ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹಿಂಸೆ ಪಾಲಿಸುವ ಸಾದರೂ ಜೈನರೇ: ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಅಭಿಪ್ರಾಯ

Published 10 ಡಿಸೆಂಬರ್ 2023, 14:50 IST
Last Updated 10 ಡಿಸೆಂಬರ್ 2023, 14:50 IST
ಅಕ್ಷರ ಗಾತ್ರ

ದಾವಣಗೆರೆ: ‘ರಾಜ್ಯದ ವಿವಿಧೆಡೆ ಇರುವ ಸಾದರು, ಶ್ರಾವಕರು ಸೇರಿದಂತೆ ಅಹಿಂಸೆಯನ್ನು ಪಾಲಿಸುವವರೆಲ್ಲರೂ ಜೈನರಾಗಿದ್ದು, ನಾವು ಜಬರ್‌ದಸ್ತ್‌ ಆಗಿ (ಬಲವಂತವಾಗಿ) ಧರ್ಮ ಪರಿವರ್ತನೆ ಮಾಡಿದರೆ ರಾಜ್ಯದಲ್ಲಿ ಜೈನರ ಸಂಖ್ಯೆ 20 ಲಕ್ಷದಿಂದ 25 ಲಕ್ಷ ದಾಟುತ್ತದೆ’ ಎಂದು ಶ್ರೀಕ್ಷೇತ್ರ ಹೊಂಬುಜ ಮಠದ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಭಗವಾನ್ ಶ್ರೀ 1008 ಕಲ್ಪದ್ರುಮ ಆದಿನಾಥ ಜಿನಮಂದಿರದ ದಶಮಾನೋತ್ಸವ ಹಾಗೂ ಮಹಾವೀರ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಭಾನುವಾರ ಅವರು ಮಾತನಾಡಿದರು.

‘ದಾವಣಗೆರೆ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಇರುವ ಸಾದರು, ಶ್ರಾವಕರು ಮೂಲತಃ ಜೈನರು. ಇವರು ಕಾಲಾಂತರದಲ್ಲಿ ಬದಲಾಗಿರುವವರು. ಕೇರಳ ಹಾಗೂ ಮೈಸೂರು ಗಡಿಯ ನಾಮಧಾರಿ ಗೌಡರು, ಮಲೆನಾಡಿನ ಒಕ್ಕಲಿಗರು, ಹುಬ್ಬಳ್ಳಿ, ಕಲಬುರಗಿ ಭಾಗದಲ್ಲಿರುವ ದೇಶಪಾಂಡೆ, ದೇಸಾಯಿ ಮತ್ತು ಪಾಟೀಲರು ಮೊಗಲರ ಕಾಲದಲ್ಲಿ ಧರ್ಮ ಪರಿವರ್ತನೆ ಮಾಡಿಕೊಂಡಿದ್ದಾರೆ. ಮೂಲತಃ ಇವರೆಲ್ಲರೂ ಜೈನರೇ’ ಎಂದರು.

‘ಇವರ ಹೃದಯ ಪರಿವರ್ತನೆ ಮಾಡಿ, ಜಿನ ಧರ್ಮ ಪಾಲಿಸಲು ಹೇಳಬಹುದೇ ಹೊರತು ಪ್ರಮಾಣಪತ್ರ ಕೊಟ್ಟು ಬದಲಾಯಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿ ಈಗ 3 ಲಕ್ಷದಿಂದ 4 ಲಕ್ಷ ಜೈನರು ಇರಬಹುದು. ನಾವು ಯಾವುದೇ ಆಮಿಷಗಳನ್ನು ಒಡ್ಡಿ ಧರ್ಮ ಪರಿವರ್ತನೆ ಮಾಡುವುದಿಲ್ಲ. ಈ ನೆಲದ ಸಂವಿಧಾನಕ್ಕೆ ಗೌರವ ಕೊಡುತ್ತೇವೆ’ ಎಂದು ಹೇಳಿದರು.

‘ಮಹಾವೀರರ ಕಾಲದಲ್ಲಿ ದೇಶದಲ್ಲಿ ಜೈನರ ಸಂಖ್ಯೆ 10 ಕೋಟಿಗಿಂತಲೂ ಹೆಚ್ಚಿತ್ತು. ಅವರೆಲ್ಲಾ ಎಲ್ಲಿ ಹೋದರು. ಡಿಎನ್ಎ ಪರೀಕ್ಷೆ ಮೂಲಕ ಜೈನರನ್ನು ಪತ್ತೆಹಚ್ಚಬಹುದು. ನಮ್ಮ ಸಮುದಾಯ ರಾಜಕೀಯವಾಗಿ ಪ್ರಬಲವಾಗಿಲ್ಲ. ಆದ್ದರಿಂದ ಈ ಕುರಿತು ಗಟ್ಟಿಯಾಗಿ ಧ್ವನಿ ಎತ್ತಲು ಆಗುತ್ತಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಸಾದರ ಲಿಂಗಾಯತರು ಜೈನ ಧರ್ಮದಿಂದ ಮತಾಂತರಗೊಂಡಿರಬಹುದು. ವೀರಶೈವ ಲಿಂಗಾಯತ ಸಮಾಜದವರು ಇರುವ ಹಲವು ಗ್ರಾಮಗಳಲ್ಲಿ ಜೈನ ಬಸದಿಗಳಿರುವುದು ಈ ಅನುಮಾನಕ್ಕೆ ಪುಷ್ಟಿ ನೀಡುವಂತಿದೆ’ ಎಂದು ಹರಿಹರ ಶಾಸಕ ಬಿ.ಪಿ.ಹರೀಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT