ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ: ಗಾಜಿನ ಮನೆ ಬಳಿ ಬೆಣ್ಣೆ ದೋಸೆ ಘಮ

ಎಂ.ಬಿ.ಎ. ಮೈದಾನ, ಗ್ಲಾಸ್ ಹೌಸ್ ಮುಂಭಾಗದಲ್ಲಿ ದೋಸೆ ಉತ್ಸವ
Published 24 ಡಿಸೆಂಬರ್ 2023, 7:37 IST
Last Updated 24 ಡಿಸೆಂಬರ್ 2023, 7:37 IST
ಅಕ್ಷರ ಗಾತ್ರ

ದಾವಣಗೆರೆ: ‘ದಾವಣಗೆರೆ ಬೆಣ್ಣೆ ದೋಸೆಯನ್ನು ರಾಷ್ಟ್ರಮಟ್ಟದಲ್ಲಿ ಜನಪ್ರಿಯಗೊಳಿಸಲು ಹಾಗೂ ದೋಸೆಯ ಸಾಂಪ್ರದಾಯಿಕತೆ ಉಳಿಸುವ ಮೂಲಕ ಗುಣಮಟ್ಟ ಕಾಪಾಡಿಕೊಂಡು ಬ್ರಾಂಡಿಂಗ್ ಕಲ್ಪಿಸುವುದು ಈ ದೋಸೆ ಉತ್ಸವದ ಮುಖ್ಯ ಉದ್ದೇಶವಾಗಿದೆ’ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ. ತಿಳಿಸಿದರು.

ನಗರದ ಎಂ.ಬಿ.ಎ. ಮೈದಾನ ಹಾಗೂ ಗ್ಲಾಸ್ ಹೌಸ್ ಮುಂಭಾಗದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿರುವ ದೋಸೆ ಉತ್ಸವಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ದಾವಣಗೆರೆ ಬೆಣ್ಣೆ ದೋಸೆ ಬಹಳ ಪ್ರಸಿದ್ಧವಾಗಿದ್ದು, ರಾಷ್ಟ್ರೀಯಮಟ್ಟದಲ್ಲಿ ದೋಸೆಯನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಡಿಸೆಂಬರ್ 25ರ ವರೆಗೆ ದೋಸೆ ಉತ್ಸವ ಏರ್ಪಡಿಸಲಾಗಿದೆ. ಕಳೆದ 4 ದಶಕಗಳಿಂದ ಬೆಣ್ಣೆ ದೋಸೆ ಮಾರಾಟ ಮಾಡುತ್ತಿರುವ ಅಂಗಡಿ ಮಾಲೀಕರ ಮುಖಾಂತರ ಸಾರ್ವಜನಿಕರಿಗೆ ಗುಣಮಟ್ಟದ ಬೆಣ್ಣೆ ದೋಸೆಯನ್ನು ತಲುಪಿಸುವಲ್ಲಿ ಜಿಲ್ಲಾಡಳಿತ ಸಫಲವಾಗಿದೆ’ ಎಂದರು.

‘ನಗರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಕಾರ್ಯಕ್ರಮ ನಡೆಯುತ್ತಿದ್ದು, ಬಂದಂತಹ ಜನರಿಗೆ ಬೆಣ್ಣೆ ದೋಸೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಗರಿಗರಿ ಬೆಣ್ಣೆ ದೋಸೆಯನ್ನು ಸವಿದು ಆನಂದಿಸಬಹುದಾಗಿದೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಕುಮಾರ್ ಎಂ. ಸಂತೋಷ್, ತಹಶೀಲ್ದಾರ್ ಡಾ.ಅಶ್ವತ್ ಎಂ.ಬಿ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಸ್.ಷಣ್ಮುಖಪ್ಪ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಶಿದ್ರಾಮ್ ಮಾರಿಹಾಳ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಾಘವೇಂದ್ರ ಪ್ರಸಾದ್ ಉಪಸ್ಥಿತರಿದ್ದರು.

ದೋಸೆ ಉತ್ಸವದಲ್ಲಿ ಬೆಣ್ಣೆ ದೋಸೆ ಸವಿಯುತ್ತಿರುವ ಜನ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದೋಸೆ ಉತ್ಸವದಲ್ಲಿ ಬೆಣ್ಣೆ ದೋಸೆ ಸವಿಯುತ್ತಿರುವ ಜನ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್

ದೋಸೆ ಉತ್ಸವ; ಮಿಶ್ರ ಪ್ರತಿಕ್ರಿಯೆ

ದೋಸೆ ಉತ್ಸವದಲ್ಲಿ ಸಿಂಗಲ್‌ ಬೆಣ್ಣೆದೋಸೆಗೆ ₹ 60 ಹಾಗೂ ಡಬಲ್‌ಗೆ ₹ 120 ದರ ನಿಗದಿ ಮಾಡಲಾಗಿದೆ. ಮಹಾ ಅಧಿವೇಶನ ನಡೆಯುತ್ತಿರುವ ಎಂ.ಬಿ.ಎ. ಮೈದಾನದಲ್ಲಿ ಬೇರೆ ಜಿಲ್ಲೆಗಳಿಂದ ಬಂದಿದ್ದ ಜನರು ಹೆಚ್ಚಾಗಿ ಬೆಣ್ಣೆ ದೋಸೆ ಸವಿಯುತ್ತಿರುವುದು ಕಂಡು ಬಂತು. ಅದರಲ್ಲೂ ‘ಒರಿಜಿನಲ್ ಹಳೇ ಸಾಗರ್ ಬೆಣ್ಣೆ ದೋಸೆ ಹೋಟೆಲ್‌’ನಲ್ಲಿ ಉತ್ತಮ ವ್ಯಾಪಾರ ನಡೆಯಿತು. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದು ಹೋಟೆಲ್ ಮಾಲೀಕ ವಿಜಯಕುಮಾರ್ ಬಿ.ಎಂ. ‘ಪ್ರಜಾವಾಣಿ’ಗೆ ತಿಳಿಸಿದರು. ‘ಮಹಾ ಅಧಿವೇಶನಕ್ಕೆ ಬಂದವರಿಗೆ ಊಟದ ವ್ಯವಸ್ಥೆ ಮಾಡಿರುವುದರಿಂದ ವ್ಯಾಪಾರ ಅಷ್ಟೇನು ಜೋರಾಗಿಲ್ಲ. ಹೋಟೆಲ್‌ನಲ್ಲಿಯೇ ಇದಕ್ಕಿಂತ ಹೆಚ್ಚಿನ ವ್ಯಾಪಾರ ಆಗುತ್ತಿತ್ತು. 2 ದಿನಕ್ಕೆ ಮಳಿಗೆ ಬಾಡಿಗೆಯಾಗಿ ₹13000 ನೀಡಿರುವುದು ಕೂಡ ದುಬಾರಿಯಾಗಿದೆ. ಭಾನುವಾರ ಉತ್ತಮ ವ್ಯಾಪಾರದ ನಿರೀಕ್ಷೆಯಲ್ಲಿದ್ದೇವೆ’ ಎಂದು ‘ಶ್ರೀ ಮಂಜುನಾಥ ಬೆಣ್ಣೆ ದೋಸೆ ಹೋಟೆಲ್’ ಮಾಲೀಕ ಮಹೇಶ್ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT