ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12ರಿಂದ ದಾವಣಗೆರೆ ವಿವಿ ಪದವಿ ತರಗತಿ ಆನ್‍ಲೈನ್ ಪಾಠ

Last Updated 7 ಮೇ 2021, 4:15 IST
ಅಕ್ಷರ ಗಾತ್ರ

ದಾವಣಗೆರೆ: ಕೋವಿಡ್-19ರಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹಿನ್ನಡೆ ಆಗದಂತೆ ತಡೆಯುವ ಉದ್ದೇಶದಿಂದ ದಾವಣಗೆರೆ ವಿಶ್ವವಿದ್ಯಾಲಯ ತನ್ನ ವ್ಯಾಪ್ತಿಯ ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ಎಲ್ಲ ಸ್ನಾತಕ ಪದವಿ ತರಗತಿಗಳಿಗೆ ಮೇ 12ರಿಂದ ಆನ್‍ಲೈನ್ ತರಗತಿ ಆರಂಭಿಸಲು ನಿರ್ಧರಿಸಿದೆ.

ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಪದವಿ ಕಾಲೇಜು ಪ್ರಾಚಾರ್ಯರ ಜೊತೆಗಿನ ಆನ್‍ಲೈನ್ ಸಭೆಯ ನಂತರ ಈ ನಿರ್ಧಾರ ಮಾಡಲಾಯಿತು.

ಈಗಾಗಲೇ ಪರೀಕ್ಷೆ ಮುಗಿದು 15 ದಿನಗಳಾಗಿವೆ. ಇನ್ನು ಒಂದು ವಾರ ಮಾಹಿತಿ ನೀಡಿ ಮೇ 12ರಿಂದ ಆನ್‍ಲೈನ್ ತರಗತಿ ಆರಂಭಿಸಲಾಗುತ್ತದೆ. ಅದಕ್ಕೆ ಮುನ್ನ ಪ್ರಾಧ್ಯಾಪಕರೂ ಸಿದ್ಧತೆ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ಪ್ರೊ. ಶರಣಪ್ಪ ವಿ. ಹಲಸೆ ತಿಳಿಸಿದರು.

ಪ್ರಸ್ತುತ ಪದವಿ ಪರೀಕ್ಷೆ ಮುಗಿದಿದೆ. ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ತೊಡಗಿಸಿಕೊಳ್ಳುವುದು ಮುಖ್ಯ. ಅವರಿಗೆ ಆನ್‍ಲೈನ್ ಮೂಲಕ ಮುಂದಿನ ಸೆಮಿಸ್ಟರ್ ಅಂದರೆ ಎರಡು, ನಾಲ್ಕು ಮತ್ತು ಆರನೇ ಸೆಮಿಸ್ಟರ್ ಪಠ್ಯ ಪಾಠಗಳನ್ನು ಆರಂಭಿಸಲಾಗುವುದು. ಇದರಿಂದ ಅವರ ಶೈಕ್ಷಣಿಕ ಭವಿಷ್ಯಕ್ಕೂ ತೊಂದರೆ ಆಗುವುದಿಲ್ಲ. ವಿದ್ಯಾರ್ಥಿಗಳನ್ನು ಶೈಕ್ಷಣಿಕ ವಾತಾವರಣದಲ್ಲಿ ತೊಡಗಿಸಿಕೊಂಡರೆ ಅನಗತ್ಯ ಆತಂಕಕ್ಕೆ ಅವಕಾಶ ಇರುವುದಿಲ್ಲ. ಅಲ್ಲದೆ ವಿದ್ಯಾರ್ಥಿಗಳ ನಿರಂತರ ಮೇಲ್ವಿಚಾರಣೆಗೂ ಸಹಕಾರ ಆಗಲಿದೆ ಎಂದು ಹೇಳಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆನ್‍ಲೈನ್‍ನಲ್ಲಿ ಪಾಠ ಕೇಳುವುದಕ್ಕೆ ತೊಂದರೆಯಾದರೆ ಪಠ್ಯಪೂರಕ ಮಾಹಿತಿಯನ್ನು ಲಭ್ಯವಿರುವ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸಬೇಕು. ಯಾವುದೇ ವಿದ್ಯಾರ್ಥಿಯೂ ಶೈಕ್ಷಣಿಕವಾಗಿ ಹಿನ್ನಡೆ ಅನುಭವಿಸದಂತೆ ಗಮನ ನೀಡಬೇಕು ಎಂದು ಸೂಚಿಸಿದರು.

ದಾವಣಗೆರೆ ವಿಶ್ವವಿದ್ಯಾಲಯದ ಎಲ್ಲ ಪದವಿ ತರಗತಿಗಳ ಪರೀಕ್ಷೆಗಳು ಪೂರ್ಣಗೊಂಡಿವೆ. ಇದರಲ್ಲಿ ಶೇ 90ರಷ್ಟು ವಿಷಯಗಳ ಮೌಲ್ಯಮಾಪನವೂ ನಡೆದಿದೆ. ಸ್ನಾತಕೋತ್ತರ ಪದವಿ ಮತ್ತು ಬಿ.ಎಡ್ ಪದವಿ ಪರೀಕ್ಷೆಗಳು ಬಾಕಿ ಇವೆ. ಅವುಗಳನ್ನು ನಡೆಸುವ ಸಂದರ್ಭದಲ್ಲಿ ಕೋವಿಡ್-19 ಹೆಚ್ಚಾಗಿದ್ದರಿಂದ ಪರೀಕ್ಷೆ ಮುಂದೂಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಸಭೆಯಲ್ಲಿ ಕುಲಸಚಿವರಾದ ಪ್ರೊ. ಗಾಯತ್ರಿ ದೇವರಾಜ್, ಪ್ರೊ. ಎಚ್‌.ಎಸ್‌. ಅನಿತಾ, ಹಣಕಾಸು ಅಧಿಕಾರಿ ಪ್ರಿಯಾಂಕ, ಸಿಂಡಿಕೇಟ್ ಸದಸ್ಯರು, ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ವಿವಿಧ ಕಾಲೇಜುಗಳ ಪ್ರಾಚಾರ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT