ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶನ ಮೂರ್ತಿ ತಯಾರಿಕೆ: ಗ್ರಾಮೀಣ ಕಲಾವಿದರಿಗೆ ದೊರೆಯದ ಪ್ರೋತ್ಸಾಹ

Published 16 ಸೆಪ್ಟೆಂಬರ್ 2023, 5:46 IST
Last Updated 16 ಸೆಪ್ಟೆಂಬರ್ 2023, 5:46 IST
ಅಕ್ಷರ ಗಾತ್ರ

ಬಸವಾಪಟ್ಟಣ: ಗಣೇಶ ಹಬ್ಬಕ್ಕಾಗಿ ಗ್ರಾಮೀಣ ಭಾಗದಲ್ಲಿ ಮಣ್ಣಿನ ಮೂರ್ತಿಗಳನ್ನು ಕುಂಬಾರ ಮತ್ತು ಬಡಗಿ ಜನಾಂಗದವರು ತಲೆತಲಾಂತರದಿಂದ ತಯಾರಿಸುತ್ತಾ ಬಂದಿದ್ದು, ‘ದುಬಾರಿಯಾಗಿರುವ ಈ ಕಾಲಕ್ಕೆ ಕಲೆಗೆ ತಕ್ಕ ಮೌಲ್ಯವನ್ನು ಗ್ರಾಹಕರು ನೀಡುತ್ತಿಲ್ಲ’ ಎಂಬ ಕೊರಗು ಅವರನ್ನು ಕಾಡುತ್ತಿದೆ.

‘ಪೂರ್ವಿಕರ ಕಾಲದಿಂದ ಹಬ್ಬಕ್ಕಾಗಿ ಗಣೇಶನ ಮೂರ್ತಿಯನ್ನು ತಯಾರಿಸುತ್ತಿದ್ದೇವೆ. ಸಾಮಾನ್ಯವಾಗಿ ಮನೆಗಳಲ್ಲಿ ಪೂಜಿಸುವ ಗಣಪತಿಗಳು ಒಂದರಿಂದ ಒಂದೂವರೆ ಅಡಿ ಎತ್ತರ ಇರುತ್ತವೆ. ನಗರ ಪ್ರದೇಶಗಳಲ್ಲಿ ಇವುಗಳಿಗೆ ₹ 500ರಿಂದ ₹ 600 ಬೆಲೆ ಇದೆ. ಆದರೆ ಗ್ರಾಮೀಣ ಪ್ರದೇಶದ ಜನ ಇಷ್ಟುಹಣ ಕೊಡುವುದಿಲ್ಲ’ ಎಂದು ಬಸವಾಪಟ್ಟಣದ ಕಲಾವಿದ ಕೆ.ಆರ್‌.ಹಾಲೇಶ್‌ ಬೇಸರ ವ್ಯಕ್ತಪಡಿಸಿದರು.

‘ಒಂದು ಚಿಕ್ಕ ತೆಂಗಿನ ಕಾಯಿ, ಒಂದು ಪಾವು ದಪ್ಪ ಅಕ್ಕಿ, ಎರಡು ವೀಳ್ಯದೆಲೆಯೊಂದಿಗೆ ಚೂರು ಅಡಿಕೆ ಇಟ್ಟು ಅದರ ಮೇಲೆ ₹ 100 ಅಥವಾ ₹ 200 ಕೊಟ್ಟು ತಮ್ಮ ಮನಸ್ಸಿಗೆ ಬಂದ ಮೂರ್ತಿಯನ್ನು ಆರಿಸಿಕೊಂಡು ಹೋಗುತ್ತಾರೆ. ಈಗ ತಯಾರಿಕಾ ಶುಲ್ಕ ಹೆಚ್ಚಾಗಿದೆ. ಬಣ್ಣಗಳ ದರ ಹೆಚ್ಚಾಗಿದೆ ಎಂದರೂ ಕೇಳುವುದಿಲ್ಲ. ಅವರು ಕೊಟ್ಟಷ್ಟನ್ನು ನಾವು ತೆಗೆದುಕೊಳ್ಳಬೇಕು. ಕೆಲವರು ಮಾತ್ರ ಮೂರ್ತಿಗೆ ತಕ್ಕೆ ಬೆಲೆಕೊಟ್ಟು ಕೊಳ್ಳುತ್ತಾರೆ. ತಿಂಗಳಿನಿಂದ ಕಷ್ಟಪಟ್ಟು ತಯಾರಿಸಿದ ಕಲೆಗೆ ಬೆಲೆ ಇಲ್ಲದಂತಾಗಿದೆ. ಜನರು ಇದನ್ನು ಅರ್ಥಮಾಡಿಕೊಳ್ಳಬೇಕು’ ಎನ್ನುತ್ತಾರೆ ಅವರು.

‘ತಂದೆ ಈಶ್ವರಾಚಾರ್‌ ಅವರಿಂದ ಮಣ್ಣಿನ ಗಣೇಶನ ಮೂರ್ತಿಗಳ ತಯಾರಿಕೆಯನ್ನು ಕಲಿತಿದ್ದೇನೆ. ಹಬ್ಬಕ್ಕಾಗಿ ನೂರಕ್ಕೂ ಹೆಚ್ಚು ಮೂರ್ತಿಗಳನ್ನು ತಯಾರಿಸುತ್ತೇನೆ. ಅವುಗಳನ್ನು ಕೊಳ್ಳುವವರು ಮೂರ್ತಿಯ ಬಣ್ಣ ತುಂಬಾ ಚೆನ್ನಾಗಿರಬೇಕು. ನೋಡಲು ಲಕ್ಷಣವಾಗಿರಬೇಕು ಎಂದು ನಿರೀಕ್ಷಿಸುತ್ತಾರೆ. ಆದರೆ, ನಮ್ಮ ಶ್ರಮಕ್ಕೆ ಸರಿಯಾದ ಬೆಲೆ ಕೊಡುವುದಿಲ್ಲ’ ಎಂದು ಚಿರಡೋಣಿಯ ಕಲಾವಿದ ನವೀನಾಚಾರ್‌ ಹೇಳಿದರು.

ಸಂಘ– ಸಂಸ್ಥೆಗಳವರು ಪ್ರತಿಷ್ಠಾಪಿಸುವ ಗಣಪತಿಗಳು ಎಂಟರಿಂದ ಹತ್ತು ಅಡಿ ಇರುತ್ತವೆ. ಅವು ₹ 8,000ದಿಂದ ₹ 10,000ದವರೆಗೆ ಇವುಗಳ ದರ ಇರುತ್ತದೆ. ಅವರು ಹೇಳಿದ ಮಾದರಿಯಲ್ಲಿ ಗಣಪತಿಗಳನ್ನು ತಯಾರಿಸಿ ಕೊಡುತ್ತೇವೆ. ಅಲ್ಲದೇ ನಮಗೆ ಅಷ್ಟೇ ಶ್ರಮವೂ ಇರುತ್ತದೆ. ಆದರೆ ಅವರು ಪ್ರತಿ ವರ್ಷ ನಮ್ಮಲ್ಲಿಗೇ ಬರುತ್ತಾರೆ ಎಂಬ ಭರವಸೆ ಇರುವುದಿಲ್ಲ. ನಗರಗಳಲ್ಲಿ ಸ್ಥಾಪಿಸಿರುವ ಗಣಪತಿ ಮೂರ್ತಿಗಳನ್ನು ನೋಡಿ ಅವುಗಳನ್ನು ತಯಾರಿಸಿದವರಿಂದ ಕೊಳ್ಳುತ್ತಾರೆ. ಆದ್ದರಿಂದ ಮುಂಚಿತವಾಗಿ ದೊಡ್ಡ ಮೂರ್ತಿಗಳನ್ನು ತಯಾರಿಸಿ ಇಟ್ಟರೆ ನಷ್ಟ ಕಟ್ಟಿಟ್ಟ ಬುತ್ತಿ’ ಎನ್ನುತ್ತಾರೆ ಕಲಾವಿದ ಕೆ.ಹಾಲೇಶ್‌.

‘ವಿನಾಯಕ ಚೌತಿಗಾಗಿ ಗ್ರಾಮಗಳ ಬಡ ಕಲಾವಿದರು ತಯಾರಿಸುವ ಮಣ್ಣಿನ ಗಣಪತಿಗಳಿಗೆ ಸರಿಯಾದ ಬೆಲೆಯನ್ನು ಕೊಳ್ಳುವವರು ನೀಡಬೇಕು. ಆಗ ಮಾತ್ರ ಇಂತಹ ಕಲಾವಿದರಿಗೆ ಪ್ರೋತ್ಸಾಹ ದೊರೆಯಲು ಸಾಧ್ಯ’ ಎಂದು ಚಿರಡೋಣಿಯ ಶಿಕ್ಷಕ ಸಿ.ಎಂ.ರುದ್ರಯ್ಯ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT