ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಹಬ್ಬಬಿಟ್ಟು ದುಡಿಯುತ್ತಿದ್ದ ಕಾರ್ಮಿಕರ ದುರ್ಮರಣ

ಒಟಿ ಸಿಗುತ್ತದೆ ಎಂದು ರಜೆ ಮಾಡದೇ ಜೀವ ಕಳೆದುಕೊಂಡ ಶ್ರಮಜೀವಿಗಳು
Last Updated 5 ನವೆಂಬರ್ 2021, 4:46 IST
ಅಕ್ಷರ ಗಾತ್ರ

ದಾವಣಗೆರೆ: ರಜೆಯಲ್ಲಿ ಕೆಲಸ ಮಾಡಿದರೆ ಒಟಿ (ಓವರ್‌ಟೈಮ್‌) ಸಿಗುತ್ತದೆ ಎಂದು ಹಬ್ಬ ಮಾಡಲು ಊರಿಗೂ ಹೋಗದೇ ದುಡಿಮೆಗೆ ನಿಂತ ಜೀವಗಳು ಕಟ್ಟಡದ ಪಿಲ್ಲರ್‌ ಕುಸಿದು ಬಿದ್ದು ಬಾರದ ಲೋಕಕ್ಕೆ ಹೋಗಿವೆ. ಈ ಕಾರ್ಮಿಕರ ಕುಟುಂಬಗಳಿಗೆ ದೀಪಾವಳಿ ಬೆಳಕಿನ ಹಬ್ಬವಾಗದೇ ಬದುಕಿಗೆ ಕತ್ತಲು ಕವಿದು ಕಣ್ಣೀರಿಡುವ ದಿನವಾಗಿ ಮಾರ್ಪಟ್ಟಿದೆ.

ಶಾಮನೂರು ಕುಟುಂಬದ ಎಸ್‌.ಎಸ್‌. ಗಣೇಶ್‌ ಮಾಲೀಕತ್ವದ ಕುಕ್ಕವಾಡ ಶುಗರ್‌ ಫ್ಯಾಕ್ಟರಿ ಬಳಿ ಎಥೆನಾಲ್‌ ಘಟಕ ನಿರ್ಮಾಣವಾಗುತ್ತಿದೆ. ಈ ನಿರ್ಮಾಣ ಕಾರ್ಯವನ್ನು ಗುತ್ತಿಗೆಗೆ ನೀಡಲಾಗಿತ್ತು. ಸಕ್ಕರೆ ಕಾರ್ಖಾನೆಯಲ್ಲಿ ಸ್ಥಳೀಯರು ಕೆಲಸ ಮಾಡುತ್ತಿದ್ದರೆ ಈ ಎಥೆನಾಲ್‌ ಘಟಕದ ನಿರ್ಮಾಣ ಕಾರ್ಯದಲ್ಲಿ ಸ್ಥಳೀಯರು ಇಲ್ಲ. ರಾಯಚೂರು, ಕಲಬುರಗಿ, ಕೊಪ್ಪಳ ಸಹಿತ ಬೇರೆ ಬೇರೆ ಜಿಲ್ಲೆಯವರು ಮತ್ತು ಪಶ್ಚಿಮ ಬಂಗಾಳದ ಕಾರ್ಮಿಕರು ಇದ್ದಾರೆ. ಈ ಕಾರ್ಮಿಕರಿಗೆ ಕುಕ್ಕವಾಡದಲ್ಲಿಯೇ ತಾತ್ಕಾಲಿಕ ಟೆಂಟ್‌ ಹಾಕಿ ಕೊಡಲಾಗಿದೆ. ಬಹುತೇಕ ಕಾರ್ಮಿಕರು ಕುಟುಂಬ ಸಹಿತ ಇಲ್ಲಿ ವಾಸವಾಗಿದ್ದಾರೆ.

ದೀಪಾವಳಿಗೆ ಬಹುತೇಕ ಕಾರ್ಮಿಕರು ಊರಿಗೆ ಹೋಗಿದ್ದರೆ ಎಥೆನಾಲ್‌ ಘಟಕದ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿರುವವರು ಹೋಗಿರಲಿಲ್ಲ. ರಜೆ ದಿನದಲ್ಲಿ ಹೆಚ್ಚುವರಿಯಾಗಿ ಒಟಿ ವೇತನ ಸಿಗುವುದರಿಂದ ಹಬ್ಬ ಮರೆತು ಕೆಲಸ ಮಾಡುತ್ತಿದ್ದರು. ಪಿಲ್ಲರ್‌ ನಿರ್ಮಾಣಗೊಂಡು ಅದರ ಮೇಲೆ ಕಾಂಕ್ರೀಟ್‌ ಹಾಕುವ ಕೆಲಸ ಗುರುವಾರ ನಡೆಯುತ್ತಿತ್ತು. ಸುಮಾರು 15 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಒಂದು ಪಿಲ್ಲರ್‌ ಕುಸಿದು ನಿರ್ಮಾಣ ಹಂತದ ಚಾವಣಿಯೇ ಕೆಳಗೆ ಬಿದ್ದಿದೆ.

15 ಮಂದಿ ಕಾರ್ಮಿಕರ ಇದರ ನಡುವೆ ಸಿಲುಕಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅಡಿಯಲ್ಲಿ ಸಿಲುಕಿದವರನ್ನು ಹೊರತೆಗೆದಿದ್ದಾರೆ. ರಾಯಚೂರಿನ ಮಾನಪ್ಪ ಮತ್ತು ಬಸಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪಶ್ಚಿಮ ಬಂಗಾಳದ ಮಜೀದ್‌ ಆಸ್ಪತ್ರೆಗೆ ಸಾಗಿಸುತ್ತಿರುವಾಗ ಅಸುನೀಗಿದರು. ಅಮರಪ್ಪ, ರಾಮಣ್ಣ, ಶಿವಣ್ಣ, ಪ್ರವೀಣ ಕೋಲ್ಕತದ ಮಿನಾಲ್‌ ಸ್ಥಿತಿ ಗಂಭೀರವಾಗಿದೆ. ಉಳಿದವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

‘ಹಬ್ಬಕ್ಕೆ ರಜೆ ಮಾಡಿ ಊರಿಗೆ ಹೋಗಿ ಎಂದು ಸಾಹೆಬ್ರು ಹೇಳಿದರೂ ಹೋಗದೇ ನಿಂತಿದ್ದರು. ಹಬ್ಬಕ್ಕೆ ತೆರಳಿದ್ದರೆ ಪ್ರಾಣ ಉಳಿಯುತ್ತಿತ್ತು’ ಎಂದು ಘಟಕ ನಿರ್ಮಾಣದ ಉಸ್ತುವಾರಿ ಈಶಣ್ಣ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT