ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಬೇಡಿಕೆಗಳಿಗೆ ಆಗ್ರಹ: ಕಾರ್ಮಿಕ ಸಂಘಟನೆಗಳ ಪ್ರತಿಭಟನೆ

Last Updated 3 ಜುಲೈ 2020, 16:43 IST
ಅಕ್ಷರ ಗಾತ್ರ

ದಾವಣಗೆರೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಜಯದೇವ ವೃತ್ತದಲ್ಲಿ 10ಕ್ಕೂ ಹೆಚ್ಚು ಕಾರ್ಮಿಕ ಕಾರ್ಮಿಕ ಸಂಘಟನೆಗಳ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಲಾಕ್‌ಡೌನ್‌ ಕಾಲಾವಧಿಯ ಪೂರ್ಣವೇತನ ನೀಡಬೇಕು, ಕೆಲಸ ನಿರಾಕರಣೆ ವಿರುದ್ದ ಕ್ರಮ ಕೈಗೊಳ್ಳಬೇಕು, ಕಾರ್ಮಿಕರ ಹಕ್ಕುಗಳ ರಕ್ಷಣೆ, ಕೊರೊನಾ ಫ್ರಂಟ್‌ಲೈನ್‌ ವಾರಿಯರ್ಸ್‌ ಅನ್ನು ಕಾಯಂಗೊಳಿಸಿ ಸಂರಕ್ಷಿಸಬೇಕು ಎಂದು ಆಗ್ರಹಿಸಿದರು.

ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಪ್ರತಿ ಕುಟುಂಬಕ್ಕೂ ತಿಂಗಳಿಗೆ ₹7,500ರಂತೆ 6 ತಿಂಗಳು ನೇರ ನಗದು ವರ್ಗಾವಣೆ, ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕೆಲಸ 200 ದಿನಕ್ಕೆ ಹೆಚ್ಚಿಸಿ ವಲಸೆ ಕಾರ್ಮಿಕರಿಗೆ ಹಾಗೂ ನಗರದ ಬಡವರಿಗೆ ವಿಸ್ತರಿಸಬೇಕು. ಎಲ್ಲಾ ಸ್ಕೀಂ ಕೆಲಸಗಾರರ ಗೌರವಧನ ಬಿಡುಗಡೆ, ಸರ್ಕಾರಿ ನೌಕರರಿಗೆ ಹಾಗೂ ಪಿಂಚಣಿದಾರರಿಗೆ ಡಿ.ಎ ಕಡಿತ ರದ್ದುಪಡಿಸಬೇಕು ಮತ್ತು ಎನ್‌ಪಿಸ್‌ ರದ್ದುಪಡಿಸಿ ನಿಶ್ಚಿತ ಪಿಂಚಣಿಯನ್ನು ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

‘ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಿಸಬೇಕು. ಪ್ರತಿ ವ್ಯಕ್ತಿಗೂ 6 ತಿಂಗಳವರೆಗೆ ತಲಾ 10 ಕೆ.ಜಿ. ಆಹಾರ ಧಾನ್ಯ ನೀಡಬೇಕು. ಕಾರ್ಪೋರೇಟ್‌ ಭೂಮಾಲೀಕರಿಗೆ ಅನುಕೂಲಕರವಾಗಿ ಕೃಷಿ ಆರ್ಥಿಕತೆಯ ಬದಲಾವಣೆಗಾಗಿ ಶಾಸನ ತಿದ್ದುಪಡಿ ಕೈಬಿಡಬೇಕು. ವಿದ್ಯುತ್‌ ತಿದ್ದುಪಡಿ ಮಸೂದೆ ಮತ್ತು ಎಪಿಎಂಸಿ ಕಾಯಿದೆ ತಿದ್ದುಪಡಿ ಕೈಬಿಡಬೇಕು. ಕೋವಿಡ್‌ -19 ಅನ್ನು ವೈದ್ಯಕೀಯ ತುರ್ತು ಪರಿಸ್ಥಿತಿ ಎಂದು ಪರಿಗಣಿಸಿ ಕಾನೂನು ಸುವ್ಯವಸ್ಥೆಯ ವಿಷಯವಾಗಿ ಪರಿಗಣಿಸಬಾರದು’ ಎಂದು ಆಗ್ರಹಿಸಿದರು.

ಕಾರ್ಮಿಕ ಮುಖಂಡರಾದ ಎಚ್‌.ಕೆ.ರಾಮಚಂದ್ರಪ್ಪ, ಕೆ.ಎಚ್. ಆನಂದರಾಜ್, ಮಂಜುನಾಥ ಕೈದಾಳೆ, ಜಬೀನಾ ಖಾನಂ, ಆವರಗೆರೆ ವಾಸು, ಚಂದ್ರಶೇಖರಪ್ಪ, ರಮೇಶ, ಇಂಟಕ್‌ ಸಂಘಟನೆ ಮುಖಂಡರಾದ ಬಿ.ಎಂ.ಕರಿಬಸಯ್ಯ, ಬಿ.ಎಸ್‌. ಚಂದ್ರಶೇಖರಯ್ಯ, ಬಿ.ಎಸ್.ನಾಗರಾಜ ಆಚಾರ್‌, ಎನ್‌ ಮುತ್ತುರಾಜ, ಎಚ್‌.ಎನ್‌. ಗಂಗಾಧರ್‌, ಹುಬ್ಬಳ್ಳಿ ಬಸವರಾಜ ಇದ್ದರು.

ಉದ್ಯೋಗ ಖಾತ್ರಿ ಕಾರ್ಮಿಕರಿಗೆ ಜಾಬ್ ಕಾರ್ಡ್‌ ವಿತರಣೆಗೆ ಆಗ್ರಹ

ಉದ್ಯೋಗ ಖಾತ್ರಿ ಕಾರ್ಮಿಕರಿಗೆ ಕೂಡಲೇ ಸ್ಮಾರ್ಟ್ ಕಾರ್ಡ್ ನೀಡುವಂತೆ ಒತ್ತಾಯಿಸಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾರ್ಮಿಕರ ಸಂಘದ ಸದಸ್ಯರು ಎಐಟಿಯುಸಿ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಖಾಸಗಿ ಏಜೆನ್ಸಿಯವರು ಸಿಬ್ಬಂದಿ ಕೊರತೆಯಿಂದ ಜಿಲ್ಲೆಯಲ್ಲಿ ಸ್ಮಾರ್ಟ್‌ ಕಾರ್ಡ್‌ ನೀಡುವುದು ವಿಳಂಬವಾಗುತ್ತಿದ್ದು, ಕೋವಿಡ್‌–19ನಿಂದಾಗಿ ಆದ ಲಾಕ್‌ಡೌನ್ ₹5 ಸಾವಿರ ಸ್ಮಾರ್ಟ್‌ ಪಡೆದವರಿಗೆ ಮಾತ್ರ ಬಂದಿದ್ದು, ಉಳಿದವರು ಇದರಿಂದ ವಂಚಿತರಾಗಿದ್ದಾರೆ. ಉದ್ಯೋಗ ಖಾತ್ರಿ ಕಾರ್ಮಿಕರ ಜಾಬ್ ಕಾರ್ಡ್‌ಗಳಿಗೆ ಡಿಜಿಟಲ್ ನಂಬರ್‌ಗಳನ್ನು ನಮೂದಿಸಿ ಫಲಾನುಭವಿಗಳಿಗೆ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಸೂಚಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಆವರಗೆರೆ ಚಂದ್ರು, ಗದಿಗೇಶ್ ಪಾಳೇದ್, ರೇಣುಕಮ್ಮ, ನರೇಗಾ ರಂಗನಾಥ, ಪರಶುರಾಮಪ್ಪ, ನಿಂಗಪ್ಪ ನಾಗನೂರು, ಜಗದೀಶ್ ಐಗೂರು ಇದ್ದರು.

ಟೈಲರ್ ಕಲ್ಯಾಣ ಮಂಡಳಿ ಜಾರಿಗೆ ತರಲು ಆಗ್ರಹ

ಟೈಲರ್ ಕಲ್ಯಾಣ ಮಂಡಳಿ ಜಾರಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಟೈಲರ್ಸ್ ಮತ್ತು ಸಹಾಯಕರ ಫೆಡರೇಷನ್‌ನಿಂದ ನಡೆದ ಪ್ರತಿಭಟನೆಯಲ್ಲಿ ಟೈಲರ್ ಕಲ್ಯಾಣ ಮಂಡಳಿ ಜಾರಿಗೆ ತರಬೇಕು. ಟೆಕ್ಸ್‌ಟೈಲ್‌ ಮಿಲ್ಸ್‌, ಗಾರ್ಮೆಂಟ್ಸ್‌, ಬಟ್ಟೆ ಅಂಗಡಿಗಳಿಂದ ಶೇ 1ರಷ್ಟು ಸೆಸ್ ಸಂಗ್ರಹಿಸಿ ಟೈಲರ್‌ಗಳ ಕುಟುಂಬಕ್ಕೆ ನೆರವಾಗಬೇಕು ಎಂದು ಆಗ್ರಹಿಸಿದರು. ಸಿ.ರಮೇಶ್, ಸರೋಜ, ಶಾಂತಕುಮಾರ್, ಮಂಜುಳ ಇದ್ದರು.

ಬಿಸಿಯೂಟ ತಯಾರಕರಿಗೆ ವೇತನ ನೀಡಿ

ಬಿಸಿಯೂಟ ತಯಾರಕರಿಗೆ ಶಾಲೆ ಆರಂಭವಾಗುವವರೆಗೂ ವೇತನ ನೀಡುವಂತೆ ಆಗ್ರಹಿಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ರಾಜ್ಯ ಸಮಿತಿಯಿಂದ ನಡೆದ ಪ್ರತಿಭಟನೆಯಲ್ಲಿ ಶಾಲೆಗಳ ಬಿಸಿಯೂಟ ಪೂರೈಕೆಯನ್ನು ಇಸ್ಕಾನ್ ಮತ್ತಿತರ ಖಾಸಗಿ ಸಂಸ್ಥೆಗಳಿಗೆ ಕೊಡುವ ಹುನ್ನಾರವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT