ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್‌ನಿಂದ ತೀರಿಹೋದ ಮಗಳ ನೆನಪಿಗೆ ಮೇಣದ ಪ್ರತಿಮೆ ನಿರ್ಮಿಸಿದ ತಾಯಿ!

ಸಮಾಜ ಸೇವೆಯ ಮೂಲಕ ಮಗಳನ್ನು ಚಿರಸ್ಥಾಯಿಗೊಳಿಸಿದ ಅಮ್ಮ
Published 16 ಡಿಸೆಂಬರ್ 2023, 21:51 IST
Last Updated 16 ಡಿಸೆಂಬರ್ 2023, 21:51 IST
ಅಕ್ಷರ ಗಾತ್ರ

ದಾವಣಗೆರೆ: ಮಗಳ ಆಸೆ ಪೂರೈಸಲು ತಾಯಿಯೊಬ್ಬರು ಮೇಣದ (ಸಿಲಿಕಾನ್) ಪ್ರತಿಮೆ ನಿರ್ಮಿಸಿ ನೆನಪನ್ನು ಚಿರಸ್ಥಾಯಿಗೊಳಿಸಿದ್ದಾರೆ. ಜೊತೆಗೆ ಮಗಳ ಇಷ್ಟದಂತೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಗ್ಯಾರಹಳ್ಳಿಯ ಕಮಲಮ್ಮ ಅವರೇ ತಮ್ಮ ಪುತ್ರಿ ಕಾವ್ಯಾ ಅವರ ನೆನಪಿಗೋಸ್ಕರ ಸಿಲಿಕಾನ್‌ ಪ್ರತಿಮೆ ನಿರ್ಮಿಸಿದ್ದು, ಮುಖ್ಯ ಶಿಕ್ಷಕಿಯಾಗಿ ನಿವೃತ್ತಿಯಾಗಿರುವ ಇವರು ಮಗಳ ಆಸೆಯನ್ನು ಈಡೇರಿಸಲು ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ.

ಕಮಲಮ್ಮ ಅವರಿಗೆ ಕಾವ್ಯಾ ಅವರೆಂದರೆ ಪಂಚಪ್ರಾಣ. ಮಗಳು 12 ದಿವಸದ ಮಗುವಾಗಿದ್ದ ಪತಿಯನ್ನು ಕಳೆದುಕೊಂಡ ಕಮಲಮ್ಮ ಅವರಿಗೆ ಮಗಳೇ ಜೀವಾಳ. ಆದರೆ ದುರದೃಷ್ಟವಶಾತ್ 26 ವರ್ಷದಲ್ಲಿ ಮಗಳಿಗೆ ಕ್ಯಾನ್ಸರ್ ಕಾಣಿಸಿಕೊಂಡಿತು. 4 ವರ್ಷಗಳು ಕ್ಯಾನ್ಸರ್‌ನಿಂದ ಬಳಲಿ. 2022ರ ಡಿಸೆಂಬರ್‌ನಲ್ಲಿ ಕಾವ್ಯಾ ನಿಧನರಾದರು. ಅಂದಿನಿಂದ ಇಂದಿನವರೆಗೂ ಸಾಮಾಜಿಕ ಸೇವೆಯ ಮೂಲಕ ಮಗಳ ಆಸೆಯನ್ನು ಈಡೇರಿಸಲು ಶ್ರಮಿಸುತ್ತಿದ್ದಾರೆ.

ಸಿಲಿಕಾನ್ ಪ್ರತಿಮೆಗೆ ಮಗಳೇ ಸೂಚಿಸಿದ್ದಳು

ಬಿ.ಇ. ವ್ಯಾಸಂಗ ಮಾಡಿದ್ದ ಕಾವ್ಯ ಅವರು ಎರಡು ವರ್ಷ ಕಂಪನಿಯೊಂದರಲ್ಲಿ ಕೆಲಸವನ್ನೂ ನಿರ್ವಹಿಸಿದ್ದರು. ಮದುವೆ ಮಾಡಿಕೊಳ್ಳುವಷ್ಟರಲ್ಲಿ ಕ್ಯಾನ್ಸರ್ ಮಹಾಮಾರಿ ದೇಹವನ್ನು ಆವರಿಸಿಕೊಂಡಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಕಾವ್ಯಾ ಅವರು ಯೂಟ್ಯೂಬ್‌ನಲ್ಲಿ ನೋಡಿ ಇನ್ನೆಂಥಹ ಕೊಡುಗೆ ಬೇಕಮ್ಮ ನಿನಗೆ ಎಂದು ಹೇಳಿ ಪಿಒಪಿಯಿಂದ ಮಾಡಿದ ಮೂರ್ತಿ ತೋರಿಸಿದಳು. ಸಮಾಧಿಯ ಪಕ್ಕದಲ್ಲಿ ಉದ್ಯಾನ ನಿರ್ಮಿಸಬೇಕು ಎಂಬ ಇಂಗಿತವನ್ನು ವ್ಯಕ್ತಪಡಿಸಿದ್ದರು. 

ಮಗಳ ಆಸೆಯಂತೆ ಬೆಂಗಳೂರಿನ ಶಿಲ್ಪಿ ವಿಶ್ವನಾಥ್ ಅವರಿಂದ ₹3.30 ಲಕ್ಷ ವೆಚ್ಚದಲ್ಲಿ ಸಿಲಿಕಾನ್ ಪ್ರತಿಮೆ ನಿರ್ಮಿಸಿ ಸರಸ್ವತಿನಗರದ 2ನೇ ಮೇನ್, 2ನೇ ಕ್ರಾಸ್‌ನಲ್ಲಿರುವ ತಮ್ಮ ನಿವಾಸದಲ್ಲಿ ಇಟ್ಟಿದ್ದಾರೆ.  ಗೋಪನಾಳ್‌ನಲ್ಲಿ ಸಮಾಧಿ ನಿರ್ಮಿಸಿ ಸುತ್ತಲು ಉದ್ಯಾನ ನಿರ್ಮಿಸಿದ್ದಾರೆ.

ಸಿಲಿಕಾನ್ ಮೆಟಿರಿಯಲ್ಸ್‌ನಿಂದ ತಯಾರಿಸಿರುವ ಈ ಮೂರ್ತಿ ನಿಜ ಬಣ್ಣದಂತೆ ಗೋಚರಿಸುತ್ತದೆ. ಉಗುರು, ಚರ್ಮ, ಮುಖ, ಅಂಗಾಗಗಳು ಥೇಟ್ ನೈಜತೆಯನ್ನು ಹೊಂದಿವೆ. ನೋಡಿದವರು ಪ್ರತಿಮೆ ಎನ್ನುವುದಿಲ್ಲ. ಮಗಳು ಕುಳಿತಿರುವಂತೆ ಭಾಸವಾಗುತ್ತದೆ.₹ 5 ಲಕ್ಷಕ್ಕಿಂತ ಹೆಚ್ಚು ಖರ್ಚಾಗುವ ಈ ಮೂರ್ತಿಗೆ ನಮ್ಮ ಪರಿಸ್ಥಿತಿಯನ್ನು ನೋಡಿ  ₹3.30 ಲಕ್ಷಕ್ಕೆ ಮಾಡಿಕೊಟ್ಟಿದ್ದಾರೆ. ಮಗಳು ನಿರಂತರವಾಗಿ ನಮ್ಮ ಜೊತೆ ಇರುತ್ತಾಳಲ್ಲಾ ಎಂಬುದೇ ಖುಷಿ’ ಎಂದು ಕಮಲಮ್ಮ ಹೇಳುತ್ತಾರೆ.

ದೇಹದಾನ ತಿರಸ್ಕರಿಸಿದ ವೈದ್ಯರು

‘ನನ್ನ ದೇಹವನ್ನು ಊರಿಗೆ ಕೊಂಡೊಯ್ಯಬೇಡ, ಆಸ್ಪತ್ರೆಗೆ ದಾನ ಮಾಡು ಎಂಬ ಇಂಗಿತವನ್ನು ಮಗಳು ವ್ಯಕ್ತಪಡಿಸಿದ್ದಳು. ಆದರೆ ರೋಗ ಇದ್ದುದರಿಂದ ವೈದ್ಯರು ತಿರಸ್ಕರಿಸಿದ್ದರು. ಬಹಳ ಪ್ರಯತ್ನಪಟ್ಟರು ಆಸೆ ಈಡೇರಲಿಲ್ಲ’ ಎಂದು ವಿಷಾದದಿಂದ ಹೇಳಿದರು.

ದಾವಣಗೆರೆ ತಾಲ್ಲೂಕಿನ ಗೋಪನಾಳ್ ಬಳಿ ನಿರ್ಮಿಸಿರುವ ಕಾವ್ಯಾಳ ಸಮಾಧಿ.
ದಾವಣಗೆರೆ ತಾಲ್ಲೂಕಿನ ಗೋಪನಾಳ್ ಬಳಿ ನಿರ್ಮಿಸಿರುವ ಕಾವ್ಯಾಳ ಸಮಾಧಿ.

‘ನನ್ನ ಹಾಗೂ ಮಗಳ ನಡುವಿನ ಬಾಂಧವ್ಯ ಹೇಳಲು ಪದಗಳು ಸಾಲದು. ಸಮಾಜಸೇವೆಯ ಮೂಲಕ ಅವಳ ಆಸೆಯನ್ನು ಈಡೇರಿಸುವ ಪ್ರಯತ್ನ ಮಾಡುತ್ತಿದ್ದೇನೆ

–ಕಮಲಮ್ಮ ನಿವೃತ್ತ ಮುಖ್ಯ ಶಿಕ್ಷಕಿ

ಸಮಾಜ ಸೇವೆಯ ಇಂಗಿತ

‘ನನ್ನ ಪುತ್ರಿ ಕಾವ್ಯಳಿಗೆ ಸಮಾಜಸೇವೆ ಮಾಡುವ ಆಸೆ ಇತ್ತು. ಬಡವರಿಗೆ ಅನಾಥರಿಗೆ ವೃದ್ಧರಿಗೆ ಸಹಾಯ ಮಾಡುವ ಆಸೆ ಇಂಗಿತ ವ್ಯಕ್ತಪಡಿಸಿದ್ದಳು. ಇದ್ದವರಿಗೆ ಸಹಾಯ ಮಾಡುವ ಬದಲು ಇಲ್ಲದವರಿಗೆ ಸಹಾಯ ಮಾಡು ಪುಣ್ಯ ಪ್ರಾಪ್ತಿಯಾಗುತ್ತದೆ. ನನ್ನಂತೆ ಕಾಯಿಲೆ ಬಂದು ಆಸ್ಪತ್ರೆಗೆ ತೋರಿಸಲು ಹಣವಿಲ್ಲದೇ ನಿಸ್ಸಾಯಕರಾಗಿರುವವರಿಗೆ ಸಹಾಯ ಮಾಡು. ಮನೆಯ ಕೆಳಗಿನ ಮಹಡಿಯಲ್ಲಿ ವೃದ್ಧಾಶ್ರಮ ಆರಂಭಿಸು ಎಂದು ಹೇಳಿದ್ದಳು. ಅದರಂತೆ ಸಮಾಜ ಸೇವೆಗೆ ಮುಂದಾಗಿದ್ದೇನೆ’ ಎಂದು ಕಮಲಮ್ಮ ಹೇಳಿದರು. ‘ಅದರಂತೆ ಕಳೆದ ಅ.6ರಂದು ನನ್ನ ಮಗಳ ಜನ್ಮದಿನದ ಪ್ರಯುಕ್ತ ಎಂಸಿಸಿ ‘ಎ’ ಬ್ಲಾಕ್ ನಲ್ಲಿರುವ ಅನಾಥಶ್ರಮದ ಮಕ್ಕಳಿಗೆ ಬ್ಯಾಗ್ ವಿತರಣೆ ಮಾಡಿ ಸಿಹಿ ಊಟ ಹಾಕಿಸಿದೆ. ಬಾಡ ಕ್ರಾಸ್‌ನಲ್ಲಿರುವ ಪುಟ್ಟರಾಜ ಗವಾಯಿಗಳ ಪುಣ್ಯಾಶ್ರಮದ ಬಳಿ ಗವಾಯಿಗಳ ಮೂರ್ತಿಯ ಬಳಿ ಹೊರಗಡೆ ₹39 ಸಾವಿರ ವೆಚ್ಚದಲ್ಲಿ ಸ್ಟೀಲ್ ಗೇಟ್ ನಿರ್ಮಿಸಿಕೊಟ್ಟಿದ್ದೇನೆ. ಇನ್ನೂ ಹಲವು ಸೇವೆಗಳನ್ನು ಮಾಡುವ ಹಂಬಲವಿದೆ’ ಎಂದು ಹೇಳಿದರು.

‘ಕಾವ್ಯ ಕನ್ನಿಕೆ’ಯ ಕವನ ಸಂಕಲನ

‘ಕಾವ್ಯಾಳಿಗೆ 7ನೇ ತರಗತಿಯಿಂದಲೇ ಕವನ ಬರೆಯುವ ಹವ್ಯಾಸ ಇತ್ತು 2003–04 ಆಸುಪಾಸಿನಲ್ಲಿ ಶ್ರೀಲಂಕಾದಲ್ಲಿ ಸುನಾಮಿ ಬಂದ ಸಮಯದಲ್ಲಿ ಸುನಾಮಿ ಕುರಿತು ಕವನ ಸಂಕಲನ ರಚಿಸಿದ್ದಳು. ಪತ್ರಿಕೆಗಳಲ್ಲೂ ಇದು ಪ್ರಕಟಗೊಂಡಿತ್ತು. ಸಾಯುವರೆಗೂ ಕವನ ಸಂಕಲನ ಬರೆದಿದ್ದಳು. ಅವಳು ಬರೆದ ಕವನ ಚುಟುಕುಗಳನ್ನು ‘ಕಾವ್ಯ ಕನ್ನಿಕೆ’ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಿಸಿ ಬಿಡುಗಡೆಗೊಳಿಸಿದ್ದೇನೆ’ ಎಂದು ಕಮಲಮ್ಮ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT