುತ್ತಾರೆ ಹೂವಿನ ವ್ಯಾಪಾರಿ ಮಲ್ಲಿಕಾರ್ಜುನ್.
‘ಸೇವಂತಿಗೆಯ ಬಿಡಿ ಹೂವುಗಳನ್ನು ಈ ಹಿಂದೆ ಕೆ.ಜಿ.ಗೆ ₹170ರಿಂದ ₹180ರ ವರೆಗೆ ಮಾರುತ್ತಿದ್ದೆವು. ಇದೀಗ ₹250 ರಂತೆ ಕೆ.ಜಿ. ಹೂವುಗಳನ್ನು ಮಾರುತ್ತಿದ್ದೇವೆ. 10 ಕೆ.ಜಿ. ಹೂವಿಗೆ ₹2,500 ರಿಂದ ₹3,000 ವರೆಗೆ ದರ ಇದೆ. ಸೇವಂತಿಗೆ ಬೆಳೆ ಸದ್ಯ ಉತ್ತಮ ಆದಾಯ ತಂದುಕೊಡುತ್ತಿದೆ’ ಎಂದು ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರು ತಾಲ್ಲೂಕಿನ ಬಿ.ಜಿ.ಕೆರೆಯ ಹೂವಿನ ಬೆಳೆಗಾರರಾದ ಗಾದ್ರಿಪಾಲಯ್ಯ ತಿಳಿಸಿದರು.
‘ಹಬ್ಬದ ಕಾರಣಕ್ಕೆ ದರ ಏರಿಕೆಯಾಗಿದ್ದರೂ, ನಮಗೆ ಹೆಚ್ಚಿನ ಲಾಭ ಸಿಗುವುದಿಲ್ಲ. ನಿತ್ಯವೂ ಹೂವು ಮಾರಾಟ– ಖರೀದಿ ಬಗ್ಗೆ ಮೊದಲೇ ಮಾತುಕತೆಯಾಗಿರುವುದರಿಂದ ನಿಗದಿತ ದರದಲ್ಲೇ ಹೂವು ಮಾರುತ್ತೇವೆ. ಹಬ್ಬದ ದಿನಗಳಲ್ಲಿ ಮಾತ್ರ ಹೂವು ಖರೀದಿದಾರರು ಸ್ವಲ್ಪ ಜಾಸ್ತಿ ಮೊತ್ತ ನೀಡುತ್ತಾರೆ. ಉಳಿದ ದಿನಗಳಲ್ಲಿ ಒಂದೇ ರೀತಿಯ ದರ ಇರುತ್ತದೆ’ ಎಂದು ಬೇಸರವನ್ನೂ ಹೊರಹಾಕಿದರು.
ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೇವಂತಿಗೆ ಹೂವುಗಳನ್ನು ಬೆಳೆಯುತ್ತಿಲ್ಲ. ಅಲ್ಲಲ್ಲಿ ಅಲ್ಪ ಪ್ರಮಾಣದಲ್ಲಿ ಸೇವಂತಿಗೆ ಬೆಳೆ ಬೆಳೆಯಲಾಗುತ್ತಿದೆ. ಸದ್ಯ 30ರಿಂದ 40 ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಸೇವಂತಿಗೆ ಬೆಳೆ ಬೆಳೆಯಲಾಗಿದೆ
–ರಾಘವೇಂದ್ರ ಪ್ರಸಾದ್ ಉಪನಿರ್ದೇಶಕ ತೋಟಗಾರಿಕೆ ಇಲಾಖೆ
ಸೇವಂತಿಗೆ ಬೆಳೆ ಬೆಳೆಯುವ ಬಿ.ಜಿ.ಕೆರೆಯ ರೈತರು ಬಿಡಿ ಹೂವುಗಳನ್ನು ಕಡಿಮೆ ದರದಲ್ಲೇ ಮಾರಾಟ ಮಾಡುತ್ತಾರೆ. ಇಲ್ಲಿಂದ ತೆಗೆದುಕೊಂಡು ಹೋದ ಹೂವುಗಳನ್ನು ಚಳ್ಳಕೆರೆ ರಾಂಪುರ ಚಿತ್ರದುರ್ಗ ದಾವಣಗೆರೆ ನಗರಗಳಲ್ಲಿ ಹೆಚ್ಚಿನ ದರಕ್ಕೆ ಮಾರಲಾಗುತ್ತಿದೆ
–ಗಾದ್ರಿಪಾಲಯ್ಯ ಹೂವು ಬೆಳೆಗಾರರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.