ಬುಧವಾರ, ಅಕ್ಟೋಬರ್ 21, 2020
24 °C
ಸಾವಿನ ಪ್ರಮಾಣದಲ್ಲಿ 3ನೇ ಸ್ಥಾನದಲ್ಲಿದ್ದ ದಾವಣಗೆರೆ 12ನೇ ಸ್ಥಾನಕ್ಕೆ ಏರಿಕೆ l ಒಂದು ವಾರದಲ್ಲಿ ಎರಡೇ ಸಾವು

ದಾವಣಗೆರೆ: ತಗ್ಗಿದ ಪತ್ತೆ, ಸಾವು, ಸಕ್ರಿಯ ಪ್ರಕರಣಗಳ ಪ್ರಮಾಣ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೊರೊನಾ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ದಾವಣಗೆರೆ ನಿಟ್ಟುಸಿರು ಬಿಡುವ ಸ್ಥಾನದಲ್ಲಿದೆ. ಸಾವಿನ ಪ್ರಮಾಣ ಒಮ್ಮೆಲೇ ಏರಿ 2 ತಿಂಗಳ ಹಿಂದೆ 3ನೇ ಸ್ಥಾನದಲ್ಲಿದ್ದ ಜಿಲ್ಲೆ ಈಗ 12ನೇ ಸ್ಥಾನಕ್ಕೆ ಬಂದಿದೆ.

ಏಳು ದಿನಗಳಲ್ಲಿ ಬೆಂಗಳೂರು (ಸಕ್ರಿಯ: 54,929– ಸಾವು:222) ಪ್ರಥಮ ಸ್ಥಾನದಲ್ಲಿದ್ದರೆ, ಮೈಸೂರು (7737–86) ಎರಡನೇ ಸ್ಥಾನದಲ್ಲಿದೆ. ದಕ್ಷಿಣ ಕನ್ನಡ (5599–53) ಮೂರನೇ ಸ್ಥಾನ ಪಡೆದಿದೆ. ದಾವಣಗೆರೆಯಲ್ಲಿ 1,489 ಸಕ್ರಿಯ ಪ್ರಕರಣಗಳಿದ್ದು, 20ನೇ ಸ್ಥಾನದಲ್ಲಿದೆ. ಎರಡೇ ಎರಡು ಸಾವು ಉಂಟಾಗಿದ್ದು, ಚಿಕ್ಕಬಳ್ಳಾಪುರ, ರಾಯಚೂರು, ರಾಮನಗರ ಜಿಲ್ಲೆಗಳೊಂದಿಗೆ ಕೊನೇ ಸ್ಥಾನ ಪಡೆದಿದೆ.

‘ಎಲ್ಲಿ ನಮಗೆ ಪಕ್ಕಾ ಪ್ರಕರಣ ಸಿಗುತ್ತದೆ ಎಂದು ಗುರಿ ಇಟ್ಟುಕೊಂಡು ಪತ್ತೆಹಚ್ಚುವ ಕೆಲಸ ಮಾಡತೊಡಗಿದೆವು. ಹಾಗಾಗಿ ಒಂದು ಹಂತದಲ್ಲಿ 300–400ರಷ್ಟು ಬರುತ್ತಿದ್ದ ಪ್ರಕರಣಗಳನ್ನು ಅರ್ಧಕ್ಕಿಂತಲೂ ಕಡಿಮೆ ಮಾಡಿದ್ದೇವೆ. ಈಗಲೂ 2,500ಕ್ಕಿಂತ ಅಧಿಕ ಪರೀಕ್ಷೆಗಳನ್ನು ಮಾಡುತ್ತಿದ್ದೇವೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಸೋಂಕಿತರು ಬೇಗ ಪತ್ತೆಯಾದಾಗ ಅವರಿಗೆ ಅಗತ್ಯ ಇರುವ ಚಿಕಿತ್ಸೆ ಬೇಗ ಸಿಗುವುದರಿಂದ ಸಾವಿನ ಪ್ರಮಾಣ ಕಡಿಮೆಯಾಗಿದೆ. ತಾಲ್ಲೂಕುಗಳಿಂದ ಕೂಡಲೇ ರೆಫರ್‌ ಆಗುತ್ತಿವೆ. ಸಿಜಿ ಆಸ್ಪತ್ರೆ ಸೇರಿ ವಿವಿಧ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ವ್ಯವಸ್ಥೆ ಹೆಚ್ಚು ಮಾಡಿರುವುದು ಕೂಡ ಇದಕ್ಕೆ ಕಾರಣವಾಗಿದೆ’ ಎಂದು ಅವರು ವಿವರಿಸಿದರು.

‘ಈಗಲೂ ಕೊರೊನಾ ಬಗ್ಗೆ ಜನರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಮಾಸ್ಕ್‌ ಧರಿಸುವುದಿಲ್ಲ. ಅನಗತ್ಯ ಓಡಾಟ ಮಾಡುತ್ತಿದ್ದಾರೆ. ಸ್ಯಾನಿಟೈಸ್‌ ಮಾಡುತ್ತಿಲ್ಲ. ಇವೆಲ್ಲವನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಇನ್ನೂ ಕಡಿಮೆಯಾಗಲಿದೆ’ ಎಂಬುದು ಜಿಲ್ಲಾಧಿಕಾರಿಯವರ ವಿಶ್ವಾಸ.

ಎರಡು ತಿಂಗಳ ಹಿಂದಿನಿಂದ ಎರಡು ವಾರಗಳ ಹಿಂದಿನವರೆಗೆ ಜಿಲ್ಲೆಯಲ್ಲಿ ಪ್ರಕರಣಗಳ ಪತ್ತೆ, ಸಕ್ರಿಯ ಪ್ರಕರಣಗಳಲ್ಲದೇ ಸಾವಿನ ಪ್ರಮಾಣವೂ ಹೆಚ್ಚಿತ್ತು. ಜಿಲ್ಲಾಧಿಕಾರಿ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸರಣಿ ಸಭೆಗಳನ್ನು ನಡೆಸಿ ಮಾರ್ಗದರ್ಶನ ಮತ್ತು ವ್ಯವಸ್ಥೆ ಮಾಡಿದರು. ಜಿಲ್ಲಾ ಪಂಚಾಯಿತಿ ಸಿಇಒ ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು ಮೇಲ್ವಿಚಾರಣೆ ಮಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಕಾಂಟ್ಯಾಕ್ಟ್‌ ಟ್ರೇಸಿಂಗ್‌ ಅನ್ನು ಪರಿಣಾಮಕಾರಿಯಾಗಿ ಅಳವಡಿಸಿದರು. ಇದರಿಂದಾಗಿ ಶೀಘ್ರ ಪತ್ತೆ, ತ್ವರಿತ ಚಿಕಿತ್ಸೆ ಸಿಗುವಂತಾಯಿತು ಎನ್ನುತ್ತಾರೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್‌.

ನಗರ ಸ್ಥಳೀಯಾಡಳಿತಗಳು, ಗ್ರಾಮ ಪಂಚಾಯಿತಿಗಳು, ಪೊಲೀಸರು, ಆರೋಗ್ಯ ಕಾರ್ಯಕರ್ತರು ನಿರಂತರವಾಗಿ ಕೆಲಸ ಮಾಡುತ್ತಿರುವುದರಿಂದ ಇದು ಸಾಧ್ಯವಾಗಿದೆ ಎಂದರು.

1057 ಮಂದಿಗೆ ದಂಡ

ಮಾಸ್ಕ್‌ ಧರಿಸದೇ ಓಡಾತ್ತಿದ್ದ 1057 ಮಂದಿಗೆ ಕಳೆದ ಸೋಮವಾರದಿಂದ ಭಾನುವಾರದವರೆಗೆ ದಂಡ ವಿಧಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು