ಶನಿವಾರ, ಆಗಸ್ಟ್ 13, 2022
26 °C
ಕುಸಿಯುತ್ತಿರುವ ರಸ್ತೆಯ ಮಾಹಿತಿ ನೀಡಿದ್ದರೂ ಸ್ಪಂದಿಸದ ಲೋಕೋಪ‍ಯೋಗಿ ಇಲಾಖೆ

ದಾವಣಗೆರೆ: ಹದಡಿ ಕೆರೆ ಏರಿಯಲ್ಲಿ ಹೆದ್ದಾರಿ ಬಿರುಕು

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ರಾಜ್ಯ ಹೆದ್ದಾರಿ 65ರಲ್ಲಿ ಹದಡಿ ಕೆರೆ ಏರಿಮೇಲೆ ರಸ್ತೆ ಕುಸಿಯುತ್ತಿದೆ. ಸ್ಥಳೀಯರು ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಮಳೆ ಜೋರಾದರೆ ರಸ್ತೆ ಪೂರ್ತಿ ಕುಸಿದು, ಸಂಚಾರವೇ ಸ್ಥಗಿತಗೊಳ್ಳುವ ಅಪಾಯ ಎದುರಾಗಿದೆ.

ದಾವಣಗೆರೆಯಿಂದ ಚನ್ನಗಿರಿಗೆ ಹೋಗುವ ಈ ರಸ್ತೆಯ ಎಡಬದಿಯಲ್ಲಿ ಹದಡಿ ಕೆರೆಯ ಏರಿಯಲ್ಲಿ ವಾರದ ಹಿಂದೆ ಸಣ್ಣ ಬಿರುಕು ಕಾಣಿಸಿಕೊಂಡಿತ್ತು. ಪ್ರತಿದಿನ ಈ ಬಿರುಕು ಹೆಚ್ಚಾಗುತ್ತಾ ಸಾಗಿದೆ. ಜತೆಗೆ ರಸ್ತೆಯ ಅಡಿಯ ಮಣ್ಣು ಕುಸಿಯುತ್ತಿದ್ದು, ಡಾಂಬಾರು ಒಳಗೆ ಹೋಗಿದೆ. ನಿತ್ಯ ಅರ್ಧ ಅಡಿಗಿಂತ ಹೆಚ್ಚು ಹೊಂಡ ಬೀಳತೊಡಗಿದೆ. ರಸ್ತೆಯ ನಡುವೆ ಕಾಲುವೆಯಂತೆ ಗೋಚರಿಸುತ್ತಿದೆ.

ದಾವಣಗೆರೆಯಿಂದ ಚನ್ನಗಿರಿಗೆ ಸಾಗುವ ಪ್ರಮುಖ ಎರಡು ರಸ್ತೆಗಳಲ್ಲಿ ಒಂದಾಗಿರುವ ಈ ಮಾರ್ಗದಲ್ಲಿ ದಿನಕ್ಕೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ಚನ್ನಗಿರಿ ಅಲ್ಲದೇ ಭದ್ರಾವತಿ, ಶಿವಮೊಗ್ಗ, ಬಿರೂರು, ಕಡೂರು ಮುಂತಾದ ಕಡೆಗಳಿಗೆ ಇದೇ ರಸ್ತೆ‌ಯಲ್ಲಿ ವಾಹನಗಳು ಹೋಗುತ್ತವೆ.

ಮೂರು ವರ್ಷಗಳ ಹಿಂದೆ ಈ ರಸ್ತೆಯಲ್ಲಿ ವಿಸ್ತರಣೆ ಮಾಡಲಾಗಿತ್ತು. ನಾಲ್ಕು ತಿಂಗಳ ಹಿಂದೆ ದುರಸ್ತಿ ಮಾಡಲಾಗಿತ್ತು. ಈಗ ಬಿರುಕು ಕಾಣಿಸಿಕೊಂಡಿರುವುದರಿಂದ ವಾಹನಗಳು ಅದರ ಮೇಲೆ ಹೋಗದಂತೆ ಪೊಲೀಸರು ಬ್ಯಾರಿಕೇಡ್‌ ಇಟ್ಟಿದ್ದಾರೆ. ಉಳಿದ ಕಡೆ ಮರಳು ತುಂಬಿದ ಗೋಣಿಚೀಲಗಳನ್ನು ಇಡಲಾಗಿದೆ.

‘ರಸ್ತೆಯಲ್ಲಿ ಸ್ವಲ್ಪ ಬಿರುಕು ಕಂಡಾಗಲೇ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ವಿಜಯ ಕುಮಾರ್‌ ಅವರಿಗೆ ಅದರ ಚಿತ್ರ ಕಳುಹಿಸಿ ಮಾಹಿತಿ ನೀಡಿದ್ದೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ಬಿರುಕು ದೊಡ್ಡದಾಗುತ್ತಾ ಹೋಗುತ್ತಿದೆ. ಮಧ್ಯೆ ರಸ್ತೆ ಕುಸಿಯುತ್ತಾ ಸಾಗುತ್ತಿದೆ. ಅದರ ಮಾಹಿತಿಯನ್ನು ಕೂಡ ವಾಟ್ಸ್‌ಆ್ಯಪ್‌ ಮೂಲಕ ಕಳುಹಿಸಿದ್ದೇನೆ. ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ’  ಎಂದು ಕುಕ್ಕವಾಡದ ನಿವಾಸಿ, ಸಮಾಜಸೇವಕ ಶಂಕರ್‌ ಡಿ.ಬಿ. ದೂರಿದರು.

ಸಾವಿರಾರು ಜನರು ಸಂಚರಿಸುವ ಈ ರಸ್ತೆ ಕುಸಿಯುತ್ತಿರುವ ಬಗ್ಗೆ ಮಾಹಿತಿ ಕೇಳಲು ‘ಪ್ರಜಾವಾಣಿ’ಯು ಲೋಕೋಪಯೋಗಿ ಇಲಾಖೆಯನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಪ್ರತಿಕ್ರಿಯೆಗೆ ಅಧಿಕಾರಿಗಳು ಲಭ್ಯರಾಗಿಲ್ಲ.

* ರಸ್ತೆ ಒಡೆದು ಹೋಗುವ ಮೊದಲು, ರಾತ್ರಿ ಹೊತ್ತಲ್ಲಿ ಅರಿವಿಲ್ಲದೇ ವಾಹನಗಳು ಇಲ್ಲಿ ಬೀಳುವ ಮೊದಲು ಲೋಕೋಪಯೋಗಿ ಇಲಾಖೆ ಎಚ್ಚೆತ್ತುಕೊಂಡು ಸರಿಪಡಿಸಬೇಕು.

-ಶಂಕರ್‌ ಡಿ.ಬಿ., ಕುಕ್ಕವಾಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು