ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವದಾಸಿ ಪದ್ಧತಿ: ಪ್ರೋತ್ಸಾಹಿಗಳಿಗೆ ಶಿಕ್ಷೆ ವಿಧಿಸಿ

ಮಹಿಳಾ ವಿಮೋಚನಾ ಸಂಘದ ರಾಜ್ಯ ಗೌರವಾಧ್ಯಕ್ಷ ಯು. ಬಸವರಾಜ್‌ ಆಗ್ರಹ
Last Updated 3 ಜನವರಿ 2023, 6:03 IST
ಅಕ್ಷರ ಗಾತ್ರ

ದಾವಣಗೆರೆ: ದೇವದಾಸಿ ಪದ್ಧತಿಯನ್ನು ಮುಂದುವರಿಸಿಕೊಂಡು ಬರುತ್ತಿರುವವರು, ಈ ಅನಿಷ್ಟ ಪದ್ಧತಿಗೆ ಪ್ರೋತ್ಸಾಹ ನೀಡುವವರನ್ನು ಪತ್ತೆ ಹಚ್ಚಿ ಶಿಕ್ಷೆ ವಿಧಿಸುವವರೆಗೆ ದೇವದಾಸಿ ಪದ್ಧತಿ ನಿರ್ಮೂಲನೆ ಸಾಧ್ಯವಿಲ್ಲ ಎಂದು ದೇವದಾಸಿ ಮಹಿಳಾ ವಿಮೋಚನಾ ಸಂಘದ ರಾಜ್ಯ ಗೌರವಾಧ್ಯಕ್ಷ ಯು. ಬಸವರಾಜ್‌ ಅಭಿಪ್ರಾಯಪಟ್ಟರು.

ದೇವದಾಸಿ ಮಹಿಳೆಯರ 4ನೇ ಜಿಲ್ಲಾ ಸಮಾವೇಶವನ್ನು ಇಲ್ಲಿನ ರೋಟರಿ ಬಾಲಭವನದಲ್ಲಿ ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಾಯ್ದೆಗೆ ತಿದ್ದುಪಡಿ ತಂದು ಈ ಅನಿಷ್ಟ ಪದ್ಧತಿಯನ್ನು ಪ್ರೋತ್ಸಾಹಿಸುವವರಿಗೆ ಶಿಕ್ಷೆ ವಿಧಿಸಬೇಕು. ದೇವದಾಸಿಯರಿಗೆ ಅವರಿಂದಲೇ ಪರಿಹಾರ ಕೊಡಿಸಬೇಕು ಎಂದು ಆಗ್ರಹಿಸಿದರು.

ಕೊಪ್ಪಳದಲ್ಲಿ ಈಚೆಗೆ ಮುತ್ತುಕಟ್ಟಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಯನ್ನು, ಆಕೆಯ ಮನೆಯವರನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಗೆ ಶಿಕ್ಷೆ ನೀಡಲಿ. ಜತೆಗೆ ಈ ಪದ್ಧತಿ ಯನ್ನು ದೇವಸ್ಥಾನಗಳಲ್ಲಿ ಮುಂದುವರಿಸಿಕೊಂಡು ಹೋಗುವವರ ಮೇಲೂ ಕ್ರಮ ಆಗಬೇಕು. 40 ವರ್ಷಗಳ ಹಿಂದೆ ದೇವದಾಸಿ ಪದ್ಧತಿಯನ್ನು ನಿಷೇಧಿಸಿ ಕಾಯ್ದೆ ರೂಪಿಸಲಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಪದ್ಧತಿ ಮುಂದುವರಿದಿದ್ದು ಹೇಗೆ ಎಂಬುದನ್ನು ಅವಲೋಕಿಸಬೇಕು. ಈ ಪದ್ಧತಿಯ ಹೆಸರಲ್ಲಿ ದಲಿತರ ಹೆಣ್ಣುಮಕ್ಕಳು ಶೋಷಣೆಗೆ ಒಳಗಾಗುತ್ತಿದ್ದಾರೆ. ಅಂತಹ ಪ್ರಕರಣಗಳು ಪತ್ತೆಯಾದರೆ ಅವರ ಮೇಲೆಯೇ ಕ್ರಮ ಕೈಗೊಳ್ಳಲಾಗುತ್ತದೆ. ಇದನ್ನು ಮುಂದುವರಿಸಿಕೊಂಡು ಬಂದಿರುವ ಬಲಾಢ್ಯರ ಮೇಲೆ ಇಲ್ಲಿಯವರೆಗೆ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇವದಾಸಿ ಪದ್ಧತಿ ಈಗಲೂ ಕದ್ದುಮುಚ್ಚಿ ನಡೆಯುತ್ತಿದೆ. ಈ ಸಾಮಾಜಿಕ ದೌರ್ಜನ್ಯದ ವಿರುದ್ಧ ಮುಂದೆ ಯಾವ ರೀತಿ ಹೋರಾಟ ಮಾಡಬೇಕು ಎಂಬುದನ್ನು ರಾಜ್ಯ ಮಟ್ಟದ ಸಮ್ಮೇಳನದಲ್ಲಿ ತೀರ್ಮಾನಿಸಲಾಗುವುದು. ಜ.29ರಂದು ದಾವಣಗೆರೆಯಲ್ಲಿಯೇ ರಾಜ್ಯಮಟ್ಟದ ಸಮಾವೇಶ ನಡೆಯಲಿದೆ ಎಂದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ಮಾಳಮ್ಮ ಮಾತನಾಡಿ, ‘ದೇವದಾಸಿಯರ ಮಕ್ಕಳಿಗೆ ಅಪ್ಪ ಯಾರು ಎಂಬುದು ಗೊತ್ತಿರುತ್ತದೆ. ಅದನ್ನು ಹೇಳಿಕೊಳ್ಳುವಂತಿಲ್ಲ. ಆ ವ್ಯಕ್ತಿಗೂ ಇವರು ತನ್ನ ಮಕ್ಕಳು ಎಂದು ಗೊತ್ತಿರುತ್ತದೆ. ಆದರೆ, ಜವಾಬ್ದಾರಿ ವಹಿಸಿಕೊಂಡಿರುವುದಿಲ್ಲ’ ಎಂದರು.

2007–08ರಲ್ಲಿ ದೇವದಾಸಿಯರ ಸಮೀಕ್ಷೆ ನಡೆಯಿತು. ಆಗ 35 ವರ್ಷಗಳ ಮೇಲಿನವರ ಸರ್ವೆಯಷ್ಟೇ ನಡೆಯಿತು. ಅದಕ್ಕಿಂತ ಸಣ್ಣವರು ಈಗ 50 ವಯಸ್ಸಿನ ಹತ್ತಿರ ಬಂದಿದ್ದಾರೆ. ಅವರ, ಮಕ್ಕಳ ಸಮೀಕ್ಷೆ, ಪುನರ್ವಸತಿ ಆಗಿಲ್ಲ. ಸಮೀಕ್ಷೆ ನಡೆಸಿ ₹ 3,000 ಪಿಂಚಣಿ ನೀಡಬೇಕು. 5 ಎಕರೆ ಭೂಮಿ ನೀಡಬೇಕು ಎಂಬುದು ಸಂಘದ ಆಗ್ರಹ. ಸರ್ಕಾರವು ವರ್ಷಕ್ಕೆ 20 ಮಂದಿಗೆ ಭೂಮಿ ನೀಡುವುದಾಗಿ ಹೇಳಿದೆ. ಕೆಲವು ಜಿಲ್ಲೆಗಳಲ್ಲಿ 9,000ಕ್ಕೂ ಅಧಿಕ ದೇವದಾಸಿಯರಿದ್ದಾರೆ. ವರ್ಷಕ್ಕೆ 20 ಜನಕ್ಕೆ ನೀಡಿದರೆ ಇಷ್ಟು ಮಂದಿಗೆ ಭೂಮಿ ಸಿಗುವಾಗ ನಾಲ್ಕೈದು ಶತಮಾನಗಳು ಮುಗಿದಿರುತ್ತವೆ. ಇಂಥ ಹಾಸ್ಯಾಸ್ಪದ ಪ್ರಕ್ರಿಯೆಯನ್ನು ಸರ್ಕಾರ ಕೈ ಬಿಡಬೇಕು. ಎಲ್ಲರಿಗೂ ಶೀಘ್ರದಲ್ಲಿ ಭೂಮಿ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯಾಧ್ಯಕ್ಷೆ ರೇಣುಕಮ್ಮ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅಧ್ಯಕ್ಷ ಭರಮಪ್ಪ ಎ., ಜಿಲ್ಲಾ ಮುಖಂಡರಾದ ಹಿರಿಯಮ್ಮ, ಕರಿಬಸಮ್ಮ, ಹೊನ್ನಮ್ಮ, ಚೆನ್ನಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT