ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಪಿಪಿಇ ಕಿಟ್‌ ಬಳಕೆಯಲ್ಲಿ ಎಡವುತ್ತಿದ್ದಾರಾ ಸಿಬ್ಬಂದಿ ?

ವೈದ್ಯರು, ನರ್ಸ್‌ಗಳಲ್ಲೂ ಕಾಣಿಸುತ್ತಿದೆ ಕೊರೊನಾ ವೈರಸ್‌ ಸೋಂಕು
Last Updated 12 ಜೂನ್ 2020, 11:22 IST
ಅಕ್ಷರ ಗಾತ್ರ

ದಾವಣಗೆರೆ: ಕೋವಿಡ್‌ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯರು, ನರ್ಸ್‌ಗಳು, ಇತರ ಸಿಬ್ಬಂದಿ ಸುರಕ್ಷಾ ಕ್ರಮಗಳನ್ನು ವಹಿಸುವಲ್ಲಿ ಎಡುವತ್ತಿದ್ದಾರಾ ಎಂಬ ಅನುಮಾನಗಳು ವ್ಯಕ್ತವಾಗಿವೆ. ಒಬ್ಬ ವೈದ್ಯ, ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು, ನಾಲ್ವರು ನರ್ಸ್‌ಗಳು, ಮೂವರು ಡಿ ಗ್ರೂಪ್‌ ನೌಕರರು ಸೋಂಕಿಗೆ ಒಳಗಾಗಿರುವುದು ಈ ಅನುಮಾನಕ್ಕೆ ಕಾರಣವಾಗಿದೆ.

ಎಲ್ಲರಿಗೂ ತರಬೇತಿ ನೀಡಿಯೇ ಕೊರೊನಾ ವಾರ್ಡ್‌ಗೆ ಕಳುಹಿಸಿದ್ದೇವೆ. ಅವರು ಜಾಗರೂಕತೆಯಿಂದಲೇ ಕಾರ್ಯನಿರ್ವಹಿಸಬೇಕು. ಒಂದು ಕ್ಷಣ ಮೈಮರೆತರೂ ಸೋಂಕಿಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಮತ್ತೆ ಎರಡುಮೂರು ಬಾರಿ ಅವರಿಗೆ ತಿಳಿವಳಿಕೆ ನೀಡಿ ಸಜ್ಜುಗೊಳಿಸಿದ್ದೇವೆ. ಮುಂದೆ ಹಾಗೆ ಆಗಲಾರದು ಎಂಬ ವಿಶ್ವಾಸ ಇದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬಿಳಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಶಸ್ತ್ರಚಿಕಿತ್ಸೆಯಂತಹ ತೀರ ಗಂಭೀರ ಪ್ರಕರಣಗಳನ್ನು ನಿರ್ವಹಿಸುವ ವೈದ್ಯರನ್ನು ಬಿಟ್ಟು ಉಳಿದವರಿಗೆ ಕಿಟ್‌ ಹಾಕುವುದು ರೂಢಿ ಇರಲಿಲ್ಲ. ಕೊರೊನಾ ಬಂದಿದ್ದರಿಂದ ವಾರ್ಡ್‌ನಲ್ಲಿ ಕೆಲಸ ಮಾಡುವವರೆಲ್ಲರೂ ಹಾಕಿಕೊಳ್ಳಬೇಕು. ಬೇಸಿಗೆಯೂ ಆಗಿರುವುದರಿಂದ ಬೆವರು ಬರುತ್ತದೆ. ಹಾಗಾಗಿ ಗಾಳಿ ಬರಲಿ ಎಂದು ಸ್ವಲ್ಪ ಏನಾದರೂ ತೆರೆದಿರುವ ಸಾಧ್ಯತೆಯೂ ಇರುತ್ತದೆ. ಎಲ್ಲರಿಗೂ ತರಬೇತಿ ನೀಡಿದ್ದೇವೆ. ಈಗ ಮತ್ತೆ ಸೂಪರ್‌ವಿಶನ್‌ ಮಾಡುತ್ತಿದ್ದೇವೆ. ಮತ್ತೆ ಈ ರೀತಿ ಆಗಬಾರದು. ಯಾಕೆಂದರೆ ವೈದ್ಯಕೀಯ ಸಿಬ್ಬಂದಿಗೇ ಕೊರೊನಾ ಬಂದರೆ ಸಮಸ್ಯೆಯಾಗಿ ಬಿಡುತ್ತದೆ. ಎಲ್ಲರೂ ಗುಣಮುಖರಾಗಿದ್ದಾರೆ. ಕೆಲವರು ಬಿಡುಗಡೆಗೊಂಡಿದ್ದಾರೆ. ಉಳಿದವರು ಇನ್ನೆರಡು ಮೂರು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುತ್ತಾರೆ’ ಎಂದು ಜಿಲ್ಲಾ ಸರ್ಜನ್‌ ಡಾ. ನಾಗರಾಜ್‌ ಮಾಹಿತಿ ನೀಡಿದರು.

ಪಿಪಿಇ ಕಿಟ್‌ ಹಾಕಿಕೊಳ್ಳುವುದನ್ನು ಡೌನಿಂಗ್‌ ಎಂದೂ ಕಿಟ್‌ ತೆಗೆಯುವುದನ್ನು ಡಪ್ಫಿಂಗ್‌ ಎಂದೂ ಕರೆಯಲಾಗುತ್ತದೆ. ಡೌನಿಂಗ್‌ ಮತ್ತು ಡಪ್ಫಿಂಗ್‌ ಹೇಗೆ ಮಾಡಬೇಕು ಎಂಬ ನಿಯಮ ಇದೆ. ಡೌನಿಂಗ್‌ ಮಾಡುವಾಗ ಸ್ವಲ್ಪ ವ್ಯತ್ಯಾಸವಾದರೂ ನಡೆಯುತ್ತದೆ. ಆದರೆ ಡಪ್ಫಿಂಗ್‌ ಮಾಡುವಾಗ ಚಾಚೂತಪ್ಪದೆ ನಿಯಮ ಪಾಲಿಸಬೇಕಾಗುತ್ತದೆ. ಇಲ್ಲದೇ ಹೋದರೆ ಕೊರೊನಾ ಸೋಂಕು ತಗಲುವ ಬರುವ ಸಾಧ್ಯತೆ ಇರುತ್ತದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕೊರೊನಾ ವಾರ್ಡ್‌ನಿಂದ ಹೊರ ಬರುವಾಗ ಬಾಗಿಲು ತೆಗೆಯುವ ಮೊದಲು ಧರಿಸಿರುವ ಕನ್ನಡಕ ತೆಗೆಯಬೇಕು. ಆನಂತರ ಹೆಡ್‌ಶೀಲ್ಡ್‌, ಎನ್‌ 95 ಮಾಸ್ಕ್‌, ಸರ್ಜಿಕಲ್‌ ಮಾಸ್ಕ್‌, ಗೌನ್‌, ಶೂಸ್‌ ಒಂದೊಂದೇ ಕಳಚಬೇಕು. ಕೊನೆಗೆ ಕೈಯ ಗ್ಲೌಸ್‌ ತೆಗೆಯಬೇಕು. ಕಿಟ್‌ನಲ್ಲಿ 12 ಉಪಕರಣಗಳಿರುತ್ತವೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT