ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವದಾಸಿ ಪದ್ಧತಿ ನಿರ್ಮೂಲನೆಗೆ ಪಣ ತೊಡಿ: ಕೆಂಗಬಾಲಯ್ಯ ಸಲಹೆ

Last Updated 14 ಫೆಬ್ರುವರಿ 2021, 3:17 IST
ಅಕ್ಷರ ಗಾತ್ರ

ದಾವಣಗೆರೆ: ದೇವದಾಸಿ ಪದ್ಧತಿ ದೇವರು ರೂಪಿಸಿದ್ದಲ್ಲ. ಯಾವುದೋ ಒಂದು ಸಂದರ್ಭದಲ್ಲಿ ಮನುಷ್ಯ ಮಾಡಿಕೊಂಡಿರುವ ಅನಿಷ್ಟ ಪದ್ಧತಿಯಾಗಿದ್ದು, ಇದರ ನಿರ್ಮೂಲನೆಗೆ ಪಣ ತೊಡಬೇಕಾಗಿದೆ ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕೆಂಗಬಾಲಯ್ಯ ಹೇಳಿದರು.

ನಗರದ ರೋಟರಿ ಬಾಲ ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ದೇವದಾಸಿ ಪುನರ್ವಸತಿ ಯೋಜನೆಯಿಂದ ದೇವದಾಸಿ ಮಹಿಳೆಯರಿಗೆಶನಿವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮವನ್ನುಉದ್ಘಾಟಿಸಿ ಅವರು ಮಾತನಾಡಿದರು.

‘ಕಾನೂನಿನ ಪರಿವೇ ಇಲ್ಲದೆ ಸಾಕಷ್ಟು ಅನಿಷ್ಟ ಪದ್ಧತಿಗಳು ನಮ್ಮ ಸಮಾಜದಲ್ಲಿ ಆಚರಣೆಯಲ್ಲಿದ್ದು, ಎಲ್ಲಿ ಕಾನೂನು ಅರಿವು ಇರುತ್ತದೆಯೊ ಅಲ್ಲಿ ಅಪರಾಧಗಳಿಗೆ ಅವಕಾಶವಿರುವುದಿಲ್ಲ. ಕಾನೂನಿನಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನವನ್ನು ಕಲ್ಪಿಸಿದ್ದು, ದಬ್ಬಾಳಿಕೆ ಹಾಗೂ ಮೂಢನಂಬಿಕೆಗೆ ಮಹಿಳೆಯನ್ನು ಬಲಿಯಾಗಿಸುವ ಕ್ರಮ ಸರಿಯಲ್ಲ. ಇಂತಹ ಕಂದಾಚಾರಗಳ ವಿರುದ್ಧ ಪ್ರತಿಯೊಬ್ಬರೂ ದನಿ ಎತ್ತಬೇಕಾಗಿದೆ’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ದೇವದಾಸಿ ಪುನರ್ವಸತಿ ಯೋಜನೆಯ ಯೋಜನಾಧಿಕಾರಿ ಜೆ. ಮೋಕ್ಷಪತಿ, ‘2007-08ರ ಸಾಲಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ನಡೆಸಿದ ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ 1610 ಮಾಜಿ ದೇವದಾಸಿ ಮಹಿಳೆಯರನ್ನು ಗುರುತಿಸಿದ್ದು. ಅವರ ವಿವರವನ್ನು ಪಟ್ಟಿ ಮಾಡಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಅವರಿಗೆ ಕಾನೂನು ಅರಿವು ನೀಡುವುದರ ಜೊತೆಗೆ ಪುನರ್ವಸತಿ ಕಲ್ಪಿಸಿ ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ’ ಎಂದರು.

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಎಚ್. ಅರುಣ್ ಕುಮಾರ್ ಮಾತನಾಡಿ, ‘ದೇಶದಲ್ಲಿ ದೇವದಾಸಿ, ಬಾಲ್ಯವಿವಾಹ, ಮಲ ಹೊರುವಂತಹ ಅನಿಷ್ಟ ಪದ್ದತಿಗಳು ಜೀವಂತವಾಗಿರುವುದು ನಾಗರಿಕ ಸಮಾಜಕ್ಕೆ ಶೋಭೆಯಲ್ಲ. ದೇವದಾಸಿ ಮಹಿಳೆಯರಿಗೆ ವಸತಿ ಕಲ್ಪಿಸಿ ಅವರಲ್ಲಿರುವ ಕೌಶಲ ಅಭಿವೃದ್ಧಿಗೆ ನೆರವು ನೀಡಬೇಕು’ ಎಂದರು.

ಜಿಲ್ಲಾ ದೇವದಾಸಿ ಪುನರ್ವಸತಿ ಯೋಜನಾ ಅನುಷ್ಠಾನಾಧಿಕಾರಿ ಪ್ರಜ್ಞಾ ಸ್ವಾಗತಿಸಿದರು. ವಕೀಲರಾದ ಎನ್.ಎಂ. ಅಂಜನೇಯ ಗೂರುಜಿ, ಉಷಾ ಕೈಲಾಸದ್, ಸ್ಲಂ ಜನಾಂದೋಲನದ ರೇಣುಕಾ ಎಲ್ಲಮ್ಮ ಇದ್ದರು. ಯೋಜನಾ ಅನುಷ್ಠಾನಾಧಿಕಾರಿ ಉಮಾಓಂಕಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT