ಶನಿವಾರ, ಜುಲೈ 24, 2021
28 °C
ಮೊದಲ ಇನ್ಸಿಡೆಂಟ್‌ ಕಮಾಂಡರ್ ಮಮತಾ ಹೊಸಗೌಡರ್‌ ಮಾತು

ದಾವಣಗೆರೆ: ಪರೀಕ್ಷೆಗೆ ವೃದ್ಧರ ಮನವೊಲಿಕೆಯೇ ಸವಾಲು

ಚಂದ್ರಶೇಖರ‌ ಆರ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಕೊರೊನಾ ಪ್ರಕರಣ ಕಂಡು ಬಂದ ಕಂಟೈನ್‌ಮೆಂಟ್ ಝೋನ್‌ಗಳಲ್ಲಿ ವಯಸ್ಸಾದವರೇ ನಮಗೆ ಸವಾಲಾಗಿದ್ದರು. ಅವರನ್ನು ಮನವೊಲಿಸಿ ಸ್ವ್ಯಾಬ್‌ ಪರೀಕ್ಷೆಗೆ ಒಪ್ಪಿಸುವವರೆಗೆ ಸಾಕು ಸಾಕಾಯಿತು’..   

‘ಕೊರೊನಾ ಎಲ್ಲರಿಗೂ ಅನಿರೀಕ್ಷಿತ. ಈ ರೀತಿಯ ಸಂದರ್ಭದಲ್ಲಿ ಕೆಲಸ ಮಾಡುತ್ತೇವೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಜನರ ಸೇವೆ ಮಾಡಲು ಇದೊಂದು ಉತ್ತಮ ಅವಕಾಶ’... 

ಇದು ಬಾಷಾನಗರ, ಬಸವರಾಜಪೇಟೆ ಕಂಟೈನ್‌ಮೆಂಟ್‌ ಝೋನ್‌ನ ಇನ್ಸಿಡೆಂಟ್‌ ಕಮಾಂಡರ್‌, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್‌ ಅವರ ಮಾತು.

ದಾವಣಗೆರೆ ಜಿಲ್ಲೆಯಲ್ಲಿ ಮೊದಲು ನಿಜಲಿಂಗಪ್ಪ ಬಡಾವಣೆಯಲ್ಲಿ ಕೊರೊನಾ ಸೋಂಕು ಕಂಡು ಬಂದಾಗ ಮೊದಲ ಇನ್ಸಿಡೆಂಟ್‌ ಕಮಾಂಡರ್ ಆಗಿದ್ದವರು ಅವರು. ಬಳಿಕ ಬಾಷಾನಗರಕ್ಕೂ ಅವರೇ ಇನ್ಸಿಡೆಂಟ್‌ ಕಮಾಂಡರ್ ಆದರು. 

‘ನನಗೆ ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ತೃಪ್ತಿ ಇದೆ’ ಎಂದು ಅವರು ‘ಪ್ರಜಾವಾಣಿ’ಗೆ ಅನುಭವ ಹಂಚಿಕೊಂಡರು. 

ಇದರಲ್ಲಿ ವೈದ್ಯರು, ನರ್ಸ್‌ಗಳು, ಆಶಾ ಕಾರ್ಯಕರ್ತೆಯರ ಶ್ರಮ ಹೆಚ್ಚು. ಒಂದೂ ಮನೆ ಬಿಡದೆ ಪ್ರತಿದಿನ ಕಂಟೈನ್‌ಮೆಂಟ್‌ ಝೋನ್‌ ಸೇರಿ ಎಲ್ಲೆಡೆ ಹೋಗಿ ಮಾಹಿತಿ ಕಲೆ ಹಾಕಿದ್ದು ಆಶಾ ಕಾರ್ಯಕರ್ತೆಯರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹೆಚ್ಚಿನ ಕ್ರೆಡಿಟ್‌ ಜಿಲ್ಲಾಧಿಕಾರಿಗೆ ಸಲ್ಲಬೇಕು. ಕಂಟೈನ್‌ಮೆಂಟ್‌ ವಲಯಗಳಲ್ಲಿ ಶಾಮಿಯಾನ ಹಾಕುವುದು ಸೇರಿ ಪ್ರತಿ ವ್ಯವಸ್ಥೆ ಬಗ್ಗೆ ಅವರ ನಿಗಾ ಇಡುತ್ತಿದ್ದರು ಎಂದರು.

‘ಬಾಷಾನಗರದಲ್ಲಿ ದಿನಗೂಲಿ ಕಾರ್ಮಿಕರೇ ಹೆಚ್ಚಿರುವ ಕಾರಣ ಅವರಿಗೆ ಪ್ರತಿದಿನದ ಊಟವೂ ಸಮಸ್ಯೆಯಾಗಿತ್ತು. ಅವರಿಗೆ  ಆಹಾರದ ಕಿಟ್‌ ವಿತರಿಸಿ, ಹೊರಗೆ ಹೋಗಬೇಡಿ ಎಂದು ಮನವೊಲಿಸಿದೆ. ತಂಡದ ಸಿಬ್ಬಂದಿಗೆ ಏನೇನು ಮಾಡಬೇಕು ಎಂಬ ಬಗ್ಗೆ ಮಾಹಿತಿ ನೀಡುತ್ತಿದ್ದೆ. ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಹೀಗೆ ಎಲ್ಲ ಸಮಯದಲ್ಲಿ ಅಲ್ಲಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುತ್ತಿದ್ದೆ’ ಎಂದು ಪರಿಸ್ಥಿತಿ ನಿಭಾಯಿಸಿದ ಬಗೆ ವಿವರಿಸಿದರು.

‘ಕಂಟೈನ್‌ಮೆಂಟ್‌ ವಲಯದಲ್ಲಿ ಎಲ್ಲರ ಸ್ವ್ಯಾಬ್‌ ಪರೀಕ್ಷೆ ಮಾಡಿಸಲು ಸೂಚಿಸಿದಾಗ ಎಲ್ಲರ ಪರೀಕ್ಷೆ ಮಾಡಿದೆವು. ಆದರೆ ವೃದ್ಧರನ್ನು ಕರೆತರುವುದು ಸವಾಲಾಗಿತ್ತು. ಬಸವರಾಜಪೇಟೆಯಲ್ಲಿ 187 ಜನಸಂಖ್ಯೆ ಇದ್ದರು. ವಾರದಲ್ಲಿ ಎಲ್ಲರ ಸ್ವ್ಯಾಬ್‌ ಪರೀಕ್ಷೆ ಮಾಡಿಸಿದ್ದೆ. ಸೀಲ್‌ಡೌನ್‌ ಪ್ರದೇಶದ ಅಕ್ಕಪಕ್ಕದವರು ನಮಗೂ ಜ್ವರ ಬಂದಿದೆ ಎಂದು ಬರುತ್ತಿದ್ದರು. ಅಂತಹವರ ಸಮಗ್ರ ಮಾಹಿತಿ ಕಲೆಹಾಕಿ, ಪರೀಕ್ಷೆ ಮಾಡಿಸಿದೆವು. ತಂಡದ ಅಧಿಕಾರಿ, ಸಿಬ್ಬಂದಿ, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಎಲ್ಲ ನಿಭಾಯಿಸಿದೆವು’ ಎಂದು ಮಾತು ಮುಗಿಸಿದರು.

ಸವಾಲು ತಂದ ವೃದ್ಧ ದಂಪತಿ

‘ಕಂಟೈನ್‌ಮೆಂಟ್‌ ವಲಯದಲ್ಲಿ ಒಂದೇ ಮನೆಯಲ್ಲಿ 70 ವರ್ಷದ ಇಬ್ಬರು ವೃದ್ಧ ದಂಪತಿ ಇದ್ದರು. ಅವರು ಯಾವುದೇ ಕಾರಣಕ್ಕೂ ಸ್ವ್ಯಾಬ್‌ ಪರೀಕ್ಷೆಗೆ ಒಪ್ಪಲಿಲ್ಲ. ಅವರ ಮನೆಗೆ ನಾನೇ ಹೋದೆ. ಜಿಲ್ಲೆಯಲ್ಲಿ ಹೆಚ್ಚು ಪ್ರಕರಣಗಳಿವೆ. ವೃದ್ಧರಿಗೆ ತೊಂದರೆಯಾಗುವುದು ಹೆಚ್ಚು ಎಂದು ಅವರಿಗೆ ತಿಳಿ ಹೇಳಿದೆ. ನನ್ನ ಮಾತಿಗೆ ಒಪ್ಪಿ ಅವರು ಪರೀಕ್ಷೆಗೆ ಬಂದರು. ಅಲ್ಲಿ ಅದಾಗಲೇ ಪರೀಕ್ಷೆಗಾಗಿ ಹಲವು ಜನರು ಸರತಿಯಲ್ಲಿ ನಿಂತಿದ್ದರು. ಈ ವೃದ್ಧರು ಹಿಂದೆ ನಿಲ್ಲುವಂತಾಗಿತ್ತು. ಅವರು ಎಲ್ಲಿ ನಿರ್ಧಾರ ಬದಲಿಸುತ್ತಾರೋ ಎಂದು ಹೆದರಿ ಅವರಿಗೇ ಮೊದಲು ಪರೀಕ್ಷೆ ಮಾಡಿಸಿದೆ. ಅವರನ್ನು ನೋಡಿ ಇತರ ವೃದ್ಧರೂ ಬಂದರು’ ಎಂದು ಅವರು ಸವಾಲು ನಿರ್ವಹಿಸಿದ ಬಗೆ ವಿವರಿಸಿದರು.

ಪ್ರತ್ಯೇಕ ಕೊಠಡಿಯಲ್ಲಿ ಸೆಲ್ಫ್ ಕ್ವಾರಂಟೈನ್‌

ನನಗೆ ಇಬ್ಬರು ಗಂಡು ಮಕ್ಕಳು. 67 ವರ್ಷದ ತಾಯಿ ಜತೆಗಿದ್ದಾರೆ. ಕರ್ತವ್ಯದ ಕಾರಣ ಹೊರಗೆ ಹೋಗಿಬರುವುದರಿಂದ ಮನೆಯೊಳಗೇ ಸೆಲ್ಫ್ ಕ್ವಾರಂಟೈನ್‌ಗೆ ಒಳಗಾಗುತ್ತಿದ್ದೆ. ಆದರೆ ಮಕ್ಕಳು ಹತ್ತಿರ ಓಡಿ ಬರುತ್ತಿದ್ದರು. ಹೀಗೆ ಬಂದಾಗ ಅಪ್ಪಿಕೊಳ್ಳೋಣ ಅನಿಸುತ್ತಿದ್ದರೂ ಅಂತರ ಕಾಯ್ದುಕೊಳ್ಳುತ್ತಿದ್ದೆ. ಈಗ ಮಕ್ಕಳಿಗೂ ರೂಢಿಯಾಗಿದೆ ಎಂದು ಮಮತಾ ಹೊಸಗೌಡರ್‌ ವೈಯಕ್ತಿಕ ಬದುಕು ತೆರೆದಿಟ್ಟರು. 

‘ಮನೆಗೆ ಬಂದ ಕೂಡಲೇ ಚಪ್ಪಲಿ, ವಾಚ್, ಮೊಬೈಲ್ ಸ್ವಚ್ಛಗೊಳಿಸಿ, ಸ್ನಾನ ಮುಗಿಸಿದ ನಂತರವೇ ಎಲ್ಲರೊಂದಿಗೂ ಮಾತನಾಡುತ್ತೇನೆ’ ಎಂದು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು