ಮಂಗಳವಾರ, ಮಾರ್ಚ್ 28, 2023
23 °C

‘ಸೋಲು ಸಹಿಸಲಾರದೇ ಅಪಪ್ರಚಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿರುವುದನ್ನು ಸಹಿಸಿಕೊಳ್ಳದೇ ಬಿಜೆಪಿಯವರು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಪರಿಶಿಷ್ಟ ಜಾತಿಯ ವಿರೋಧಿ ಎಂದು ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಆರೋಪಿಸಿದರು.

‘ಮುಖ್ಯಮಂತ್ರಿ ಸ್ವಕ್ಷೇತ್ರದಲ್ಲೇ ಬಿಜೆಪಿ ಅಭ್ಯರ್ಥಿ ಸೋಲು ಕಂಡಿರುವುದು ಬಿಜೆಪಿಗರಿಗೆ ತೀವ್ರ ಮುಖಭಂಗವಾಗಿದೆ.  ಮತದಾರರ ಗಮನ ಬೇರೆಡೆ ಸೆಳೆಯಲು ತಂತ್ರ ಹೂಡಿರುವ ಬಿಜೆಪಿಯವರು ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಅಪಪ್ರಚಾರ ಮಾಡಲು ಹೊರಟಿದ್ದಾರೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಈಶ್ವರಪ್ಪ ಶಿವಮೊಗ್ಗ ಬಿಟ್ಟು ಹೊರಬರಲಿ: ‘ಸಿದ್ದರಾಮಯ್ಯ ಅವರು ರಾಜ್ಯದ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಗೆಲ್ಲುತ್ತಾರೆ. ಆದರೆ ಈಶ್ವರಪ್ಪ ಅವರಿಗೆ ಶಿವಮೊಗ್ಗ ಬಿಟ್ಟರೆ ಬೇರೆ ಗತಿ ಇಲ್ಲದಂತಾಗಿದೆ ಎಂದು ಬಸವರಾಜ್ ಟೀಕಿಸಿದರು.

‘ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ, ವರುಣಾ ಹಾಗೂ ಬಾದಾಮಿ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ. ಆದರೆ ಈಶ್ವರಪ್ಪ ಅವರು ಶಿವಮೊಗ್ಗ ಬಿಟ್ಟು ಬೇರೆ ಕಡೆ ನಿಂತು ಶಕ್ತಿ ಪ್ರದರ್ಶಿಸಲಿ’ ಎಂದು ಸವಾಲು ಹಾಕಿದರು.

‘ಈಶ್ವರಪ್ಪ ಅವರ ಬಾಯಿಗೂ ಮೆದುಳಿಗೂ ಕನೆಕ್ಷನ್ ಇದ್ದಂತಿಲ್ಲ. ಸಿದ್ದರಾಮಯ್ಯನವರನ್ನು ಟೀಕಿಸುವ ಸಲುವಾಗಿಯೇ ಬಿಜೆಪಿ, ಆರ್‌ಎಸ್‍ಎಸ್ ಈಶ್ವರಪ್ಪನವರನ್ನು ನೇಮಿಸಿಕೊಂಡಿರುವಂತಿದೆ’ ಎಂದು ಟೀಕಿಸಿದರು.

ಪಾಲಿಕೆ ಸದಸ್ಯ ಕೆ.ಚಮನ್‌ಸಾಬ್ ಮಾತನಾಡಿ, ‘ಸಿದ್ದರಾಮಯ್ಯ ಅವರು ದಲಿತರ ಆರ್ಥಿಕ ಅಭಿವೃದ್ಧಿಗಾಗಿ ಸರ್ಕಾರ ನಿರ್ವಹಿಸುವ ಅಭಿವೃದ್ಧಿ ಕಾಮಗಾರಿಗಳಲ್ಲಿ ಶೇ 24.10ರಷ್ಟನ್ನು ಪರಿಶಿಷ್ಟ ಜಾತಿಯ ಗುತ್ತಿಗೆದಾರರಿಗೆ ₹ 50 ಲಕ್ಷದವರೆಗೆ ಠೇವಣಿ ಇಲ್ಲದಂತೆ ನೀಡುವಂತೆ ಆದೇಶಿಸಿದ್ದಾರೆ. ಅಭಿವೃದ್ಧಿ ಹಣದಲ್ಲಿ ಶೇ 24.10ರಷ್ಟು ಮೀಸಲು ಇಡುವ ಆದೇಶವನ್ನು ಕೇಂದ್ರ ಸರ್ಕಾರ ಜಾರಿಗೊಳಿಸಲಿ’ ಎಂದು ಸವಾಲು ಹಾಕಿದರು.

ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ. ರಾಜಕುಮಾರ್ ಮಾತನಾಡಿ, ‘ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಪರಿಶಿಷ್ಟ ಜಾತಿಯ ಹಲವು ನಾಯಕರಿಗೆ ಉತ್ತಮ ಖಾತೆಗಳನ್ನು ನೀಡಿದ್ದರು. ಸಾವಿರಾರು ಕೋಟಿಯನ್ನು ಖರ್ಚು ಮಾಡಿ ಪರಿಶಿಷ್ಟರಿಗೆ ಹಲವು ಯೋಜನೆಗಳನ್ನು ರೂಪಿಸಿದ್ದರು. ಬಿಜೆಪಿಯವರು ಬಿಜೆಪಿಯವರು ಏನು ಮಾಡಿದ್ದಾರೆ ಎಂಬುದಕ್ಕೆ ಶ್ವೇತ ಪತ್ರ ಹೊರಡಿಸಲಿ’ ಎಂದು
ಒತ್ತಾಯಿಸಿದರು. ಪಾಲಿಕೆ ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ಎಲ್.ಎಂ.ಎಚ್. ಸಾಗರ್, ಮಹಮದ್ ಜಿಕ್ರಿಯಾ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.