ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಹೋಟೆಲ್‌ ಗ್ರಾಹಕರಿಗೆ ದರ ಏರಿಕೆಯ ಬಿಸಿ!

Published 3 ಆಗಸ್ಟ್ 2023, 6:41 IST
Last Updated 3 ಆಗಸ್ಟ್ 2023, 6:41 IST
ಅಕ್ಷರ ಗಾತ್ರ

ಡಿ.ಕೆ.ಬಸವರಾಜು

ದಾವಣಗೆರೆ: ದಿನಸಿ, ತರಕಾರಿ ಹಾಗೂ ಹಾಲಿನ ದರ ಹೆಚ್ಚಳದಿಂದಾಗಿ ಜಿಲ್ಲೆಯ ಕೆಲವು ಹೋಟೆಲ್‌ಗಳಲ್ಲಿ ತಿಂಡಿ, ಊಟ ಹಾಗೂ ಕಾಫಿ, ಟೀ  ದರ ಸದ್ದಿಲ್ಲದೇ ಹೆಚ್ಚಳವಾಗಿದೆ.

ಕೆಲವು ಹೋಟೆಲ್‌ಗಳಲ್ಲಿ ದರ ಹೆಚ್ಚಿಸಿದ್ದರೆ, ಮತ್ತೆ ಕೆಲವು ಹೋಟೆಲ್‌ಗಳಲ್ಲಿ ಆಷಾಢ ಮಾಸದ ಪ್ರಯುಕ್ತ ವ್ಯಾಪಾರ ಕುಗ್ಗಿರುವುದರಿಂದ ದರ ಹೆಚ್ಚಿಸಲು ಹಿಂದೇಟು ಹಾಕುತ್ತಿದ್ದಾರೆ. ಹೋಟೆಲ್ ಮಾಲೀಕರ ಸಂಘವು ದರ ಹೆಚ್ಚಳದ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯವನ್ನು ಆಯಾ ಹೋಟೆಲ್‌ ಮಾಲೀಕರಿಗೇ ಬಿಟ್ಟಿದೆ.

ತಿಂಡಿ, ಊಟದ ದರಗಳಲ್ಲಿ ಇಂತಿಷ್ಟೇ ಪ್ರಮಾಣ ಎಂದೇನಿಲ್ಲ. ಕೆಲವು ಹೋಟೆಲ್‌ಗಳಲ್ಲಿ ಶೇ 5, 10, 15ರಷ್ಟು ಎಂಬಂತೆ ದರವನ್ನು ತಮಗೆ ತೋಚಿದಂತೆ ಹೆಚ್ಚಳ ಮಾಡಲಾಗಿದೆ.

‘ಎಲ್ಲ ಬೆಲೆಗಳೂ ಗಗನಕ್ಕೇರಿವೆ. ಕೆಲವು ವರ್ಷಗಳ ನಂತರ ಇದೇ ಮೊದಲ ಬಾರಿಗೆ ನಾವು ದರ ಹೆಚ್ಚಿಸಿದ್ದೇವೆ. ಟೀ–ಕಾಫಿ ದರವನ್ನು ₹ 2,  ತಿಂಡಿಗಳ ಬೆಲೆಯನ್ನು ₹ 5ರಷ್ಟು ಹೆಚ್ಚಿಸಿದ್ದೇವೆ. ಊಟಕ್ಕೆ ಈ ಹಿಂದೆ ಒಂದು ಸಿಹಿ ಕೊಡುತ್ತಿದ್ದೆವು. ಈಗ ಎರಡು ಸಿಹಿ ನೀಡುತ್ತಿದ್ದು, ಊಟದ ಬೆಲೆಯನ್ನು ₹ 80ರಿಂದ 90ಕ್ಕೆ ಹೆಚ್ಚಿಸಿದ್ದೇವೆ’ ಎಂದು ವಿದ್ಯಾನಗರದ ಕಾಮಧೇನು ಹೋಟೆಲ್ ಮಾಲೀಕ ಅರುಣ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಹಿಂದೆ ಪ್ರತಿ ಕೆ.ಜಿಗೆ ₹ 90ಕ್ಕೆ ಸಿಗುತ್ತಿದ್ದ ಉದ್ದಿನ ಬೇಳೆ ದರ ಈಗ ₹ 130 ಆಗಿದೆ. ತೊಗರಿ ಬೆಳೆಯ ದರವೂ ₹ 40ರಷ್ಟು ಜಾಸ್ತಿ ಆಗಿದೆ. ತರಕಾರಿ ಬೆಲೆ ಅನಿಯಂತ್ರಿತವಾಗಿ ಹೆಚ್ಚಳ ಕಂಡಿದೆ. ಮೊದಲಿನ ದರಕ್ಕೇ ತಿಂಡಿ ಕೊಟ್ಟರೆ ನಾವು ವ್ಯಾಪಾರ ನಡೆಸಲು ಆಗುವುದಿಲ್ಲ. ವಾಣಿಜ್ಯ ಬಳಕೆ ವಿದ್ಯುತ್ ದರ ಹೆಚ್ಚಳವಾಗಿದ್ದು, ಮೊದಲು ಬಿಲ್‌ ತಿಂಗಳಿಗೆ ₹ 12,000ರ ಆಸುಪಾಸಿನಲ್ಲಿ ಬರುತ್ತಿತ್ತು. ಈಗ ಏಕಾಏಕಿ ₹18,000ಕ್ಕೆ ಹೆಚ್ಚಿದೆ. ಹೆಚ್ಚಿನ ಹೊರೆಯಿಂದಾಗಿ 3 ಜನ ಕೆಲಸದವರ‌ನ್ನು ಬಿಡಿಸಬೇಕಾದ ಪರಿಸ್ಥಿತಿ ಬಂದಿದೆ. ಜನರು ಬೆಲೆ ಏರಿಕೆಯನ್ನು ಪ್ರಶ್ನಿಸುತ್ತಾರೆ. ಆದು ತಪ್ಪಲ್ಲ. ಆದರೆ ದರ ಹೆಚ್ಚಿಸುವುದು ಅನಿವಾರ್ಯ’ ಎಂದು ಅವರು ಸಮುಜಾಯಿಷಿ ನೀಡಿದರು.

‘ನಮ್ಮ ಹೋಟೆಲ್‌ನಲ್ಲಿ ಯಾವುದೇ ದರವನ್ನೂ ಪರಿಷ್ಕರಿಸಿಲ್ಲ. ವ್ಯಾಪಾರವೂ ಕುಸಿದಿದೆ. ಊಟ, ತಿಂಡಿ ದರ ಹೆಚ್ಚಿಸಿದರೆ ಆಷಾಢದ ಸಮಯವಾದ್ದರಿಂದ ಗ್ರಾಹಕರು ಬರುತ್ತಾರೋ, ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ. ತರಕಾರಿ ದರ ಇಳಿಯಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ. ಇಲ್ಲಿನ ವಾತಾವರಣಕ್ಕೆ ದರ ಹೆಚ್ಚಿಸಲು ಧೈರ್ಯ ಬರುವುದಿಲ್ಲ’ ಎನ್ನುತ್ತಾರೆ ಓಷಿಯನ್ ಪಾರ್ಕ್ ಮಾಲೀಕ ಪ್ರಭಾಕರ ಶೆಟ್ಟಿ.

