ಸೋಮವಾರ, ಸೆಪ್ಟೆಂಬರ್ 20, 2021
24 °C
ನಗರದಲ್ಲಿ ಒಣ ಕಸ – ಹಸಿ ಕಸ ವಿಂಗಡಣೆಗೆ ಸಿಗದ ಸ್ಪಂದನ

ದಾವಣಗೆರೆ: ಕಸ ವಿಂಗಡಣೆ ಮಾಡದಿದ್ದರೆ ಬೀಳಲಿದೆ ದಂಡ

ಸ್ಮಿತಾ ಶಿರೂರ, ಚಿತ್ರಗಳು: ಸತೀಶ ಬಡಿಗೇರ್‌ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ನಗರದಲ್ಲಿ 2021ರ ಮಾರ್ಚ್‌ನಿಂದ ಹಸಿ ಕಸ, ಒಣ ಕಸ ವಿಂಗಡಣೆ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ. ಪ್ರತಿದಿನ ಕಸ ಸಂಗ್ರಹಿಸುವ ಗಾಡಿಗಳಲ್ಲಿ ಘೋಷಣೆಗಳು ಮೊಳಗುತ್ತಲೇ ಇವೆ. ಆದರೆ, ಬಹುತೇಕ ಜನ ಈ ಆದೇಶವನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಎಲ್ಲ ಕಸವನ್ನೂ ಒಟ್ಟಿಗೆ ಸೇರಿಸಿ ಕೊಡುವವರೇ ಹೆಚ್ಚಿದ್ದಾರೆ. ಪೌರ ಕಾರ್ಮಿಕರೂ ಸುಮ್ಮನೆ ಅದನ್ನು ಗಾಡಿಗಳಲ್ಲಿ ಸುರಿದುಕೊಂಡು ಹೋಗುತ್ತಿದ್ದಾರೆ. ಕೆಲವು ಪ್ರಜ್ಞಾವಂತ ನಾಗರಿಕರು ಬೇರ್ಪಡಿಸಿ ಕೊಡುವುದನ್ನು ಮುಂದುವರಿಸಿದ್ದಾರೆ. ಆದರೆ, ಒಯ್ಯುವವರು ಅದನ್ನು ಮತ್ತೆ ಎಲ್ಲ ಕಸದೊಂದಿಗೆ ಸೇರಿಸಿ ಕೊಂಡೊಯ್ಯುತ್ತಿರುವುದು ಕಂಡು ಬರುತ್ತಿದೆ.

‘ಜನರಿಂದ ಸಂಗ್ರಹಿಸುವಾಗಲೇ ಹಸಿ ಕಸ, ಒಣ ಕಸ ಬೇರ್ಪಡಿಸಿದರೆ ಮಾತ್ರ ಕಸ ನಿರ್ವಹಣೆ ಸರಿಯಾಗಿ ಮಾಡಲು ಸಾಧ್ಯ. ನಾವು ಅಧಿಕಾರದಲ್ಲಿ ಇದ್ದಾಗ ಕಸ ಸಂಗ್ರಹಕ್ಕೆ ಗಾಡಿಗಳು ಬಹಳ ಕಡಿಮೆ ಇದ್ದವು. ಹೀಗಾಗಿ ಕಸ ನಿರ್ವಹಣೆ ಸಾಧ್ಯವಾಗುತ್ತಿರಲಿಲ್ಲ. ಈಗ ಪ್ರತಿ ವಾರ್ಡ್‌ಗೆ 3–4ರಷ್ಟು ಗಾಡಿಗಳು ಲಭ್ಯವಿವೆ. ಆದರೂ ಕಸ ವಿಂಗಡಣೆ ಆಗುತ್ತಿಲ್ಲ ಎಂದರೆ ಇದಕ್ಕೆ ಸೂಕ್ತ ಯೋಜನೆ ಹಾಗೂ ಇಚ್ಛಾಶಕ್ತಿಯ ಕೊರತೆಯಷ್ಟೇ ಕಾರಣ’ ಎಂದು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಶಿವನಳ್ಳಿ ರಮೇಶ್‌ ಅಭಿಪ್ರಾಯಪಟ್ಟರು.

‘ವಾರಕ್ಕೊಂದು ದಿನ ಮಾತ್ರ ಒಣ ಕಸ ಒಯ್ಯುವುದು ಸರಿಯಲ್ಲ. ದಿನವೂ ಬರುವ ಗಾಡಿಯಲ್ಲೇ ಎರಡು ಭಾಗ ಮಾಡಿ, ಒಂದರಲ್ಲಿ ಒಣ, ಇನ್ನೊಂದರಲ್ಲಿ ಹಸಿ ಕಸ ಹಾಕಿಕೊಳ್ಳುವಂತೆ ಮಾಡಬೇಕು. ಎರಡೂ ಸೇರಿಸಿಕೊಟ್ಟರೆ ಒಯ್ಯುವುದಿಲ್ಲ ಎಂದು ನಿಷ್ಠುರವಾಗಿ ಹೇಳಬೇಕು’ ಎಂದು ಅವರು ಸಲಹೆ ನೀಡಿದರು.

‘ಪ್ರತಿ ದಿನವೂ ಎಲ್ಲ ವಾರ್ಡ್‌ಗಳಲ್ಲೂ ಘೋಷಣೆ ಮಾಡಿಸುತ್ತಲೇ ಇದ್ದೇವೆ. ಆದರೂ ಕಸ ವಿಂಗಡಣೆಗೆ ಜನರಿಂದ ನಿರೀಕ್ಷಿತ ಸ್ಪಂದನ ಸಿಗುತ್ತಿಲ್ಲ. 2ನೇ ಲಾಕ್‌ಡೌನ್‌ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕರು ಹಾಗೂ ಪೌರಕಾರ್ಮಿಕರಿಗೆ ಕಾರ್ಯದೊತ್ತಡ ಹೆಚ್ಚಾದ ಕಾರಣ ಕಸ ವಿಂಗಡಣೆಯ ಕಡೆ ಗಮನ ಕೊಡಲು ಸಾಧ್ಯವಾಗಲಿಲ್ಲ. ಹೀಗಾಗಿ ಬಹುತೇಕ ಈಗ ಈ ಯೋಜನೆಯ ಪ್ರಗತಿ ಶೂನ್ಯಕ್ಕೆ ಬಂದು ನಿಂತಿದೆ’ ಎಂದು ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (ಪರಿಸರ) ಜಗದೀಶ್‌ ಎಸ್.ಆರ್‌. ತಿಳಿಸಿದರು.

‘ಈಗ ಕೋವಿಡ್‌ ಪ್ರಕರಣಗಳ ಸಂಖ್ಯೆ ಕಡಿಮೆ ಇರುವುದರಿಂದ ಪ್ರತಿ ವಾರ್ಡ್‌ಗಳಲ್ಲಿ ಶೇ 100ರಷ್ಟು ಕಸ ವಿಂಗಡಣೆ ಆಗುವಂತೆ ಕಡ್ಡಾಯಗೊಳಿಸುವ ಕಾರ್ಯಾಚರಣೆ ಮತ್ತೆ ಆರಂಭಿಸುತ್ತೇವೆ. ಬರುವ ಡಿಸೆಂಬರ್‌ ತಿಂಗಳಿನೊಳಗೆ ಕೋರ್ಟ್‌ ಆದೇಶವನ್ನು ಸಂಪೂರ್ಣ ಜಾರಿಗೆ ತರಲಾಗುವುದು. ಕಸ ವಿಂಗಡಣೆ ಮಾಡದವರಿಗೆ ಆರಂಭದಲ್ಲಿ 1, 2 ನೋಟಿಸ್‌ ನೀಡಲಾಗುತ್ತದೆ. ನಂತರ ದಂಡ ವಿಧಿಸಲಾಗುತ್ತದೆ. ಮನೆ ಕಸ ವಿಂಗಡಣೆ ಮಾಡದವರಿಗೆ ₹ 100ರಿಂದ ₹ 150, ಬೃಹತ್‌ ಮೊತ್ತದ ಕಸ ಉತ್ಪಾದಿಸುವವರು ವಿಂಗಡಣೆ ಮಾಡದಿದ್ದರೆ ₹ 1000ದಿಂದ‌ ₹ 2000ದವರೆಗೆ ದಂಡ ವಿಧಿಸಲು ಅವಕಾಶವಿದೆ’ ಎಂದು ಅವರು ವಿವರಿಸಿದರು.

‘ಒಣ ಕಸವನ್ನು 15 ದಿನಗಳವರೆಗೂ ಸಂಗ್ರಹಿಸಿಡಲು ಸಮಸ್ಯೆ ಇಲ್ಲ. ಈಗ ವಾರಕ್ಕೆ ಒಂದು ದಿನ ಮಾತ್ರ ಒಣ ಕಸ ಸಂಗ್ರಹಿಸಲಾಗುತ್ತಿದೆ. ಜನರಿಂದ ಆಕ್ಷೇಪ ಬಂದಿರುವುದರಿಂದ ವಾರಕ್ಕೆರಡು ದಿನ ಒಣ ಕಸ ಸಂಗ್ರಹಕ್ಕೆ ನಿಗದಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಪ್ರತಿ ದಿನ ಒಣ ಹಾಗೂ ಹಸಿ ಕಸ ವಿಂಗಡಿಸಿ ಒಯ್ಯುವುದು ಸಾಧ್ಯವಿಲ್ಲ. ಕಸ ವಿಲೇವಾರಿ ಘಟಕ ಇರುವ ಆವರಗೊಳ್ಳವು ಇಲ್ಲಿಂದ 12 ಕಿ.ಮೀಗಳಷ್ಟು ದೂರವಿರುವುದರಿಂದ ವೆಚ್ಚ ಹೆಚ್ಚಳವಾಗುತ್ತದೆ’ ಎಂದು ಅವರು ವಿವರಿಸಿದರು.

ಪ್ಲಾಸ್ಟಿಕ್‌ ಮರುಬಳಕೆ ಆಗುತ್ತಿಲ್ಲ: ನಗರದಲ್ಲಿ ಪ್ಲಾಸ್ಟಿಕ್‌ ಕಸ ಬೇರ್ಪಡಿಸಿ ಮರುಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ. ಹಸಿ ಕಸ ಸೇರಿದಾಗ ಪ್ಲಾಸ್ಟಿಕ್‌ಗೆ ಅಂಟಿಕೊಂಡು ಬೇರ್ಪಡಿಸಲು ಸಾಧ್ಯವಾಗುವುದಿಲ್ಲ. ಇಂಥ ಪ್ಲಾಸ್ಟಿಕ್‌ ಅನ್ನು ಸಿಮೆಂಟ್‌ ಕಂಪನಿಗಳು ಖರೀದಿಸುವುದಿಲ್ಲ. ಆವರಗೊಳ್ಳದಲ್ಲಿ ಕಸ ವಿಲೇವಾರಿಗೆ 33 ಎಕರೆ ಜಾಗವಿದ್ದು, ಇದರಲ್ಲಿ ಈಗಾಗಲೇ 16 ಎಕರೆ ಜಾಗ ಬೇರ್ಪಡಿಸಲಾಗದ ಕಸ ತುಂಬಿದೆ. 40 ಅಡಿಗಳಷ್ಟು ಎತ್ತರದ ತ್ಯಾಜ್ಯ ಗುಡ್ಡ ನಿರ್ಮಾಣವಾಗಿದೆ. ಕಸದ ವೈಜ್ಞಾನಿಕ ವಿಲೇವಾರಿಗಾಗಿ ₹ 21 ಕೋಟಿ ಮೊತ್ತದ ‘ಇಂಟಿಗ್ರೇಟೆಡ್‌ ವೇಸ್ಟ್‌ ಮ್ಯಾನೇಜ್‌ಮೆಂಟ್‌’ ಯೋಜನೆಗೆ ಟೆಂಡರ್‌ ಆಗಿದೆ. ಸೆಪ್ಟೆಂಬರ್‌ ಕೊನೆಯ ಹೊತ್ತಿಗೆ ಯಾವ ಏಜೆನ್ಸಿ ಎಂಬುದು ಅಂತಿಮವಾಗಲಿದೆ. ಇದು ಬಂದರೆ ದಿನಕ್ಕೆ 200 ಟನ್‌ ಕಸ ವಿಲೇವಾರಿ ಸಾಧ್ಯ’ ಎಂದು ಜಗದೀಶ್‌ ಎಸ್.ಆರ್‌. ತಿಳಿಸಿದರು.

‘ಎಂ.ಸಿ.ಸಿ. ‘ಬಿ’ ಬ್ಲಾಕ್‌ ಹಾಗೂ ಸಿದ್ದವೀರಪ್ಪ ಬಡಾವಣೆಗಳಲ್ಲಿ ಶೇ 80ರಷ್ಟು ಕಸ ವಿಂಗಡಣೆ ಸರಿಯಾಗಿ ಆಗುತ್ತಿದೆ. ನಾವು ಮನೆಮನೆಗೆ ಹೋಗಿ ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಎಲ್ಲ ಕಸ ಸೇರಿಸಿ ಕೊಟ್ಟರೆ ತೆಗೆದುಕೊಳ್ಳುತ್ತಿಲ್ಲ. ಕೆಲವು ವಯೋವೃದ್ಧರಿಗೆ ಮಾತ್ರ ಕಸ ವಿಂಗಡಣೆ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನೂ ಕೆಲವರು ಎಷ್ಟು ಹೇಳಿದರೂ ಕೇಳುತ್ತಿಲ್ಲ. ಅಂಥವರಿಗೆ ದಂಡ ವಿಧಿಸಲು ಅವಕಾಶವಿದೆ’ ಎಂದು ಆರೋಗ್ಯ ನಿರೀಕ್ಷಕ ಮಹಾಂತೇಶ್‌ ಕೆ.ಆರ್‌. ತಿಳಿಸಿದರು.

ಬಡಾವಣೆಯಲ್ಲೇ ತ್ಯಾಜ್ಯ ನಿರ್ವಹಣೆ ಸಾಧ್ಯ


ಸ್ತ್ರೀರೋಗ ತಜ್ಞರಾದ ಡಾ. ಶಾಂತಾ ಭಟ್‌

ಎಸ್‌.ಎಸ್‌. ಬಡಾವಣೆಯಲ್ಲಿ ಹೆರಿಗೆ ಮತ್ತು ಸ್ತ್ರೀರೋಗ ತಜ್ಞರಾದ ಡಾ. ಶಾಂತಾ ಭಟ್‌ ಅವರ ನೇತೃತ್ವದಲ್ಲಿ 2014ರಿಂದ ‘ಕಸ–ರಸ ಅಭಿಯಾನ’ ನಡೆದಿದೆ. ಈ ಅಭಿಯಾನದಲ್ಲಿ ಹಸಿ ಕಸ, ಒಣ ಕಸ ವಿಂಗಡಣೆ, ಕಾಂಪೋಸ್ಟ್ ತಯಾರಿಕೆ ಬಗ್ಗೆ ತರಬೇತಿ ನೀಡಲಾಗಿದೆ. ನಗರದಾದ್ಯಂತ ವಿವಿಧ ಕಾರ್ಯಕ್ರಮಗಳಲ್ಲಿ ಇವರ ತಂಡ ತರಬೇತಿ ನೀಡಿದೆ.

‘ನಮ್ಮ ಬಡಾವಣೆಯ 350 ಮನೆಗಳಿಂದ ಹಸಿ ಕಸ ಸಂಗ್ರಹಿಸಿ ಖಾಲಿ ಸೈಟ್‌ನಲ್ಲಿ ತಿಂಗಳಿಗೆ 1 ಟನ್‌ ವರ್ಮಿ ಕಾಂಪೋಸ್ಟ್‌ ತಯಾರಿಸಿ ಯಶಸ್ವಿಯಾಗಿದ್ದೇವೆ. ಇದನ್ನು ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು, ಪರಿಸರ ಎಂಜಿನಿಯರ್‌ ಬಂದು ನೋಡಿದ್ದಾರೆ. ಇದೇ ಬಡಾವಣೆಯಲ್ಲಿ ಒಂದು ನಿರ್ದಿಷ್ಟ ಜಾಗವನ್ನು ಗುರುತಿಸಿ ಕೊಡಿ. ಅಲ್ಲಿ ಈ ಬಡಾವಣೆಯ ತ್ಯಾಜ್ಯ ನಿರ್ವಹಣೆ ಮಾಡಿ ತೋರಿಸುತ್ತೇವೆ ಎಂದು ಮನವಿ ಮಾಡಿದ್ದೆವು. ಆದರೆ ಸೂಕ್ತ ಸ್ಪಂದನ ಸಿಗಲಿಲ್ಲ’ ಎಂದು ಡಾ. ಶಾಂತಾ ಭಟ್‌ ತಿಳಿಸಿದರು.

‘ಜನರಿಗೆ ಕಸ ವಿಂಗಡಣೆಯ ಕೊನೆಯ ಹಂತದವರೆಗೂ ಪ್ರತ್ಯಕ್ಷವಾಗಿ ಒಂದು ಮಾದರಿಯನ್ನು ತೋರಿಸಬೇಕಾಗುತ್ತದೆ. ಆಗಲೇ ಅವರೂ ಸ್ಪಂದಿಸುತ್ತಾರೆ. ಹೊಸ ದಾವಣಗೆರೆ ಇರಲಿ, ಹಳೇ ದಾವಣಗೆರೆಯೇ ಇರಲಿ... ಪ್ರತಿಯೊಬ್ಬರೂ ಕಸ ವಿಂಗಡಣೆ ಮಾಡಲು ಯಾವುದೇ ಸಮಸ್ಯೆ ಇಲ್ಲ. ಎಲ್ಲರ ಸ್ಪಂದನ ಸಿಕ್ಕೇ ಸಿಗುತ್ತದೆ. ಈಗಲೂ ನಮ್ಮ ಬಡಾವಣೆಯಲ್ಲಿ ತರಬೇತಿ ಪಡೆದ ಸ್ವಯಂಸೇವಕರು ಇದ್ದಾರೆ. ಪಾಲಿಕೆಯ ಸಹಯೋಗ ಲಭಿಸಿದಲ್ಲಿ ಖಂಡಿತ ಇಂಥ ಮಾದರಿ ತಯಾರಿಸಿ ಜನರಿಗೆ ತೋರಿಸಿಕೊಡಲು ಸಿದ್ಧ’ ಎಂದು ಅವರು ಹೇಳಿದರು.

ಪಾಲಿಕೆ ಸದಸ್ಯರು ಗಮನಿಸಲಿ


ಡಾ.ಬಿ.ಇ. ರಂಗಸ್ವಾಮಿ

ಕಸ ವಿಂಗಡಣೆಯ ಹೆಚ್ಚಿನ ಜವಾಬ್ದಾರಿ ಇರುವುದು ಜನರ ಮೇಲೆಯೇ. ನಿತ್ಯ ಊಟ–ತಿಂಡಿ ಮಾಡುವಂತೆ ಒಣ–ಹಸಿ ಕಸ ವಿಂಗಡಿಸುವುದನ್ನು ರೂಢಿ ಮಾಡಿಕೊಳ್ಳಬೇಕು. ಜಾಗೃತಿ ಕಾರ್ಯವನ್ನೂ ಆಡಳಿತ ನಿರಂತರವಾಗಿ ಮಾಡಬೇಕಾಗುತ್ತದೆ. ಎಲ್ಲ ಕಸ ಸೇರಿಸಿ ಕೊಟ್ಟರೆ ಒಯ್ಯುವುದಿಲ್ಲ ಎಂದು ಹೇಳಬೇಕು. ಕೆಲವು ದಿನ ಜನ ಜಗಳವಾಡಬಹುದು, ಕಸ ಒಯ್ದು ಜಾಗ ಸಿಕ್ಕಲ್ಲಿ ಒಗೆಯಬಹುದು. ಆದರೆ, ನಿಧಾನಕ್ಕೆ ನಿಯಮ ಪಾಲಿಸುತ್ತಾರೆ. ಪಾಲಿಕೆ ಸದಸ್ಯರೂ ತಮ್ಮ ವಾರ್ಡ್‌ಗಳಲ್ಲಿ ಇದನ್ನು ಕಡ್ಡಾಯವಾಗಿ ಜಾರಿಯಾಗುವಂತೆ ಮಾಡಬೇಕು. ಶಾಲಾ–ಕಾಲೇಜುಗಳಲ್ಲಿ ಮಕ್ಕಳಿಗೆ ಇದರ ಮಹತ್ವ ತಿಳಿಸಿ ಹೇಳಬೇಕು.

– ಡಾ.ಬಿ.ಇ. ರಂಗಸ್ವಾಮಿ, ಎಸ್‌.ಎಸ್‌. ಲೇಔಟ್‌ ‘ಬಿ’ ಬ್ಲಾಕ್‌
(ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ ಪರೀಕ್ಷಾಂಗ ಕುಲಸಚಿವರು).

 

ಆದೇಶ ಪಾಲಿಸುತ್ತಿಲ್ಲ


ಶಿವನಗೌಡ ಪಾಟೀಲ್‌

ಕಸ ವಿಂಗಡಿಸಿ ನೀಡುವಂತೆ ಪಾಲಿಕೆ ವತಿಯಿಂದ ನಿತ್ಯವೂ ಘೋಷಣೆ ಮಾಡುತ್ತಿದ್ದರೂ ಹಳೇ ದಾವಣಗೆರೆಯಲ್ಲಿ ಆದೇಶಕ್ಕೆ ಬೆಲೆಯೇ ಇಲ್ಲದಂತಾಗಿದೆ. ಸುತ್ತಲಿನ ಪರಿಸರ ಸ್ವಚ್ಛವಾಗಿರಬೇಕೆಂದರೆ ಕಸ ವಿಂಗಡಣೆಯ ನಿಯಮಗಳನ್ನು ಜನ ಪಾಲಿಸಬೇಕಿದೆ.

– ಶಿವನಗೌಡ ಪಾಟೀಲ್‌, ಮಹಾನಗರ ಪಾಲಿಕೆ ನಾಮನಿರ್ದೇಶಿತ ಸದಸ್ಯ

 

 

 

 

ಪ್ರತಿದಿನವೂ ಪ್ರತ್ಯೇಕವಾಗಿ ಒಯ್ಯಲಿ


ಎಚ್‌.ವಿ. ಪ್ರಭುಲಿಂಗಪ್ಪ

ನಮ್ಮ ಬಡಾವಣೆಯಲ್ಲಂತೂ ಕಸ ವಿಂಗಡಣೆ ಆಗುತ್ತಿಲ್ಲ. ಕಸ ಸಂಗ್ರಹಕ್ಕೆ ಬರುವವರೇ ಎರಡು ಬುಟ್ಟಿ ಹಿಡಿದು ಬಂದರೆ ಬೇರೆ ಬೇರೆ ಮಾಡಿ ಕೊಡಬಹುದು. ಆದರೆ, ಅವರೇ ಒಂದು ಗಾಡಿ ತೆಗೆದುಕೊಂಡು ಬರುತ್ತಾರೆ. ಹೀಗಾಗಿ ಎಲ್ಲರೂ ದಿನದ ಕಸವನ್ನೆಲ್ಲ ಸೇರಿಸಿ ಕೊಡುತ್ತಾರೆ. ಎಷ್ಟೋ ಜನ ದಿನವೂ ಬೆಳಿಗ್ಗೆಯೇ ಕೆಲಸಕ್ಕೆ ಹೋಗುವುದರಿಂದ ಕಸ ಸೂಕ್ತವಾಗಿ ಗಾಡಿಗಳಿಗೆ ಹಾಕಲೂ ಇಲ್ಲಿ ಸಮಸ್ಯೆ ಆಗುತ್ತಿದೆ.

– ಎಚ್‌.ವಿ. ಪ್ರಭುಲಿಂಗಪ್ಪ, ನಾಗರಿಕರು, ಭಾರತ್‌ ಕಾಲೊನಿ‌‌

 

 

ಮುಖ್ಯ ರಸ್ತೆಗಳಲ್ಲಷ್ಟೇ ಬರುವ ಗಾಡಿಗಳು


ಕೊಟ್ರಮ್ಮ

ಹಳೇ ದಾವಣಗೆರೆಯ ಹಲವು ಬಡಾವಣೆಗಳಲ್ಲಿ ಹಾಗೂ ಕೊಳಚೆ ಪ್ರದೇಶ
ಗಳಲ್ಲಿ ಮುಖ್ಯರಸ್ತೆಗಳಲ್ಲಷ್ಟೇ ಕಸ ಸಂಗ್ರಹದ ಗಾಡಿಗಳು ಬರುತ್ತಿವೆ. ಒಳಗಿನ ರಸ್ತೆಗಳ ಜನ ಏನು ಮಾಡುವುದು? ಹೀಗಾಗಿ ಜನ ಕಂಡ ಕಂಡಲ್ಲಿ ಕಸ ಎಸೆಯುವುದು ಮುಂದುವರಿದಿದೆ. ಗಾಡಿ ಕಳುಹಿಸಿದರಷ್ಟೇ ಆಗಿಲ್ಲ, ಎಲ್ಲ ಜನರೂ ಕಸ ಅದರಲ್ಲೇ ಹಾಕುವಂತೆ ಪಾಲಿಕೆಯವರು ನಿಯಮಿತ ಪರಿಶೀಲನೆ ನಡೆಸಬೇಕು. ಹಸಿ ಕಸಿ, ಒಣ ಕಸ ಬೇರ್ಪಡಿಸುವ ಜಾಗೃತಿ ಫಲಕಗಳನ್ನು ಕನ್ನಡದಲ್ಲೇ ಬರೆದು ಅಲ್ಲಲ್ಲಿ ಹಾಕಬೇಕು.

– ಕೊಟ್ರಮ್ಮ, ದೇವರಾಜ ಅರಸು ಬಡಾವಣೆ ನಿವಾಸಿ

 

ನಗರದ ಕಸ ನಿರ್ವಹಣೆಯ ಅಂಕಿ–ಅಂಶ

ನಗರದಲ್ಲಿ ಉತ್ಪತ್ತಿಯಾಗುವ ಒಟ್ಟು ಕಸ:170 ಟನ್‌

ಹಸಿ ಕಸ (ಅಂದಾಜು): 90 ಟನ್‌

ಒಣ ಕಸ (ಅಂದಾಜು): 80 ಟನ್‌

ಕಸ ಸಂಗ್ರಹ ಮಾಡುವ ಸಿಬ್ಬಂದಿ: 152

ಕಸ ಸಂಗ್ರಹದ ವಾರ್ಷಿಕ ವೆಚ್ಚ: ₹ 17 ಕೋಟಿ

ಕಸ ಸಂಗ್ರಹಕ್ಕಾಗಿ ಇರುವ ಅಟೊ ಟಿಪ್ಪರ್‌ಗಳು: 78

ಹೊಸದಾಗಿ ಬಂದಿರುವ ವಾಹನಗಳು: 24

ಕಾಂಪ್ಯಾಕ್ಟರ್‌: 9

ಟ್ರ್ಯಾಕ್ಟರ್‌: 20

ಜೆಸಿಬಿ: 5

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.