ಶನಿವಾರ, ಜನವರಿ 18, 2020
21 °C
ಸರ್ವ ಶಿಕ್ಷಣ ಅಭಿಯಾನದ ಉಪಯೋಜನಾ ಸಮನ್ವಯಾಧಿಕಾರಿ ಎಂ.ಮಂಜುನಾಥ ಸ್ವಾಮಿ ಸಲಹೆ

ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಡಿ.26ರಂದು ಸಂಭವಿಸುವ ಕಂಕಣ ಸೂರ್ಯಗ್ರಹಣವನ್ನು ಮುಂದಿನ 45 ವರ್ಷಗಳವರೆಗೆ ನೋಡಲು ಆಗುವುದಿಲ್ಲ. ಆದ್ದರಿಂದ ಇದು ಮಹತ್ವ ಪಡೆದಿದೆ. ಮಕ್ಕಳಿಗೆ ಗ್ರಹಣದ ಪ್ರಾಮುಖ್ಯತೆ ತಿಳಿಸಿಕೊಡಬೇಕು ಎಂದು ಸರ್ವ ಶಿಕ್ಷಣ ಅಭಿಯಾನದ ಉಪಯೋಜನಾ ಸಮನ್ವಯಾಧಿಕಾರಿ ಎಂ. ಮಂಜುನಾಥ ಸ್ವಾಮಿ ಶಿಕ್ಷಕರಿಗೆ ಸಲಹೆ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಜಿಲ್ಲಾ ಸಮಿತಿ, ಮನೆ ಮನೆ ವಿಜ್ಞಾನ ದಾಸೋಹ ಕಾರ್ಯಕ್ರಮ ಬಳಗದ ಆಶ್ರಯದಲ್ಲಿ ಜೆ.ಎಚ್‌. ಪಟೇಲ್‌ ಕಾಲೇಜಿನಲ್ಲಿ ಶಿಕ್ಷಕರಿಗೆ ಶನಿವಾರ ಆಯೋಜಿಸಿದ್ದ ಉಂಗುರ ಸೂರ್ಯಗ್ರಹಣ ಕುರಿತಾದ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮಕ್ಕಳಿಗೆ ಇಂದಿನಿಂದಲೇ ವೈಜ್ಞಾನಿಕ ಚಿಂತನೆ ಬೆಳೆಸಿದರೆ ಮುಂದೆ ಚೆನ್ನಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಶಿಕ್ಷಕರು ಶಾಲೆ ಹಾಗೂ ಮನೆಗಳಲ್ಲಿ ಕಂಕಣ ಸೂರ್ಯಗ್ರಹಣದ ಪ್ರಾಮುಖ್ಯತೆಯನ್ನು ತಿಳಿಸಿಕೊಡಬೇಕು. ವಿಷಯಗಳನ್ನು ತಿಳಿದುಕೊಂಡಿರುವ ಶಿಕ್ಷಕರು ಅದನ್ನು ಕಾರ್ಯಗತಗೊಳಿಸುವಲ್ಲಿ ವಿಫಲರಾಗಿದ್ದಾರೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿನಂತೆ ಶಿಕ್ಷಕಿಯರು ಹಾಗೂ ತಾಯಂದಿರು ಮಕ್ಕಳಿಗೆ ವಿಜ್ಞಾನದ ಬಗ್ಗೆ ಆಸಕ್ತಿಯನ್ನು ಮೂಡಿಸಬೇಕು’ ಎಂದು ಸಲಹೆ ನೀಡಿದರು.

‘ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಹೊರಗಡೆ ಬರುವುದಿಲ್ಲ. ಅಲ್ಟ್ರಾವೈಲೇಟ್ ಕಿರಣಗಳು ಮಗುವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ ಎಂಬುದೇ ಇದಕ್ಕೆ ಕಾರಣ. ಇತಿಹಾಸ, ಪುರಾಣದಲ್ಲಿ ಹೇಳಿರುವುದು ತಪ್ಪಲ್ಲ. ಅದಕ್ಕೆ ಫಿಲ್ಟರ್ ಕನ್ನಡಕ ಧರಿಸಿ ಸೂರ್ಯಗ್ರಹಣವನ್ನು ವೀಕ್ಷಿಸಬಹುದು. ಅದರಂತೆ ನಮ್ಮ ಚಿಂತನೆಗೂ ವೈಜ್ಞಾನಿಕ ಫಿಲ್ಟರ್ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.

‘ಶಿಕ್ಷಕರು ವೈಜ್ಞಾನಿಕ ಸತ್ಯಗಳನ್ನು ತಿಳಿದುಕೊಂಡು ಮಕ್ಕಳನ್ನೂ ವೈಜ್ಞಾನಿಕ ಚಿಂತನೆಗೆ ಹಚ್ಚಬೇಕು. ವಿದ್ಯಾರ್ಥಿಗಳಲ್ಲಿನ ಮೌಢ್ಯವನ್ನು ಹೋಗಲಾಡಿಸಿ, ಶಿಕ್ಷಕರು ಶಾಲೆಗಳಲ್ಲಿ ಗ್ರಹಣ ವೀಕ್ಷಣೆಗೆ ಅವಕಾಶ ಮಾಡಿಕೊಡಬೇಕು. ಮಕ್ಕಳನ್ನು ಮನೆಯ ಒಳಗಡೆ ಕೂಡಿ ಹಾಕಿದರೆ ಮಕ್ಕಳಿಗೆ ಗ್ರಹಣದ ಮಹತ್ವ ತಿಳಿಯುವುದಿಲ್ಲ’ ಎಂದು ಹೇಳಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸಹಕಾರ್ಯದರ್ಶಿ ಅಂಗಡಿ ಸಂಗಪ್ಪ ಮಾತನಾಡಿ, ‘ವೈಜ್ಞಾನಿಕವಾಗಿ ನಾವು ಸಾಕಷ್ಟು ಮುಂದುವರೆದಿದ್ದರೂ ಮೂಢನಂಬಿಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾಲಘಟ್ಟದಲ್ಲಿ ನಾವು ಇದ್ದೇವೆ. ಗ್ರಹಣ ಪ್ರಕೃತಿಯ ಸಹಜ ಪ್ರಕ್ರಿಯೆ. ‘ನೆರಳು ಬೆಳಕಿನಾಟ’. ಜನರು ಇದನ್ನು ಅರಿತುಕೊಳ್ಳಬೇಕು’ ಎಂದು ಹೇಳಿದರು.

ಪರಿಷತ್ ಸದಸ್ಯೆ ಮಮತಾ ನಾಗರಾಜ್ ‘ಜ್ಞಾನ ಇದೆ, ಸಮಸ್ಯೆ ಬಂದರೆ ಅಧೀರನಾಗಿ ಮಾಟ, ಮಂತ್ರ, ಜ್ಯೋತಿಷಿಗಳ ಮೊರೆ ಹೋಗುತ್ತಾರೆ. ಡೋಂಗಿ ಜ್ಯೋತಿಷಿಗಳು ಕಷ್ಟ ಇದೆ ಎಂದು ಹೇಳಿ ಲಾಭ ಮಾಡಿಕೊಳ್ಳುತ್ತಾರೆ. ಆದ್ದರಿಂದ ಜನರು ಮೂಢನಂಬಿಕೆಯಿಂದ ಹೊರಬರಬೇಕು. ಶಿಕ್ಷಕರು ಮಕ್ಕಳ ಪ್ರಶ್ನೆಗೆ ಉತ್ತರಿಸಬೇಕು. ಆ ಮೂಲಕ ಮಕ್ಕಳಿಗೆ ಜ್ಞಾನವನ್ನು ಹೆಚ್ಚಿಸಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಕಾರ್ಯದರ್ಶಿ ದೊಗ್ಗಳ್ಳಿಗೌಡ್ರ ಪುಟ್ಟರಾಜು ಮಾತನಾಡಿ, ‘ಮನುಕುಲದ ಆರಂಭದಿಂದಲೂ ಪ್ರಾಚೀನ ಇತಿಹಾಸ ಸೂರ್ಯ ಮನುಷ್ಯನಿಗೆ ಕುತೂಹಲದ ಸಂಗತಿ. ಸೂರ್ಯನಿಲ್ಲದೇ ಏನು ಇಲ್ಲ. ಸೂರ್ಯಗ್ರಣ ಮಾಹಿತಿ ಕುರಿತ ಮಾಹಿತಿ ಕಾರ್ಯಕ್ರಮ ಅರ್ಥಪೂರ್ಣವಾಗಿದ್ದು, ಮಕ್ಕಳ ಮನಸ್ಸಿಗೆ ಮುಟ್ಟಿಸುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.

ಮನೆ ಮನೆ ವಿಜ್ಞಾನ ದಾಸೋಹ ಬಳಗದ ಸಂಚಾಲಕ ಎಂ.ಟಿ. ಶರಣಪ್ಪ, ಪರಿಷತ್ ಕಾರ್ಯದರ್ಶಿ ಎಚ್.ಸಂಗಪ್ಪ, ಕಾರ್ಯದರ್ಶಿ ಎಂ.ಗುರುಸಿದ್ದಸ್ವಾಮಿ ಕಾರ್ಯಕ್ರಮದಲ್ಲಿ ಇದ್ದರು. ಕೆ. ಸಿದ್ದೇಶ್ ಸ್ವಾಗತಿಸಿದರು.

ಪ್ರತಿಕ್ರಿಯಿಸಿ (+)