ದರ ಹೆಚ್ಚಳ ಸಂಬಂಧವಿಲ್ಲ

‘ಹೋಟೆಲ್‌ಗಳ ದರ ಏರಿಕೆಗೂ ಸಂಘಕ್ಕೂ ಯಾವುದೇ ಸಂಬಂಧವಿಲ್ಲ. ಹೋಟೆಲ್‌ಗಳ ಉಳಿವಿಗೆ ಅವರವರೇ ನಿರ್ಧಾರ ಕೈಗೊಳ್ಳಬಹುದು. ದಾವಣಗೆರೆಯಲ್ಲಿ ಕೆಲವು ಹೋಟೆಲ್‌ಗಳಲ್ಲಿ ದರ ಹೆಚ್ಚಿಸಿದ್ದಾರೆ. ಆದರೆ, ಇಂತಿಷ್ಟೇ ಎಂದು ಹೇಳಲು ಆಗುವುದಿಲ್ಲ. ದರವನ್ನು ರೌಂಡ್ ಅಪ್‌ ಮಾಡಲು ಎರಡು ಇಡ್ಲಿಯ ಬೆಲೆ ₹ 22 ಇದ್ದರೆ ಅದನ್ನು ₹ 25ಕ್ಕೆ, ₹ 12 ಇದ್ದ ಟೀ–ಕಾಫಿ ದರವನ್ನು ₹ 15ಕ್ಕೆ  ಹೆಚ್ಚಿಸಿದ್ದಾರೆ’ ಎಂದು ದಾವಣಗೆರೆ ಹೋಟೆಲ್ ಉದ್ದಿಮೆದಾರರ ಸಂಘದ ಕಾರ್ಯದರ್ಶಿ ಬಿ.ಕೆ. ಸುಬ್ರಹ್ಮಣ್ಯ ತಿಳಿಸಿದರು.

‘ಕಾಲಕ್ಕೆ ತಕ್ಕಂತೆ ತರಕಾರಿ, ದಿನಸಿ ದರಗಳು ಹೆಚ್ಚುತ್ತ ಹೋಗುತ್ತವೆ. ಹೋಟೆಲ್‌ಗಳಲ್ಲಿ ದರ ಹೆಚ್ಚಳವಾಗಿರುವ ಬಗ್ಗೆ ಚರ್ಚೆಯಾಗುತ್ತಿದೆಯೇ ಹೊರತು, ಕಿರಾಣಿ ಅಂಗಡಿಯಲ್ಲಿನ ದರ ಹೆಚ್ಚಳ ವಿಷಯ ಚರ್ಚೆಯಾಗುತ್ತಿಲ್ಲ. ಇರುವ ವ್ಯವಹಾರವೂ ಕಡಿಮೆಯಾಗುತ್ತದೆ ಎಂಬ ಭಯದಿಂದ ಕೆಲವರು ಮಾಡಿಲ್ಲ. ಹಾಲು, ಟೊಮೆಟೊ ದರ ಹೆಚ್ಚಳದಿಂದ ದರ ಹೆಚ್ಚಿಸಲು ಸಾಧ್ಯವಿಲ್ಲ’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

‘ದರ ಹೆಚ್ಚಳ ಕುರಿತು ಆಯಾ ಬಡಾವಣೆಗಳಲ್ಲಿನ ಹೋಟೆಲ್‌ಗಳ ಮಾಲೀಕರೇ ನಿರ್ಧರಿಸುತ್ತಾರೆ. ದಾವಣಗೆರೆ ಒಂದು ದೊಡ್ಡ ಹಳ್ಳಿ ಇದ್ದ ಹಾಗೆ. ಮಾಮೂಲಿ ಗ್ರಾಹಕರೇ ಬರಬೇಕು. ದರ ಜಾಸ್ತಿಯಾದರೆ ಕೆಲವರು ಪ್ರಶ್ನಿಸುತ್ತಾರೆ. ದರ ಹೆಚ್ಚಳದ ಬಗ್ಗೆ ನಾವು ಯಾವುದೇ ನಿರ್ಧಾರ ಕೈಗೊಂಡಿಲ್ಲ’ ಎಂದು ದಾವಣಗೆರೆ ಹೋಟೆಲ್ ಉದ್ದಿಮೆದಾರರ ಸಂಘದ ಅಧ್ಯಕ್ಷ ಮೋತಿ ಪರಮೇಶ್ವರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT