ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರ್ವಾಸನೆ ಬೀರುತ್ತಿರುವ ಹಳ್ಳ

ಹರಿದ್ರಾವತಿ ಹಳ್ಳಕ್ಕೆ ಚನ್ನಗಿರಿ ಪಟ್ಟಣದ ಚರಂಡಿ ನೀರು ಸೇರ್ಪಡೆ
Last Updated 24 ಏಪ್ರಿಲ್ 2022, 5:09 IST
ಅಕ್ಷರ ಗಾತ್ರ

ಚನ್ನಗಿರಿ: ಏಷ್ಯಾ ಖಂಡದಲ್ಲಿಯೇ ಎರಡನೇ ಅತಿ ದೊಡ್ಡ ಕೆರೆಯಾಗಿರುವ ಸೂಳೆಕೆರೆಯ ಪ್ರಮುಖ ನೀರಿನ ಸೆಲೆಯಾಗಿರುವ ಹರಿದ್ರಾವತಿ ಹಳ್ಳಕ್ಕೆ ಪಟ್ಟಣದ ಚರಂಡಿಗಳ ಮಲಿನಗೊಂಡ ನೀರನ್ನು ಬಿಡುತ್ತಿದ್ದು, ಇದರಿಂದ ಹಳ್ಳದ ನೀರು ದುರ್ವಾಸನೆ ಬೀರುತ್ತಿದೆ.

ಈ ಹಿಂದೆ ಪಟ್ಟಣದ ಚರಂಡಿಗಳ ನೀರನ್ನು ಬಸ್ ನಿಲ್ದಾಣದ ಬಳಿ ಇರುವ ಕೆರೆಗೆ ಬಿಡುವ ವ್ಯವಸ್ಥೆಯನ್ನು ಪುರಸಭೆಯವರು ಮಾಡಿದ್ದರು. ಪಟ್ಟಣದ ಹೃದಯ ಭಾಗದಲ್ಲಿರುವ ಕೆರೆಯನ್ನು ಸುಂದರಗೊಳಿಸಲು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ₹ 3.50 ಕೋಟಿ ಅನುದಾನವನ್ನು ಸಣ್ಣ ನೀರಾವರಿ ಇಲಾಖೆಗೆ ಬಿಡುಗಡೆ ಮಾಡಿಸಿದ್ದರು. ಇದೀಗ ಪಟ್ಟಣದಲ್ಲಿನ ಚರಂಡಿಗಳ ನೀರನ್ನು ಪೈಪ್‌ಲೈನ್‌ ಮುಖಾಂತರ ಹರಿದ್ರಾವತಿ ಹಳ್ಳಕ್ಕೆ ಸೇರಿಸಲಾಗುತ್ತಿದೆ. ಮಳೆಗಾಲದಲ್ಲಿ ಹರಿದ್ರಾವತಿ ಹಳ್ಳದ ನೀರು ಹರಿದು ಸೂಳೆಕೆರೆಯ ಒಡಲು ಸೇರಿಕೊಳ್ಳಲಿದ್ದು, ಅದರ ನೀರೂ ಮಲಿನವಾಗಲಿದೆ.

‘ಹರಿದ್ರಾವತಿ ಹಳ್ಳಕ್ಕೆ ಚರಂಡಿ ನೀರು ಹರಿಸುತ್ತಿರುವ ಪರಿಣಾಮ ಬೇಸಿಗೆಯಲ್ಲಿ ಹಳ್ಳದ ನೀರು ಮುಂದಕ್ಕೆ ಹರಿಯದಿರುವುದರಿಂದ ಹಳ್ಳದಲ್ಲಿಯೇ ನಿಂತು ದುರ್ವಾಸನೆ ಬೀರುತ್ತಿದೆ. ಹಳ್ಳದ ಸೇತುವೆ ಮೂಲಕ ಹೋಗುವವರು ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದ್ದರಿಂದ ಹರಿದ್ರಾವತಿ ಹಳ್ಳಕ್ಕೆ ಪಟ್ಟಣದ ಚರಂಡಿ ನೀರು ಬಂದು ಸೇರದಂತೆ ಪುರಸಭೆಯವರು ಕ್ರಮ ಕೈಗೊಳ್ಳಬೇಕು’ ಎಂದು ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಾದ ರಾಕೇಶ್, ಸಂತೋಷ್
ಆಗ್ರಹಿಸಿದ್ದಾರೆ.

‘ವರ್ಷದ ಹಿಂದೆ ಪಟ್ಟಣದ ಚರಂಡಿಗಳ ನೀರನ್ನು ಕೆರೆಗೆ ಹರಿಸಲಾಗುತ್ತಿತ್ತು. ಕೆರೆಯನ್ನು ಸುಂದರಗೊಳಿಸಲು ಮುಂದಾಗಿದ್ದರಿಂದ ಚರಂಡಿಗಳ ಕೊಳಚೆ ನೀರು ಹರಿದ್ರಾವತಿ ಹಳ್ಳಕ್ಕೆ ಬಂದು ಸೇರುವ ವ್ಯವಸ್ಥೆ ಮಾಡಲಾಗಿದೆ. ಪಟ್ಟಣದಲ್ಲಿ ಒಳ ಚರಂಡಿ ವ್ಯವಸ್ಥೆ ಕಲ್ಪಿಸಲು ₹ 89 ಕೋಟಿ ಅನುದಾನ ಬಿಡುಗಡೆಯಾಗಿದೆ. ಶೀಘ್ರದಲ್ಲಿ ಕಾಮಗಾರಿ ಪ್ರಾರಂಭವಾಗಲಿದ್ದು, ಆ ಸಮಯದಲ್ಲಿ ಸಣ್ಣ ಕೆರೆ ಮಾಡಿ ಪಟ್ಟಣದಲ್ಲಿನ ಚರಂಡಿಗಳ ನೀರನ್ನು ಸಂಗ್ರಹಿಸಲಾಗುತ್ತದೆ. ನಂತರ ಹಳ್ಳಕ್ಕೆ ಕೊಳಚೆ ನೀರು ಸೇರದಂತೆ ಮಾಡಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ಐ. ಬಸವರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT